ವಾಹನ ಸವಾರರಿಗೆ ಗುಡ್ ನ್ಯೂಸ್: ಹೆಬ್ಬಾಳದಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಉದ್ಘಾಟನೆ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಬ್ಬಾಳದಲ್ಲಿ ನಿರ್ಮಿಸಿರುವ ತುಮಕೂರು ಮತ್ತು ಬೆಂಗಳೂರು ಉತ್ತರ ಕಡೆಯಿಂದ ಮೇಖ್ರಿ ವೃತ್ತದ ಕಡೆ ಸುಗಮ ಸಂಚಾರಕ್ಕೆ ಅನುವಾಗುವ ಮೇಲ್ಸೇತುವೆಯನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಗುರುವಾರ ಉದ್ಘಾಟಿಸಿದರು.
ಹೆಬ್ಬಾಳ ಮೇಲ್ಸೇತುವೆ ಬಳಿ ನೂತನ ಮೇಲ್ಸೇತುವೆ ಉದ್ಘಾಟಿಸಿದ ಬಳಿಕ ಮಾತನಾಡಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ಉತ್ತರ ಭಾಗದ ಜನರ ಸುಗಮ ವಾಹನ ಸಂಚಾರಕ್ಕಾಗಿ ಹೆಬ್ಬಾಳ ಮೇಲ್ಸೇತುವೆಯ ಎರಡನೇ ಲೂಪ್ ಅನ್ನು ಇಂದು ಉದ್ಘಾಟನೆ ಮಾಡಿದ್ದೇವೆ. ಈ ಭಾಗದ ಜನರು ಹೆಬ್ಬಾಳ ಮೇಲ್ಸೇತುವೆ ಬಳಿ ಸಂಚಾರ ದಟ್ಟಣೆ ದೂರು ಹೇಳುತ್ತಿದರು. ಹೀಗಾಗಿ ನಾವು ತ್ವರಿತ ಗತಿಯಲ್ಲಿ ಪರಿಹಾರ ಕಂಡು ಹಿಡಿದಿದ್ದೇವೆ. ಆಮೂಲಕ ಸಂಚಾರ ದಟ್ಟಣೆ ನಿವಾರಿಸಿದ್ದೇವೆ ಎಂದು ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ವರ್ಷ ಐವತ್ತನೇ ವಸಂತಕ್ಕೆ ಕಾಲಿಟ್ಟಿದ್ದು, ನನ್ನ ರಾಜಕೀಯ ಜೀವನದಲ್ಲಿ ಹಿಂದೆಂದೂ ಮಾಡಲಾಗದ ಐತಿಹಾಸಿಕ ಯೋಜನೆಗಳನ್ನು ಹಮ್ಮಿಕೊಂಡಿದೆ. 120 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಅನ್ನು ಕಾರ್ಯರೂಪಕ್ಕೆ ತರಲು ರೈತರ ಬಳಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ 35% ವಾಣಿಜ್ಯ ಭೂಮಿಯನ್ನು ರೈತರಿಗೆ ಪರಿಹಾರವಾಗಿ ನೀಡಲಾಗುತ್ತಿದೆ. ಜತೆಗೆ ಸಣ್ಣ ಟೌನ್ ಶಿಪ್ ನಿರ್ಮಾಣಕ್ಕೆ ರೈತರಿಗೆ ಉತ್ತಮ ಪರಿಹಾರ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಒಂದೂವರೇ ಕಿ.ಮೀ ಟನಲ್ ರಸ್ತೆ ಬರಲಿದೆ. ಮೇಕ್ರಿ ವೃತ್ತದ ಬಳಿ ಮೇಲ್ಸೇತುವೆ ಸಾಗಲಿದೆ. ಇದನ್ನು ಮೂರು ಭಾಗವಾಗಿ ಕಟ್ಟಲಾಗುವುದು. ಇನ್ನು ತುಮಕೂರು ರಸ್ತೆಯಿಂದ ಕೆ.ಆರ್ ಪುರದ ವರೆಗೆ ಮೇಲ್ಸೇತುವೆ ಮೂಲಕ ಹೊರ ವರ್ತುಲ ರಸ್ತೆ (ಒಆರ್ ಆರ್) ಮಾಡಲು ಮುಂದಾಗಿದ್ದೇವೆ ಎಂದು ವಿವರಿಸಿದರು.
ನೈಸ್ ನವರಿಗೆ ಪಾಠ ಕಲಿಸುವುದು ಗೊತ್ತಿದೆ
ನೈಸ್ ಸಂಸ್ಥೆಯ ಕೆಲವು ಕೆಐಎಡಿಬಿ ಜಾಗವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೆವು. ಇದಕ್ಕೆ ಅವರು ತಕರಾರು ಎತ್ತಿದ್ದಾರೆ. ನೈಸ್ ನವರು ತಾವು ಸರ್ಕಾರಕ್ಕಿಂತ ದೊಡ್ಡವರು ಎಂದು ಭಾವಿಸಿದ್ದಾರೆ. ಹೀಗಾಗಿ ಬೇರೆ ದಾರಿ ಹುಡುಕುತ್ತೇವೆ. ಅವರಿಗೆ ಹೇಗೆ ಪಾಠ ಕಲಿಸಬೇಕು ಎಂಬುದು ಗೊತ್ತಿದೆ. ಹೀಗಾಗಿ ಸ್ಕೈಡೆಕ್ ಗಾಗಿ ನಾವು ಬೇರೆ ಕಡೆ ಬಿಡಿಎ ಜಾಗ ಗುರುತಿಸಿದ್ದೇವೆ. ವಿಮಾನ ಹಾರಾಟದ ಟವರ್ ಸಮಸ್ಯೆ ಇರುವ ಕಾರಣ, ಇದನ್ನು ಸೂಕ್ತ ಜಾಗದಲ್ಲಿ ನಿರ್ಮಿಸುತ್ತೇವೆ ಎಂದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಬ್ಬಾಳದಲ್ಲಿ ನಿರ್ಮಿಸಿರುವ ತುಮಕೂರು ಮತ್ತು ಬೆಂಗಳೂರು ಉತ್ತರ ಕಡೆಯಿಂದ ಮೇಖ್ರಿ ವೃತ್ತದ ಕಡೆ ಸುಗಮ ಸಂಚಾರಕ್ಕೆ ಅನುವಾಗುವ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಬೈರತಿ ಸುರೇಶ್, ಬಿಡಿಎ ಅಧ್ಯಕ್ಷ, ಶಾಸಕ ಎನ್ ಎ ಹ್ಯಾರಿಸ್, ಆಯುಕ್ತ ಮಣಿವಣ್ಣನ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಜತೆಗಿದ್ದರು.












Click it and Unblock the Notifications