ಜನವರಿ 15ರೊಳಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ: ಜ್ಯೋತಿಷಿ ಉಲ್ಲಾಸ್ ಜೋಶಿ ಭವಿಷ್ಯ
ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಬ್ರೇಕ್‌ಫಾಸ್ಟ್ ಮೀಟಿಂಗ್ ಮೂಲಕ ಸಿಎಂ ಕುರ್ಚಿ ಕದನಕ್ಕೆ ಬ್ರೇಕ್ ಹಾಕಿದ್ದರು. ಬೆಳಗಾವಿ ಅಧಿವೇಶನ ಮುಗಿಯುತ್ತಿದ್ದಂತೆ ಕುರ್ಚಿ ಫೈಟ್ ಮತ್ತೆ ಶುರುವಾಗಿದೆ. ಜನವರಿ ತಿಂಗಳಲ್ಲೇ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಾಂಗ್ರೆಸ್ ಪಾಳಯದಲ್ಲೇ ಭವಿಷ್ಯ ಕೇಳಿಬರುತ್ತಿದೆ. ಇದರ ನಡುವೆ ಬಾಗಲಕೋಟೆಯ ಖ್ಯಾತ ಜ್ಯೋತಿಷಿಯೊಬ್ಬರು ಡಿ.ಕೆ.ಶಿವಕುಮಾರ್ ಸಿಎಂ ಆಗುವುದು ಯಾವಾಗ ಎಂದು ದಿನಾಂಕವೂ ಉಲ್ಲೇಖಿಸಿ ಭವಿಷ್ಯ ನುಡಿದಿದ್ದಾರೆ.
ಬಬಲೇಶ್ವರ ಜ್ಯೋತಿಷಿ ಮನೆತನದ ಬಾಗಲಕೋಟೆಯ ಖ್ಯಾತ ಜ್ಯೋತಿಷಿ ಉಲ್ಲಾಸ್ ಜೋಶಿ ಅವರು 'ಜನವರಿ 15ರ ಒಳಗಾಗಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗ್ತಾರೆ. ಅಲ್ಲದೆ ಸಚಿವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರಾಗಲಿದ್ದಾರೆ' ಎಂದು ಭವಿಷ್ಯ ನುಡಿದಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

'ರಾಘವೇಂದ್ರ ಸ್ವಾಮಿಗಳೇ ನನ್ನ ನಾಲಿಗೆಯಿಂದ ಇದನ್ನು ನುಡಿಸುತ್ತಾರೆ. ನಾನು ಮೊದಲಿಗೆ ಜಪಮಣಿ ಪಠಿಸುತ್ತಾ ರಾಘವೇಂದ್ರಸ್ವಾಮಿಗೆ ಪ್ರಶ್ನೆ ಹಾಕುತ್ತೇನೆ. ಅದಕ್ಕೆ ರಾಘವೇಂದ್ರ ಸ್ವಾಮಿಗಳು ಉತ್ತರಿಸುವುದನ್ನು ಭವಿಷ್ಯವಾಗಿ ಹೇಳುತ್ತೇನೆ. ಇಲ್ಲಿವರೆಗೆ ಅನೇಕರಿಗೆ ಭವಿಷ್ಯ ಹೇಳಿದ್ದು, ಅದು ಯಾವುದೂ ಸುಳ್ಳಾಗಿಲ್ಲ. ಯಾರೂ ಕೂಡ ನಾನು ಹೇಳಿದ್ದು ಸುಳ್ಳಾಗಿಲ್ಲ. ಜನವರಿ 15ರ ಒಳಗಾಗಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗ್ತಾರೆ' ಎಂದು ಹೇಳಿದ್ದಾರೆ. ಈಗಾಗಲೇ ಹಲವು ಜ್ಯೋತಿಷಿಗಳು ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವ ಬಗ್ಗೆ ಭವಿಷ್ಯ ನುಡಿದಿದ್ದು, ಈ ಜನವರಿಗೆ ಕ್ರಾಂತಿಯಾಗುತ್ತಾ? ಎನ್ನುವುದು ಕಾದುನೋಡಬೇಕಿದೆ..
ರಾಹುಲ್ ಗಾಂಧಿ ತೀರ್ಮಾನಿಸುತ್ತಾರೆ
ಸದ್ಯ ಕಾಂಗ್ರೆಸ್ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಮೈಸೂರಿನಲ್ಲಿ ಇಂದು ಪ್ರತಿಕ್ರಿಯಿಸಿದ್ದಾರೆ. 'ಇಲ್ಲಿ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ನನ್ನ ಪೂರ್ಣ ಸಹಮತವಿದೆ. ಯಾರು ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವೇ ಇಲ್ಲ. ನಾಯಕತ್ವ ಬದಲಾವಣೆ ವಿಚಾರವನ್ನು ರಾಹುಲ್ ಗಾಂಧಿಯವರು ತೀರ್ಮಾನಿಸಬೇಕು. ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವು ಬದ್ಧ' ಎಂದು ಸ್ಪಷ್ಟಪಡಿಸಿದ್ದಾರೆ.
'ನಾನು ಈ ಬಗ್ಗೆ ಪಕ್ಷದ ವರಿಷ್ಠರ ಬಳಿ ಮಾತನಾಡಿದ್ದು, ನಾವು ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ. ಮಾಧ್ಯಮದವರೇ ನಾಯಕತ್ವ ಬದಲಾವಣೆಯ ಬಗ್ಗೆ ಹೆಚ್ಚಾಗಿ ಚರ್ಚಿಸುತ್ತಿದ್ದಾರೆ. ಇಷ್ಟೊಂದು ಪ್ರಶ್ನೆ ಕೇಳಬೇಕಾದ ಅಗತ್ಯವೇನಿದೆ? ವಿಧಾನಸಭೆಯಲ್ಲಿ ಈ ಬಗ್ಗೆ ಹೇಳಿದ ಮೇಲೂ ಪುನಃ ಚರ್ಚೆ ಮಾಡುವ ಅಗತ್ಯವೇ ಇಲ್ಲ' ಎಂದು ಗರಂ ಆಗಿದ್ದಾರೆ.
'ಕೆ.ಎನ್.ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದು ಎಸ್.ಎಂ.ಕೃಷ್ಣನವರ ಸರ್ಕಾರ. ಅಧಿಕಾರದಲ್ಲಿದ್ದಾಗ ನಾನು ಮಾಡಿದೆ, ಅವರು ಮಾಡಿದರು ಎನ್ನುವುದು ಮುಖ್ಯವಲ್ಲ. ಆದರ ಪ್ರಶ್ನೆಯೇ ಇಲ್ಲ. ಎಸ್.ಎಂ.ಕೃಷ್ಣ ಅವರು ಆಗ ಮುಖ್ಯಮಂತ್ರಿಗಳಿದ್ದರು, ಅವರ ಸರ್ಕಾರ ಮಾಡಿತ್ತು' ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications