ಉಘೇ, ಉಘೇ ಮಾದಪ್ಪ: ಮಲೆ ಮಹದೇಶ್ವರದಲ್ಲಿ ಡಿಕೆಶಿ ದಂಡುಕೋಲು ಸೇವೆ
ಚಾಮರಾಜನಗರ, ಏಪ್ರಿಲ್ 24: ಇದೇ ಮೊದಲ ಬಾರಿಗೆ ಗುರುವಾರ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಲೆ ಮಹದೇಶ್ವರ ಬೆಟ್ಟದ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದಂಡುಕೋಲು ಸೇವೆ ಸಲ್ಲಿಸಿದರು. ಮಧ್ಯಾಹ್ನ 12 ಗಂಟೆಗೆ ಸಚಿವ ಸಂಪುಟ ಸಭೆ ಆರಂಭವಾಗಲಿದೆ.
ಡಿ. ಕೆ. ಶಿವಕುಮಾರ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 'ಉಘೇ... ಉಘೇ... ಮಾದಪ್ಪ!. ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹುಲಿವಾಹನ ಮಹದೇಶ್ವರ ಬೆಳ್ಳಿರಥ ಪ್ರದಕ್ಷಿಣೆಯಲ್ಲಿ ದಂಡುಕೋಲು ಸೇವೆ ಸಲ್ಲಿಸಿದೆನು' ಎಂದು ಹೇಳಿದ್ದಾರೆ.

'ಈ ಪುಣ್ಯಸ್ಥಳದಲ್ಲಿ ನಾವು ಸಚಿವ ಸಂಪುಟ ಸಭೆಯನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಆಚಾರ-ವಿಚಾರಗಳು ಹೆಚ್ಚು ಜನರಿಗೆ ತಲುಪಬೇಕು ಎಂಬುವುದು ಇದರ ಹಿಂದಿನ ಉದ್ದೇಶ' ಎಂದು ಉಪ ಮುಖ್ಯಮಂತ್ರಿಗಳು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಬುಧವಾರ ರಾತ್ರಿ ಆಗಮನ: ಡಿ. ಕೆ. ಶಿವಕುಮಾರ್ ಬುಧವಾರ ರಾತ್ರಿಯೇ ಚಾಮರಾಜನಗರಕ್ಕೆ ಆಗಮಿಸಿದ್ದರು. ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ಸಚಿವರು ಕೆಲವೇ ಕ್ಷಣಗಳಲ್ಲಿ ಚಾಮರಾಜನಗರಕ್ಕೆ ತಲುಪಲಿದ್ದಾರೆ.
ಬುಧವಾರ ರಾತ್ರಿ ಅವರು ಬೆಟ್ಟಕ್ಕೆ ಭೇಟಿ ನೀಡಿ, ಪ್ರವೇಶ ದ್ವಾರದಲ್ಲಿ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದ್ದರು. ನಂತರ ದೀಪದಗಿರಿ ಒಡ್ಡುವಿನಲ್ಲಿ ಹುಲಿಸವಾರಿ ಮಹದೇಶ್ವರ ಸ್ವಾಮಿಗಳ 108 ಅಡಿ ಎತ್ತರದ ಬೃಹತ್ ಪ್ರತಿಮೆಗೆ ನಮಿಸಿ, ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದರು.
ಇಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚಾಮರಾಜನಗರ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳಿಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡುವ ನಿರೀಕ್ಷೆ ಇದೆ. ಇದರಲ್ಲಿ ಹಲವು ನೀರಾವರಿ ಯೋಜನೆಗಳು ಸೇರಿವೆ.
ಸಚಿವ ಸಂಪುಟ ಸಭೆಯಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳ ವಿವಿಧ ಯೋಜನೆಗಳ ಕುರಿತು ಚರ್ಚೆಗಳು ನಡೆಯಲಿವೆ. ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿ ಇಲಾಖೆಗಳ ವಿವಿಧ ಯೋಜನೆಗಳ ಕುರಿತು ಈಗಾಗಲೇ ಟಿಪ್ಪಣಿಯನ್ನು ಮಾಡಲಾಗಿದೆ. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ ಅನುಮೋದನೆ ನೀಡಲಾಗುತ್ತದೆ.
ಕಬಿನಿ ಡ್ಯಾಂ ಮುಂಭಾಗದ ದುರಸ್ತಿ, ಪಿರಿಯಾಪಟ್ಟಣ ಏತ ನೀರಾವರಿ ಕಾಲುವೆ ಮರು ವಿನ್ಯಾಸ, ಸುವರ್ಣಾವತಿ ಜಲಾಶಯದ ಎಡದಂಡೆ, ಬಲದಂಡೆ ಮತ್ತು ಉಪ ನಾಲೆಗಳ ಅಭಿವೃದ್ಧಿ ಯೋಜನೆ ಮತ್ತು ಇತರ ಹಲವು ಯೋಜನೆಗಳ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿವೆ.
ಸಭೆಯಲ್ಲಿ ಚರ್ಚೆಯಾಗುವ ಪ್ರಮುಖ ಯೋಜನೆಗಳು
* ಮೈಸೂರು ನಗರದ ಪ್ರಮುಖ ರಸ್ತೆಗಳನ್ನು 393.85 ಕೋಟಿ ರೂ. ವೆಚ್ಚದಲ್ಲಿ ವೈಟ್ ಟ್ಯಾಪಿಂಗ್
* ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ನಡೆಸಲು 92.30 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಲಭ್ಯ
* ಬದವನಾಳು ಖಾದಿ ಕೇಂದ್ರದ ಸಮಗ್ರ ಅಭಿವೃದ್ಧಿ ಯೋಜನೆ
* ಶ್ರೀರಂಗಪಟ್ಟಣ, ಬೇಲೂರು, ಹಳೆಬೀಡು ಒಳಗೊಂಡ ಪ್ರವಾಸಿ ತಾಣಗಳ ಅಭಿವೃದ್ಧಿ
* ಚಾಮರಾಜನಗರ, ಕೊಡಗು ಜಿಲ್ಲೆಯ ಹಲವು ಏತ ನೀರಾವರಿ ಯೋಜನೆಗಳು
* ಕೋವಿಡ್ ಅಕ್ರಮ ಕುರಿತು ನ್ಯಾ. ಮೈಕಲ್ ಡಿ. ಕುನ್ಹಾ ವಿಚಾರಣಾ ಆಯೋಗ ಸಲ್ಲಿಸಿರುವ ವರದಿ












Click it and Unblock the Notifications