Breaking; ಡಿಕೆಶಿ ಸ್ವಾಭಿಮಾನಿ ಕನ್ನಡಿಗರ ದಾರಿ ತಪ್ಪಿಸುತ್ತಿದ್ದಾರೆ!
ಬೆಂಗಳೂರು, ಜನವರಿ 17; ಕರ್ನಾಟಕ ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಸರಣಿ ಟ್ವೀಟ್‌ಗಳ ಮೂಲಕ ಟೀಕಾಪ್ರಹಾರ ನಡೆಸಿದೆ. 'ಅಧಿಕಾರದ ಲಾಲಸೆಯಲ್ಲಿರೋ ಡಿ. ಕೆ. ಶಿವಕುಮಾರ್ ಸ್ವಾಭಿಮಾನಿ ಕನ್ನಡಿಗರ ದಾರಿ ತಪ್ಪಿಸುತ್ತಿದ್ದಾರೆ' ಎಂದು ದೂರಿದೆ.
ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ 'ನಾ ನಾಯಕಿ' ಸಮಾವೇಶದಲ್ಲಿ ಕಾಂಗ್ರೆಸ್ ನೀಡಿದ ಭರವಸೆಯನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದೆ.
'ಕಾಂಗ್ರೆಸ್ ತನ್ನ ಏಳು ದಶಕಗಳ ಸಾಧನೆಯನ್ನು ಜನತೆಯ ಮುಂದಿಟ್ಟು ಮತ ಭಿಕ್ಷೆ ಕೇಳಬೇಕಿತ್ತು. ಅದರ ಬದಲು ಜನರಿಗೆ ಪೂರೈಸಲಾಗದ ಪೊಳ್ಳು ಭರವಸೆಗಳನ್ನು ಕೊಡುತ್ತಿದೆ. ಅಧಿಕಾರದ ಲಾಲಸೆಯಲ್ಲಿರೋ ಡಿ. ಕೆ. ಶಿವಕುಮಾರ್ ಸ್ವಾಭಿಮಾನಿ ಕನ್ನಡಿಗರ ದಾರಿ ತಪ್ಪಿಸುತ್ತಿದ್ದಾರೆ' ಎಂದು ಬಿಜೆಪಿ ಹೇಳಿದೆ.

ಮತ್ತೊಂದು ಟ್ವೀಟ್‌ನಲ್ಲಿ '2013-18ರವರೆಗೂ ಕಾಂಗ್ರೆಸ್ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕರ್ನಾಟಕವನ್ನು ಕೊಳ್ಳೆ ಹೊಡೆದಿತ್ತು. ಕಾಂಗ್ರೆಸ್ ಪಕ್ಷ ಕೊಟ್ಟ ದೌರ್ಭಾಗ್ಯಗಳ ಫಲವಾಗಿ ಇಂದು ವಿರೋಧ ಪಕ್ಷದ ಸ್ಥಾನದಲ್ಲಿದೆ. ಸಂಸತ್ತಿನಲ್ಲಿ ವಿಪಕ್ಷ ಸ್ಥಾನ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಕರ್ನಾಟಕದಲ್ಲೂ ಈ ದುಸ್ಥಿತಿ ಎದುರಾಗುವ ಆತಂಕದಲ್ಲಿದೆ' ಎಂದು ತಿಳಿಸಿದೆ.
'ನಾ ನಾಯಕಿ ಎಂದು ರಾಜ್ಯಕ್ಕೆ ಬಂದ ಪ್ರಿಯಾಂಕ ಗಾಂಧಿ ವಂಶಪಾರಂಪರ್ಯ ನಾಯಕತ್ವವನ್ನು ಉಳಿಸಿಕೊಳ್ಳಲು ಸ್ವಾಭಿಮಾನಿ ಕನ್ನಡಿಗರನ್ನು ಈ ಬಾರಿ ಅವಲಂಬಿಸಿದ್ದಾರೆ. ರಾಹುಲ್ ಗಾಂಧಿ ಅವರು ಉಪಯೋಗಕ್ಕಿಲ್ಲವಾಗಿರುವುದರಿಂದಲೇ ಬೋಗಸ್ ಭಾಗ್ಯದ ಆಮಿಷ ಒಡ್ಡುತ್ತಿರುವುದು. ಕನ್ನಡಿಗರದ್ದು ಕೊಡುವ ಗುಣವೆಂಬುದು ಅವರು ಮರೆತಂತಿದೆ' ಎಂದು ಬಿಜೆಪಿ ಹೇಳಿದೆ.
'ಎಡಬಿಡಂಗಿ ಸಿದ್ಧಾಂತ ಪ್ರತಿಪಾದಿಸುವ ಕಾಂಗ್ರೆಸ್ ಪುಕ್ಸಟ್ಟೆ ಭಾಗ್ಯಗಳನ್ನು ಕೊಟ್ಟು ಕರ್ನಾಟಕವನ್ನು ದಿವಾಳಿ ಮಾಡುವ ಆಲೋಚನೆಯಲ್ಲಿದೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿವೆ. ಭಾರತದ ಆರ್ಥಿಕತೆ ಸದೃಢವಾಗಿರುವುದು ಕಾಂಗ್ರೆಸ್‌ಗೆ ಸಹಿಸಲಾಗುತ್ತಿಲ್ಲವೇ?' ಎಂದು ಪ್ರಶ್ನೆ ಮಾಡಿದೆ.
'ಕಾಂಗ್ರೆಸ್ ಎಂದಿಗೂ ತನ್ನ ಸಾಧನೆ ಮೂಲಕ ಮತ ಕೇಳುವ ಸಂಸ್ಕಾರವನ್ನು ಬೆಳೆಸಿಕೊಂಡಿಲ್ಲ. ಇಂದಿರಾ ಗಾಂಧಿ ಅಮೆರಿಕದಿಂದ ಉಚಿತವಾಗಿ ಬಂದ ಜೋಳವನ್ನೇ ಅಂದು 50 ಪೈಸೆಗೆ ಮಾರಾಟ ಮಾಡಿದ್ದರು. ಇಂದು ಅವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಅವರು ಕರ್ನಾಟಕಕ್ಕೆ ಬಂದು ಮಹಿಳೆಯರಿಗೆ 2,000 ರೂ. ಭರವಸೆ ನೀಡಿರುವುದು ಹಾಸ್ಯಾಸ್ಪದ' ಎಂದು ವ್ಯಂಗ್ಯವಾಡಿದೆ.












Click it and Unblock the Notifications