ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಮಾಡಿದ ಡಿ ಕೆ ಶಿವಕುಮಾರ್
ರಾಮನಗರ, ಅಕ್ಟೋಬರ್ 05: ಚನ್ನಪಟ್ಟಣದಲ್ಲಿ ಕೊಠಡಿಗಳ ಉದ್ಘಾಟನೆ ನಂತರ ಮಾಸ್ಟರಂತೆ ಮಕ್ಕಳಿಗೆ ಕ್ಷಣ ಹೊತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪಾಠ ಮಾಡಿದರು. ನೆನ್ನೆ ನೆನ್ನೆಗೆ, ನಾಳಿನ ಭವಿಷ್ಯ ನಾಳೆಗೆ, ಆದರೆ ಇಂದಿನ ಭವಿಷ್ಯ ನಿಮ್ಮ ಕೈಯಲ್ಲಿದೆ. ಒಂದೊಂದು ಕ್ಷಣವನ್ನು ನೀವು ಬಳಸಿಕೊಳ್ಳಬೇಕು. ಸಮಯವನ್ನು ಹಾಳು ಮಾಡಬಾರದು ಎಂದು ಕಿವಿ ಮಾತು ಹೇಳಿದರು.
"ಪ್ರತಿದಿನವೂ ಮುಖ್ಯವಾದ ದಿನ. ನೆನ್ನೆ, ನಾಳೆ, ಇಂದು ಎಲ್ಲವೂ ಒಳ್ಳೆ ದಿನವಲ್ಲವೇ" ಎಂದಾಗ ಮಕ್ಕಳು "ಎಸ್ ಸಾರ್" ಎಂದು ದನಿಗೂಡಿಸಿದರು. ಇಂದು ಯಾವ ಕಾರ್ಯಕ್ರಮ ನಡೆಯುತ್ತಿದೆ" ಎಂದು ಡಿಸಿಎಂ ಕೇಳಿದಾಗ ಮಕ್ಕಳು "ಹೊಸ ಸ್ಕೂಲ್ ಪೂಜೆ" ಎಂದರು.

ಶಾಲಾ ಉದ್ಘಾಟನೆಗೆ ಆಗಮಿಸಿದ ಡಿಸಿಎಂ ಅವರನ್ನು ಕಂಡ ವಿದ್ಯಾರ್ಥಿಗಳು ಗುಲಾಬಿ ಹೂ ನೀಡಿ "ನಮ್ಮ ಶಾಲೆಗೆ ವೆಲ್ ಕಮ್ ಸಾರ್" ಎಂದು ಸ್ವಾಗತಿಸಿದರು. ನಾ ಮುಂದು ತಾ ಮುಂದು ಎಂದು ಕೈ ಕುಲುಕಿ ಹಿರಿ, ಹಿರಿ, ಹಿಗ್ಗಿದರು.
ಬೆಳಗಿನ ಪ್ರಯಾಣದ ಆಯಾಸವನ್ನು ಮರೆತ ಶಿವಕುಮಾರ್ ಅವರು "ನಾನು ಯಾರು? ನಾನು ಏನಾಗಿದ್ದೇನೆ" ಎಂದು ಕೇಳಿದಾಗ "ನೀವು ಡಿ. ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ" ಎಂದ ಮಕ್ಕಳ ಮಾತಿಗೆ ಸಂತಸಗೊಂಡರು. ಈ ಹೊಸ ಶಾಲೆ ಕಟ್ಟಿದವರು ಯಾರು" ಎಂದಾಗ "ಟೊಯೋಟಾ ಕಂಪನಿಯವರು" ಎಂದು ಒಕ್ಕೊರಲಿನಿಂದ ಹೇಳಿದರು.
ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಟೊಯೋಟಾ ಕಿರ್ಲೊಸ್ಕರ್ ಮೋಟರ್ ಪ್ರೈವೇಟ್ ಸಂಸ್ಥೆ ಅವರು ಸಿ ಎಸ್ ಆರ್ ಅನುದಾನದ ಅಡಿ ನಿರ್ಮಾಣ ಮಾಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕೊಠಡಿಗಳನ್ನು ಶಾಲೆಯ ವಿದ್ಯಾರ್ಥಿಗಳಿಂದಲೇ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಉದ್ಘಾಟನೆ ಮಾಡಿಸಿದರು.
20 ಕ್ಕೂ ಹೆಚ್ಚು ಬಾರಿ ಕ್ಷೇತ್ರಕ್ಕೆ ಭೇಟಿ
ಮಾಜಿ ಎಂಎಲ್ ಎ ಅವರು ನಿಮ್ಮ ಕ್ಷೇತ್ರಕ್ಕೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ? ನಾನು ಕಳೆದ ಮೂರು ತಿಂಗಳಲ್ಲಿ ಸುಮಾರು 20 ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದೇನೆ. ನಮ್ಮ ಕೆಲಸವನ್ನು ನೀವು ಮರೆಯಬಾರದು. ಚನ್ನಪಟ್ಟಣ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ನಮ್ಮ ಗುರಿ" ಎಂದು ಹೇಳಿದರು.
ಚಕ್ಕೆರೆ ಹಾಗೂ ಕೋಡಂಬಳ್ಳಿಯಲ್ಲಿ ಟೊಯೋಟಾ ಕಿರ್ಲೊಸ್ಕರ್ ಕಂಪನಿಯ ಸಿಎಸ್ ಆರ್ ಅನುದಾನದ ಅಡಿ ನಿರ್ಮಾಣ ಮಾಡಿರುವ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟನೆ ಮಾಡಿದರು. ನಾಗವಾರ ಗ್ರಾಮದಲ್ಲಿ ಟೊಯೋಟಾ ಫೈನಾನ್ಸಿಯಲ್ ಸರ್ವಿಸ್ ಆಫ್ ಇಂಡಿಯಾ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕೊಠಡಿಗಳನ್ನು ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದಲೇ ಟೇಪು ಕತ್ತರಿಸಿ ಉದ್ಘಾಟನೆ ಮಾಡಿಸಿದರು. ನಂತರ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರದಾದ್ಯಂತ ಸುಮಾರು 17 ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದಗೆರೆ, ಮತ್ತಿಕೆರೆ, ಸಂಕಲಗೆರೆ, ದೊಡ್ಡ ಮಳೂರು, ಮಳೂರು, ಚಕ್ಲುರು, ಸುಳ್ಳೇರಿ ಪರಿಮಿತಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, 5 ಕಡೆ ಸೇತುವೆ ನಿರ್ಮಾಣ ಹಾಗೂ 4 ಕಡೆ ರಸ್ತೆ ನಿರ್ಮಾಣಕ್ಕೆ ಹಾಗೂ ಒಂದು ಕಡೆ ಅರಸು ಸಮುದಾಯ ಭವನಕ್ಕೆ ಒಟ್ಟು 20 ಕ್ಕೂ ಹೆಚ್ಚು ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಮೊದಲಿಗೆ ಬೇವೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮಾಕಳಿ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು "ಸುಮಾರು ₹ 2.16 ಕೋಟಿ ಅನುದಾನ ಹಾಗೂ ಈ ಗ್ರಾಮಕ್ಕೆ 78 ಮನೆಗಳನ್ನು ನಮ್ಮ ಸರ್ಕಾರ ಈ ಗ್ರಾಮಕ್ಕೆ ಮಂಜೂರು ಮಾಡಿದೆ" ಎಂದರು.












Click it and Unblock the Notifications