ಹೋರಾಟಗಳ ಮೂಲಕ ಪಾಠ ಕಲಿತು ಬಂದವನು ನಾನು: ಡಿಸಿಎಂ ಡಿ.ಕೆ. ಶಿವಕುಮಾರ್ | DK Shivakumar
ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಒಂದು ಕಡೆ ಸಿಎಂ ಬದಲಾವಣೆ ವಿಚಾರ ದೊಡ್ಡ ಚರ್ಚೆಗೆ ವೇದಿಕೆಯನ್ನ ಒದಗಿಸಿದೆ. ಇದೇ ಸಮಯದಲ್ಲಿ ಒಂದು ಕಡೆ ಸಿಎಂ ಬಣ ಹಾಗೂ ಡಿಸಿಎಂ ಬಣ ಎಂದು ಕಾಂಗ್ರೆಸ್ ಪಕ್ಷ ಎರಡು ಭಾಗವಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ & ಜೆಡಿಎಸ್ ನಾಯಕರು ಆರೋಪ ಮಾಡ್ತಾ ಇದ್ದಾರೆ. ಇಂತಹ ಸಮಯದಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಗುಡುಗಿದ್ದು, ಹೋರಾಟಗಳ ಮೂಲಕ ಪಾಠ ಕಲಿತು ಬಂದವನು ನಾನು ಎಂದಿದ್ದಾರೆ. ಅಲ್ಲದೆ ಸಿಎಂ ಪಟ್ಟದ ತಿಕ್ಕಾಟದ ಬಗ್ಗೆ ಕೂಡ ಈಗ ಸ್ಪಷ್ಟನೆ ನೀಡಿದ್ದಾರೆ.
ನಾನು ಹೋರಾಟಗಳಲ್ಲಿ ತಕ್ಕ ಪಾಠ ಕಲಿತವನು, ಎದುರಾಳಿಗಳ ಎದುರಿಸುವ ರೀತಿಯು ನನಗೆ ತಿಳಿದಿದೆ. ನನ್ನ ಪ್ರಯತ್ನ ಹುದ್ದೆಗಾಗಿ ಅಲ್ಲ ತತ್ವಗಳಿಗಾಗಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಸಮಯದಲ್ಲಿ, ಪಕ್ಷದ ಒಳಗೆ ನಾನು ಸ್ಪರ್ಧೆಗೆ ನಿಲ್ಲುವುದಿಲ್ಲ. ಆದರೆ ಹೊರಗಿನ ಸವಾಲು ಎದುರಿಸಲು ನಿಂತುಕೊಳ್ಳುತ್ತೇನೆ. ನಾನು ಮೌನವಾಗಿ ಇದ್ದೇನೆ ಎಂದು ಯಾರಾದರೂ ಅಂದುಕೊಂಡರೆ ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು. ಈ ಮೂಲಕ ಪಕ್ಷದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದು, ಸಿಎಂ ಸ್ಥಾನ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಸಮಯದಲ್ಲೇ ಡಿಸಿಎಂ ಮಾತನಾಡಿದ್ದಾರೆ.

ಉಚಿತ ಬಸ್ ಸೇವೆ ಬಗ್ಗೆ ಹೇಳಿದ್ದೇನು?
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ತಮ್ಮ ಹೋರಾಟ ಹಿನ್ನೆಲೆ ಮೆಲುಕು ಹಾಕಿ ಮಾತನಾಡಿದರು. ಇನ್ನೂ ಕೊರೊನಾ ಸಂಕಷ್ಟ ಸಮಯದಲ್ಲಿ ಕಾರ್ಮಿಕರಿಂದ ಹೆಚ್ಚುವರಿ ದರ ವಸೂಲಿ ಆಗುತ್ತಿದೆ ಎಂಬ ಮಾಹಿತಿ ಸಿಕ್ಕಾಗ ಪಕ್ಷದ ಪರವಾಗಿ ನೆರವು ನೀಡಲು ಮುಂದಾದ ವಿಚಾರ ಡಿಸಿಎಂ ಡಿಕೆಶಿ ಅವರು ಉಲ್ಲೇಖಿಸಿದರು. ಮೆಜೆಸ್ಟಿಕ್ ನಿಲ್ದಾಣದಲ್ಲೇ ಕೂತು ಜನರಿಗೆ ಸಂದೇಶ ನೀಡಿದ ಘಟನೆ ಹಾಗೂ ಉಚಿತ ಸಾರಿಗೆ ವ್ಯವಸ್ಥೆಗೆ ನಡೆಸಿದ ಒತ್ತಡವನ್ನು ಸ್ಮರಿಸಿದರು. ಚಾಮರಾಜನಗರ ಆಮ್ಲಜನಕ ದುರಂತ ಬಳಿಕ ಕುಟುಂಬಗಳಿಗೆ ಧೈರ್ಯ ತುಂಬಿದ ಸಂದರ್ಭವನ್ನ ಕೂಡ ಡಿಸಿಎಂ ಈ ವೇಳೆ ನೆನಪು ಮಾಡಿಕೊಂಡರು. ಅಲ್ಲದೆ ಬಜೆಟ್ ಬಳಿಕ ಕ್ರಾಂತಿ ಆಗುತ್ತಾ? ಎಂಬ ಪ್ರಶ್ನೆಗೂ ಅವರು ಉತ್ತರ ನೀಡಿದ್ದಾರೆ.
ಕರ್ನಾಟಕ ಬಜೆಟ್ ಬಳಿಕ ಕ್ರಾಂತಿ?
ಮತ್ತೊಂದು ಕಡೆ ಸಿಎಂ ಸ್ಥಾನಕ್ಕೆ ಪೈಪೋಟಿ ಸೇರಿದಂತೆ ಹಲವು ವಿಚಾರಗಳು ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಚರ್ಚೆಗೆ ಬರುತ್ತಿರುವ ಸಮಯದಲ್ಲೇ, ಕರ್ನಾಟಕದಲ್ಲಿ ಬಜೆಟ್ ಮಂಡನೆಯ ನಂತರ ಕ್ರಾಂತಿ ಆಗುತ್ತಾ? ಎಂಬ ಚರ್ಚೆ ಜೋರಾಗಿತ್ತು. ಈ ಬಗ್ಗೆ ಕೂಡ ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ನನ್ನ ನಂಬಿಕೆ ನನ್ನ ಶಕ್ತಿ ಅತಿಯಾದ ಪ್ರತಿಕ್ರಿಯೆ ಅಗತ್ಯವಿಲ್ಲ ಎಂದರು. ಪ್ರಯತ್ನ ಮತ್ತು ಪ್ರಾರ್ಥನೆ ಕುರಿತು ಉತ್ತರಿಸಿದ ಡಿಸಿಎಂ, ಸಮಯಕ್ಕೆ ಸರಿಯಾದ ಫಲ ದೊರೆಯುತ್ತದೆ ಎಂಬ ಆತ್ಮವಿಶ್ವಾಸ ನನಗಿದೆ ಎಂದು ಉತ್ತರಿಸಿದ್ದಾರೆ. ಈ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಡೆ ಮತ್ತಷ್ಟು ಕುತೂಹಲ ಕೆರಳಿಸಿದೆ.












Click it and Unblock the Notifications