ಪಿಎಸ್‌ಐ ಹಗರಣ; ತನಿಖೆ ವಿಳಂಬಕ್ಕೆ ಡಿ. ಕೆ. ಶಿವಕುಮಾರ್ ಕಿಡಿ
ಬೆಂಗಳೂರು ಮೇ 03: "ಮಾಧ್ಯಮಗಳಲ್ಲಿ ಭ್ರಷ್ಟಾಚಾರದ ವಿಚಾರ ಪ್ರಕಟವಾಗುತ್ತಿದ್ದರೂ, ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ಕಿಡಿಕಾರಿದರು.
ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ವಿಚಾರಣೆಗೆ ಕರೆಸಿದ್ದಾಗ ದರ್ಶನ್ ಗೌಡ ಯಾವ ಹೇಳಿಕೆ ಕೊಟ್ಟಿದ್ದಾನೆ?. ಆತನನ್ನು ಯಾಕೆ ಪೂರ್ಣಪ್ರಮಾಣದಲ್ಲಿ ವಿಚಾರಣೆ ಮಾಡದೆ ಬಿಟ್ಟು ಕಳುಹಿಸಲಾಯಿತು?" ಎಂದರು.
"ಈ ವಿಚಾರವಾಗಿ ಯಾವುದೇ ಮಾಹಿತಿ ಏಕೆ ನೀಡಿಲ್ಲ?. ಆತನ ವಿಚಾರಣೆ ಮಾಡಿದರೆ ಸಚಿವರ ಸಂಪರ್ಕ ಬಹಿರಂಗವಾಗುತ್ತದೆ? ಎಂಬ ಕಾರಣಕ್ಕೆ ಆತನನ್ನು ಬಿಟ್ಟು ಕಳುಹಿಸಲಾಗಿದೆ. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡಿದ್ದೇಕೆ?. ರಾಮನಗರವನ್ನು ಸ್ವಚ್ಛ ಮಾಡುತ್ತೇನೆ ಎಂದು ಬಂದ ಅಶ್ವತ್ಥ ನಾರಾಯಣ ಹೀಗೆಯೇ ಸ್ವಚ್ಛ ಮಾಡಿರುವುದೇ?" ಎಂದು ಕಿಡಿಕಾರಿದರು.

ಬಸವಣ್ಣನವರ ಸಿದ್ಧಾಂತವೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ: "ಇಂದು ದೇಶದ ಇತಿಹಾಸದಲ್ಲಿ ಒಂದು ಪವಿತ್ರ ದಿನ. ಬಸವಣ್ಣನವರ ಜಯಂತಿ, ರಂಜಾನ್ ಹಬ್ಬವನ್ನು ಆಚರಿಸುತ್ತಿದ್ದೇವೆ. ನಾವು ಎಲ್ಲ ಧರ್ಮಗಳನ್ನು ಗೌರವ ಕೊಡುತ್ತೇವೆ. ಅವರ ಆಚಾರ- ವಿಚಾರಗಳನ್ನು ಗೌರವಿಸುತ್ತೇವೆ. ರಾಜ್ಯದ ಉನ್ನತ ಅಭಿವೃದ್ಧಿಗೆ, ಸಾಮಾಜಿಕ ಸಾಮರಸ್ಯಕ್ಕೆ ಇದು ದಾರಿದೀಪ" ಎಂದು ತಿಳಿಸಿದರು.
"ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಬಸವಣ್ಣನವರ ಮಾರ್ಗದರ್ಶನ, ವಚನಗಳು ಪ್ರತಿಯೊಂದು ಕುಟುಂಬಕ್ಕೆ, ಸಮಾಜಕ್ಕೆ ದಾರಿದೀಪ. ಎಲ್ಲರೂ ಒಟ್ಟಾಗಿ ಸಮರಸ್ಯದಿಂದ ಬದುಕು ನಡೆಸಬೇಕು ಎಂದು ಪ್ರಾರ್ಥಿಸುತ್ತೇನೆ" ಎಂದರು.

ರಂಜಾನ್ ಹಬ್ಬದ ಪವಿತ್ರ ದಿನ: "ಸಮಾಜದ ಶಾಂತಿಗಾಗಿ ಎಲ್ಲರೂ ಸಾಮೂಹಿಕ ಪ್ರಾರ್ಥನೆ ಮಾಡಿದ್ದೇವೆ. ಇಂದೇ ಬಸವಣ್ಣನವರ ಜಯಂತಿ ಕೂಡ ಬಂದಿದೆ. ಈ ವೈವಿಧ್ಯತೆಯೇ ನಮ್ಮ ದೇಶದ ದೊಡ್ಡ ಆಸ್ತಿ. ನಾನು ಅವರಿಗೆ ಈದ್ ಮುಬಾರಕ್ ಶುಭಾಶಯಗಳನ್ನು ಸಲ್ಲಿಸಿದ್ದೇನೆ. ನಿಮ್ಮ ಜೊತೆ ನಾವಿದ್ದೇವೆ, ನೀವು ನೋವು ಅನುಭವಿಸುತ್ತಿದ್ದು, ನಮಗೆ ದುಃಖವಾಗುತ್ತಿದೆ. ನಿಮ್ಮ ಭಾವನೆಗಳಿಗೆ, ವ್ಯವಹಾರಕ್ಕೆ ಸಮಸ್ಯೆಗಳಾಗುತ್ತಿವೆ. ಅದನ್ನು ನಿವಾರಿಸುವ, ನಿಮಗೆ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ. ಪರಿಹಾರ ಹುಡುಕುತ್ತಿದ್ದೇವೆ. ಭಗವಂತ ನಿಮಗೆ ಮತ್ತು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಆಶಿಸುತ್ತೇನೆ" ಎಂದು ಹೇಳಿದರು.
ಅಕ್ರಮದ ಅಂಗಡಿ ತೆಗೆದದ್ದು ಯಾರು?; ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಡಿ. ಕೆ. ಶಿವಕುಮಾರ್, "ಅಮಿತ್ ಶಾ ಪಕ್ಷದ ವಿಚಾರವಾಗಿ ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದು ಅವರಿಗೆ ಬಿಟ್ಟ ವಿಚಾರ. ನೇಮಕಾತಿ ಅಕ್ರಮ ವಿಚಾರ ಕೇವಲ ಮಲ್ಲೇಶ್ವರಂ ಅಥವಾ ಮಾಗಡಿಗೆ ಸೀಮಿತವಾದ ವಿಚಾರವಲ್ಲ. ರಾಜ್ಯದ ಎಲ್ಲಾ ಯುವಕರಿಗೆ ಆಘಾತಕಾರಿ ವಿಚಾರ" ಎಂದರು.
"ಪಿಎಸ್ಐ, ಪಿಡಬ್ಲ್ಯೂಡಿ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ನೇಮಕಾತಿ ಅಕ್ರಮ ನಡೆದಿದೆ. ಉದ್ಯೋಗ ವಿಚಾರದಲ್ಲಿ ಯುವಕರಿಗೆ ನ್ಯಾಯ ಎಲ್ಲಿ ಸಿಗುತ್ತದೆ?. ಈ ವಿಚಾರವಾಗಿ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅನುಮಾನ ಇಲ್ಲದೆ ದೂರು ದಾಖಲಿಸಲು ಸಾಧ್ಯವೇ?. ಈ ವಿಚಾರವಾಗಿ ತನಿಖೆ ಸರಿಯಾಗಿ ಆಗುತ್ತದೆಯಾ?. ಇವರು ಅಕ್ರಮದ ಅಂಗಡಿ ತೆರೆದಿದ್ದ ಕಾರಣ ಜನ ಅವರ ಬಳಿ ಖರೀದಿಗೆ ಹೋಗಿದ್ದಾರೆ. ಇವರು ಅಂಗಡಿ ತೆರೆಯದಿದ್ದರೆ ಅವರು ಹೋಗುತ್ತಿದ್ದರಾ?. ಅಂಗಡಿ ತೆರೆದವರು ಯಾರು? ಸಂಪರ್ಕ ಕೊಟ್ಟವರಾರು? ಈ ಪ್ರಕರಣದಲ್ಲಿ ಯಾರಾರು ಯಾವ ರೀತಿಯಲ್ಲಿ ಭಾಗಿಯಾಗಿದ್ದಾರೆ?. ಅವರ ಹಿನ್ನೆಲೆ ಏನು? ಎಂಬುವುದು ಬಹಿರಂಗವಾಗದೆ" ಎಂದು ಡಿ. ಕೆ. ಶಿವಕುಮಾರ್ ಆಗ್ರಹಿಸಿದರು.











Click it and Unblock the Notifications