ಅವರಿಬ್ಬರೂ ವಿಧಾನಸೌಧದಲ್ಲಿ ಯಾರನ್ನೂ ರೇಪ್ ಮಾಡಿಲ್ಲ ತಾನೇ ಎಂದ ಡಿ.ಕೆ ಶಿವಕುಮಾರ್!
ಕರ್ನಾಟಕ ಬಿಜೆಪಿಯಲ್ಲಿ ಉಚ್ಚಾಟನೆಯ ಪರ್ವ ಮುಂದುವರಿದಿದೆ. ಪಕ್ಷದ ಶಿಸ್ತು ಪರಿಪಾಲನೆ ಮಾಡದೆ ಇರುವವರು ಹಾಗೂ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡುವವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಪ್ರವೃತ್ತಿಯು ಮುಂದಿವರಿದಿದೆ. ಕೆಲವೇ ದಿನಗಳ ಹಿಂದಷ್ಟೇ ಬಿಜೆಪಿಯಿಂದ ಪ್ರಭಾವಿ ಶಾಸಕ ಹಾಗೂ ಕೇಂದ್ರ ಸಚಿವರು ಆಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಲಾಗಿತ್ತು. ಇದೀಗ ಇನ್ನಿಬ್ಬರು ಶಾಸಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಿಯಾಕ್ಟ್ ಮಾಡಿದ್ದಾರೆ.
ಶಾಸಕರಾದ ಶಿವರಾಮ್ ಹೆಬ್ಬಾರ್ ಹಾಗೂ ಎಸ್ಟಿ ಸೋಮಶೇಖರ್ ಅವರನ್ನು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಉಚ್ಚಾಟನೆ ಮಾಡಿದೆ. ಈ ಬಗ್ಗೆ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ. ಅವರಿಬ್ಬರೂ ವಿಧಾನಸೌಧದಲ್ಲಿ ಯಾರನ್ನೂ ರೇಪ್ ಮಾಡಿಲ್ಲ ಅಲ್ಲವೇ. ಅವರು ಯಾರನ್ನೂ ರೇಪ್ ಮಾಡಿಲ್ಲ ತಾನೆ ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಮುಂದುವರಿದು ಯಾರಿಗೂ ಈ ಇಬ್ಬರು ಶಾಸಕರು ಎಚ್‌ಐವಿ ಇಂಜೆಕ್ಷನ್ ಚುಚ್ಚಿರಲಿಲ್ಲ ಅಲ್ಲವೇ ಅಂತ ಪ್ರಶ್ನೆ ಮಾಡಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಶಾಸಕರಾದ ಶಿವರಾಮ್ ಹೆಬ್ಬಾರ್ ಹಾಗೂ ಎಸ್ಟಿ ಸೋಮಶೇಖರ್ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಯಿಂದ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿದ ಸಂದರ್ಭದಲ್ಲಿಯೇ ರಾಜ್ಯ ಬಿಜೆಪಿಯಲ್ಲಿರುವ ಭಿನ್ನಮತೀಯರು ಹಾಗೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವವರಿಗೆ ಸ್ಪಷ್ಟವಾದ ಎಚ್ಚರಿಕೆಯನ್ನು ನೀಡಲಾಗಿತ್ತು. ಇದಾದ ಮೇಲೆ ಭಿನ್ನಮತೀಯರು ಒಂದೆಡೆ ಸೇರಿ ಸಭೆಗಳನ್ನು ನಡೆಸುವುದು ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧವಾಗಿ ಹೇಳಿಕೆಗಳನ್ನು ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು.
ರಾಜ್ಯ ಬಿಜೆಪಿಯಲ್ಲಿ ಇಷ್ಟೆಲ್ಲ ಬೆಳವಣಿಗೆಗಳ ಹೊರತಾಗಿಯೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡ ಹಾಗೂ ಬಿಜೆಪಿ ಪಕ್ಷದಲ್ಲಿ ಶಿಸ್ತು ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಶಾಸಕರಾದ ಶಿವರಾಮ್ ಹೆಬ್ಬಾರ್ ಹಾಗೂ ಎಸ್ಟಿ ಸೋಮಶೇಖರ್ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿದೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಯಾವ ಕಾರಣಕ್ಕೆ ಇವರಿಬ್ಬರನ್ನು ಉಚ್ಚಾಟನೆ ಮಾಡಲಾಗಿದೆ ಎನ್ನುವುದಕ್ಕೆ ವ್ಯಂಗ್ಯವಾಗಿ ರಿಯಾಕ್ಟ್ ಮಾಡಿದ್ದಾರೆ.
ಮುತ್ತು ರತ್ನಗಳನ್ನ ಇರಿಸಿಕೊಳ್ಳಲಿ!
ಶಾಸಕರಾದ ಶಿವರಾಮ್ ಹೆಬ್ಬಾರ್ ಹಾಗೂ ಎಸ್ಟಿ ಸೋಮಶೇಖರ್ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿರುವ ನಿರ್ಧಾರದ ಬಗ್ಗೆ ಮಾತನಾಡುತ್ತಲ್ಲೇ ಡಿ.ಕೆ ಶಿವಕುಮಾರ್ ಅವರು, ಬಿಜೆಪಿ ಅವರು ಅವರ ಪಕ್ಷದಲ್ಲಿ ಮುತ್ತು ರತ್ನಗಳನ್ನು ಉಳಿಸಿಕೊಳ್ಳಲಿ ಅಂತ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿ ಶಾಸಕ ಮುನಿರತ್ನಗೆ ಟಾಂಗ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ ಅವರು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ಇದೀಗ ಇಷ್ಟೆಲ್ಲಾ ಆದರೂ ಮುನಿರತ್ನ ವಿರುದ್ಧ ಬಿಜೆಪಿ ಕ್ರಮ ತೆಗೆದುಕೊಂಡಿಲ್ಲ ಎನ್ನುವುದನ್ನು ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ಅವರು ಉಲ್ಲೇಖಿಸಿದ್ದಾರೆ.












Click it and Unblock the Notifications