ಡಿಕೆ ಶಿವಕುಮಾರ್ ಎಚ್ಚರಿಕೆ: ರಾಜೀನಾಮೆ ಬಗ್ಗೆ ವದಂತಿ ಹಬ್ಬಿಸುವವರ ವಿರುದ್ಧ ಮಾನನಷ್ಟ ಮೊಕದ್ದಮೆ
ತುಮಕೂರು, ಮೇ. 16: ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗದಿದ್ದರೇ ಪಕ್ಷಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ವದಂತಿ ಹಬ್ಬಿಸಲಾಗಿದ್ದು, ಪಕ್ಷಕ್ಕೆ ರಾಜೀನಾಮೆ ನೀಡುವ ಬಗ್ಗೆ ಊಹಾಪೋಹಗಳನ್ನು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಳ್ಳಿಹಾಕಿದ್ದು, ವದಂತಿ ಹಬ್ಬಿಸುವವರ ವಿರುದ್ಧ ಕಿಡಿಕಾರಿದ್ದಾರೆ.
ಹೀಗೆ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ವದಂತಿಗಳನ್ನು ಹರಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷವೇ ನನ್ನ ತಾಯಿ ಎಂದ ಅವರು, ತಮ್ಮೊಂದಿಗೆ 135 ಶಾಸಕರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮಂಗಳವಾರ ಸಿಎಂ ಹುದ್ದೆ ಆಕಾಂಕ್ಷಿಯಾಗಿ ದೆಹಲಿಗೆ ತೆರಳಿರುವ ಅವರು ಹೈಕಮಾಂಡ್ ಜೊತೆಗಿನ ಮಹತ್ವದ ಸಭೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡುತ್ತಿವೆ. ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಕಾಂಗ್ರೆಸ್ ಪಕ್ಷ ನನ್ನ ತಾಯಿ ಮತ್ತು ನಾನು ಅದನ್ನು ನನ್ನ ರಾಜ್ಯದಲ್ಲಿ ಕಟ್ಟಿದ್ದೇನೆ" ಎಂದು ಆಕ್ರೋಶ ಹೊರಹಾಕಿದ್ದಾರೆ.
"135 ಶಾಸಕರ ಜೊತೆಗೆ ನನ್ನ ಹೈಕಮಾಂಡ್ ನನ್ನ ಜೊತೆಗಿದೆ. ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮಂಗಳವಾರ ಸಂಜೆಯ ನಂತರ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನು ಘೋಷಿಸುವ ನಿರೀಕ್ಷೆಯಿರುವುದರಿಂದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಸಿಎಂ ರೇಸ್ ಕೊನೆಗೊಳ್ಳುವ ಸಾಧ್ಯತೆಯಿದೆ.
ಡಿಕೆ ಶಿವಕುಮಾರ್ ಅವರು ಸೋಮವಾರ ಅನಾರೋಗ್ಯದ ನೆಪ ಹೇಳಿ ದೆಹಲಿ ಪ್ರವಾಸ ರದ್ದುಗೊಳಿಸಿದ್ದರು, ಸಿದ್ದರಾಮಯ್ಯ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಮಂಗಳವಾರ ಡಿಕೆ ಶಿವಕುಮಾರ್ ಕೂಡ ದೆಹಲಿಗೆ ಭೇಟಿ ನೀಡಿದ್ದಾರೆ. ಇಬ್ಬರೂ ಕಾಂಗ್ರೆಸ್ ಹೈಕಮಾಂಡ್ ಜೊತೆ ಪ್ರಮುಖ ಸಭೆ ನಡೆಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಹಲವು ಸಭೆಗಳನ್ನು ನಡೆಸಿ ಸಿಎಂ ಸ್ಥಾನಕ್ಕೆ ಹೆಸರು ಘೋಷಿಸಲಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ನಡೆದ ಸಿಎಲ್‌ಪಿ ಸಭೆಯಲ್ಲಿದ್ದ ವೀಕ್ಷಕರ ತಂಡವು ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ವರಿಷ್ಠರಿಗೆ ತಮ್ಮ ವರದಿಯನ್ನು ಸಲ್ಲಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಕೇವಲ 66 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಇನ್ನು, ಪ್ರಾದೇಶಿಕ ಪಕ್ಷ ಜೆಡಿಎಸ್ ಕೇವಲ 19 ಸ್ಥಾನಗಳನ್ನು ಗಳಿಸಿದೆ.












Click it and Unblock the Notifications