Channapatna: ಚನ್ನಪಟ್ಟಣದಿಂದ ಡಿ ಕೆ ಸುರೇಶ್ ಸ್ಪರ್ಧೆ: ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರು, ಜೂನ್ 25: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪಕ್ಷ ಹೇಳಿದರೆ ನಾನಾಗಲಿ, ಸುರೇಶ್ ಆಗಲಿ ಕೇಳಬೇಕು. ಸುರೇಶ್ ಅವರಿಗೆ ಸಂಸತ್ ಚುನಾವಣೆಗೂ ಸ್ಪರ್ಧೆ ಮಾಡುವ ಆಸಕ್ತಿ ಇರಲಿಲ್ಲ. ಕಾರ್ಯಕರ್ತರ ಒತ್ತಾಯದ ಮೇರೆಗೆ ಅವರು ಸ್ಪರ್ಧೆ ಮಾಡಿದ್ದಾರೆ. ಅವರು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಚನ್ನಪಟ್ಟಣ ಈಗ ನೆನಪಾಗಿದೆಯೇ ಎಂಬ ಕುಮಾರಸ್ವಾಮಿ ಅವರ ಟೀಕೆ ಕುರಿತು ಮಾತನಾಡಿ, ಚನ್ನಪಟ್ಟಣದಲ್ಲಿ ಅಧಿಕಾರದಲ್ಲಿದ್ದ ದೊಡ್ಡವರು, ಅನುಭವಿ ನಾಯಕರು ಇಲ್ಲಿನ ಜನರ ಸಮಸ್ಯೆ ಬಗೆಹರಿಸುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ನಾನು ಬಂದಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಇಷ್ಟು ದಿನ ಈ ಕ್ಷೇತ್ರ ಖಾಲಿ ಇರಲಿಲ್ಲ. ಇಲ್ಲಿ ಅನುಭವಿಗಳು ದೊಡ್ಡವರು ಇದ್ದರು. ಅವರು ಜನರ ಸಮಸ್ಯೆಗೆ ಸ್ಪಂದಿಸಿ, ಪರಿಹಾರ ನೀಡುತ್ತಾರೆ ಎಂದು ಭಾವಿಸಿದ್ದೆ. ಇತ್ತೀಚೆಗೆ ಅಧಿಕಾರಿಗಳ ಸಭೆ ಮಾಡಿದ ಬಳಿಕ ಪರಿಸ್ಥಿತಿ ತಿಳಿಯಿತು. ಇಲ್ಲಿ ಏನೂ ಆಗಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಅದಕ್ಕೆ ನಮ್ಮ ಶೈಲಿಯಲ್ಲಿ ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ. ರಾಮನಗರ, ಕನಕಪುರ, ಬೆಂಗಳೂರಿನಲ್ಲೂ ಈ ಕಾರ್ಯಕ್ರಮ ಮಾಡಿದ್ದೇವೆ" ಎಂದು ತಿಳಿಸಿದರು.
ಹೊಸ ಮತದಾರರ ಸೇರ್ಪಡೆಗೆ ಸೂಚಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಲೋಕಸಭಾ ಚುನಾವಣೆ ಸಮಯದಲ್ಲಿ ಮುಸಲ್ಮಾನ ಸಮುದಾಯದವರ ಹೆಸರು ತೆಗೆದು ಹಾಕಲಾಗಿದೆ ಎಂದು ದೂರುಗಳು ಬಂದಿದ್ದವು. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಮತ್ತೆ ಈ ಮತದಾರರ ಮನೆಗೆ ಭೇಟಿ ನೀಡಿ ಅವರ ಹೆಸರನ್ನು ಮತ್ತೆ ಸೇರಿಸಲು ಸೂಚಿಸಿದ್ದೇನೆ. ಹೊರಗಿನಿಂದ ಬೇರೆಯವರನ್ನು ತಂದು ಇಲ್ಲಿನ ಮತದಾರರ ಪಟ್ಟಿಯಲ್ಲಿ ಸೇರಿಸಲು ಆಗುವುದಿಲ್ಲ. ಇಲ್ಲಿ ಹೊಸದಾಗಿ ಸೇರಿಸಬೇಕು ಎಂದರೆ ಹಳೇ ಬೇರೆ ಕಡೆ ಇರುವ ಮತದಾರರ ಹೆಸರನ್ನು ಅಳಿಸಬೇಕು. ಹೀಗಾಗಿ ಹೊಸ ತಂತ್ರಜ್ಞಾನದಲ್ಲಿ ಈ ರೀತಿ ಬೇರೆಯವರನ್ನು ತಂದು ಸೇರಿಸಲು ಆಗುವುದಿಲ್ಲ ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಚುನಾವಣಾ ಅಕ್ರಮ ಮಾಡುತ್ತಿದ್ದು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ಕೇವಲ ಪತ್ರ ಯಾಕೆ ಬರೆಯುತ್ತಾರೆ. ಚುನಾವಣಾ ಆಯೋಗದ ಕಚೇರಿಗೆ ಹಾಸಿಗೆ, ದಿಂಬು ತೆಗೆದುಕೊಂಡು ಹೋಗಿ ಮಲಗಲಿ ಎಂದು ತಿಳಿಸಿದರು.
ಉಪಚುನಾವಣೆಗೆ ಸಚಿವ ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಬಗ್ಗೆ ಕೇಳಿದಾಗ, "ಪಕ್ಷದಲ್ಲಿ ಒಂದು ಪದ್ಧತಿ ಇರುತ್ತದೆ. ಮತದಾರರು ಹಾಗು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇವೆ. ನಂತರ ನಾನು, ಮುಖ್ಯಮಂತ್ರಿಗಳು ಹಾಗೂ ಪ್ರದಾನ ಕಾರ್ಯದರ್ಶಿಗಳು ಕೂತು ಚರ್ಚೆ ಮಾಡುತ್ತೇವೆ. ನಮ್ಮ ಪಕ್ಷದ ಚುನಾವಣಾ ಸಮಿತಿಯೂ ಚರ್ಚೆ ಮಾಡಿ ಯಾರು ಸ್ಪರ್ಧೆ ಮಾಡಬೇಕು ಎಂದು ತೀರ್ಮಾನ ಕೈಗೊಳ್ಳುತ್ತದೆ" ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ಶಾಸಕರಾಗಿ ಇಲ್ಲಿ ಕೆಲಸ ಮಾಡಿಲ್ಲವೇ ಎಂದು ಕೇಳಿದಾಗ, "ಅವರು ಕೆಲಸ ಮಾಡಿದ್ದಾರೋ ಇಲ್ಲವೋ ಎಂದು ಜನ ತೀರ್ಮಾನ ಮಾಡುತ್ತಾರೆ" ಎಂದು ತಿಳಿಸಿದರು. ಪಕ್ಷದಲ್ಲಿ ಮೂವರು ಡಿಸಿಎಂ ಹುದ್ದೆ ಬೇಡಿಕೆ ಬಗ್ಗೆ ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಕೇಳಿದಾಗ, "ಜನ ನಮಗೆ ತಿದ್ದಿಕೊಳ್ಳಲು ಅವಕಾಶ ನೀಡಿದ್ದಾರೆ. ಸುರೇಶ್ ಅವರಿಗೆ ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ನೂತನ ಸಂಸದರಾಗಿ ಆಯ್ಕೆಯಾಗಿರುವ ಡಾ.ಮಂಜುನಾಥ್ ಅವರು ಸುರೇಶ್ ಅವರಿಗಿಂತ ಹೆಚ್ಚಿನ ಕೆಲಸ ಮಾಡಲಿ" ಎಂದರು.












Click it and Unblock the Notifications