ಗ್ಯಾರಂಟಿ ಯೋಜನೆಗಳಿಂದ ಉಪಸಮರದಲ್ಲಿ ಯಶಸ್ಸು, ತಮಿಳುನಾಡು ಫಲಿತಾಂಶ ಅಚ್ಚರಿ: ಡಿಕೆ ಶಿವಕುಮಾರ್
ರಾಜ್ಯದ ಗ್ಯಾರಂಟಿ ಯೋಜನೆಗಳು ಜನರ ಕೈ ಹಿಡಿದಿವೆ. ಜನರ ಕಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸಿರುವ ಫಲವಾಗಿಯೇ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಬೆಂಬಲಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಉಪಚುನಾವಣೆ ಹಾಗೂ ಪಕ್ಕದ ರಾಜ್ಯಗಳ ಚುನಾವಣಾ ಫಲಿತಾಂಶಗಳ ಬಗ್ಗೆ ಮಾತನಾಡಿದರು. ದಾವಣಗೆರೆ ಕ್ಷೇತ್ರದಲ್ಲಿ ಉಂಟಾಗಿದ್ದ ಗೊಂದಲಗಳ ನಡುವೆಯೂ ನಮಗೆ ಗೆಲುವಿನ ವಿಶ್ವಾಸವಿತ್ತು. ಆದರೆ ಎಸ್‌ಡಿಪಿಐ ಪಕ್ಷವು ಅಲ್ಪಸಂಖ್ಯಾತರ ಮತಗಳನ್ನು ಸೆಳೆದ ಕಾರಣ ಗೆಲುವಿನ ಅಂತರ 25-30 ಸಾವಿರಕ್ಕೆ ಕುಸಿದಿದೆ. ಎಸ್‌ಡಿಪಿಐ ಅನ್ನು ನಾವು ಎಂದಿಗೂ ಹಗುರವಾಗಿ ಪರಿಗಣಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ತಮಿಳುನಾಡಿನ ಫಲಿತಾಂಶ ತಮಗೆ ಅಚ್ಚರಿ ತಂದಿದೆ. ತಮಿಳುನಾಡಿನಲ್ಲಿ ಹೊಸ ಯುಗ ಆರಂಭವಾಗಿದೆ. ಅಲ್ಲಿನ ಜನರ ನಾಡಿಮಿಡಿತಕ್ಕೆ ಸ್ಪಂದಿಸಲು ನಮಗೆ ಸಾಧ್ಯವಾಗಲಿಲ್ಲ. ಈ ಚುನಾವಣೆಯಲ್ಲಿ ನಟ ವಿಜಯ್ ಅವರ ಮುಂದಾಳತ್ವದ ಪಕ್ಷ ಶೇಕಡಾ 30 ರಿಂದ 40 ರಷ್ಟು ಮತ ಪಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇದಕ್ಕಿಂತಲೂ ಹೆಚ್ಚಿನ ಜನ ಬೆಂಬಲ ಅವರಿಗೆ ಸಿಕ್ಕಿದೆ ಎಂದು ಡಿಕೆಶಿ ಹೇಳಿದ್ದಾರೆ. ಸ್ಟಾಲಿನ್ ಅವರ ಜೊತೆ ರಾಹುಲ್ ಗಾಂಧಿ ಅವರು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ ಎನ್ನುವ ಬಗ್ಗೆ ಕೇಳಿದಾಗ, "ಆ ಬಗ್ಗೆ ಮಾತನಾಡಲು ನಾನು ಹೋಗುವುದಿಲ್ಲ. ಹೈಕಮಾಂಡ್ ತೀರ್ಮಾನ ಮಾಡಿದಂತೆ ನಾವೆಲ್ಲರೂ ಅಲ್ಲಿಗೆ ಹೋಗಿದ್ದೇವಲ್ಲ" ಎಂದರು.
ಕೇರಳದಲ್ಲಿ ಯುಡಿಎಫ್ ಗೆಲುವು ನಿರೀಕ್ಷಿತವಾಗಿತ್ತು. ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದ ಎಲ್‌ಡಿಎಫ್ ವಿರುದ್ಧ ಜನ ಬದಲಾವಣೆ ಬಯಸಿದ್ದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೇ ನಮಗೆ ಇದರ ಸುಳಿವು ಸಿಕ್ಕಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ಗಂಭೀರ ಆರೋಪ
ಪಶ್ಚಿಮ ಬಂಗಾಳದಲ್ಲಿ ವ್ಯವಸ್ಥಿತವಾಗಿ ಅಧಿಕಾರ ದುರುಪಯೋಗವಾಗಿದೆ. ಚುನಾವಣಾ ಆಯೋಗವನ್ನೇ ದುರ್ಬಳಕೆ ಮಾಡಿಕೊಂಡು ಸುಮಾರು ಎರಡು ಲಕ್ಷ ಮತಗಳನ್ನು ಅಳಿಸಿ ಹಾಕಿ ಫಲಿತಾಂಶವನ್ನು ಬದಲಿಸಲಾಗಿದೆ ಎಂದಿದ್ದಾರೆ. ಇನ್ನು ಆಸ್ಸಾಂನಲ್ಲಿ 50 ರಿಂದ 60 ಸ್ಥಾನ ಗೆಲ್ಲುವ ವಿಶ್ವಾಸವಿತ್ತು ಎಂದು ಸ್ಥಳೀಯ ನಾಯಕರು ತಿಳಿಸಿದ್ದರು. ಅಲ್ಲದೆ ಸೋಲಿಗೆ ಕಾರಣ ಕೇಳಿದಾಗ "ಕ್ಷೇತ್ರ ಮರುವಿಂಗಡಣೆ ಮಾಡುವಾಗ ಅಲ್ಪಸಂಖ್ಯಾತರು ಒಂದೇ ಕಡೆ ಬರುವಂತೆ ಮಾಡಿದ್ದಾರೆ. ಉಪಾಯವಾಗಿಯೇ ಇದನ್ನು ಮಾಡಲಾಗಿದೆ" ಎಂದು ದೂರಿದರು.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಗಳು ಕರ್ನಾಟಕ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕೇಂದ್ರದಲ್ಲಿ ಡಬಲ್ ಎಂಜಿನ್ ಸರ್ಕಾರವಿದ್ದಾಗಲೇ ಕರ್ನಾಟಕಕ್ಕೆ ಅವರು ಏನನ್ನೂ ಮಾಡಲಿಲ್ಲ ಎಂದು ದೂರಿದ್ದಾರೆ.












Click it and Unblock the Notifications