Property: ನಿಮ್ಮ ಭೂಮಿಯ ಆಸ್ತಿ ಮೌಲ್ಯ ಭರ್ಜರಿ ಹೆಚ್ಚಳ: ಬಿಗ್ ಅಪ್‌ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 15: ಜಿಬಿಎ ವ್ಯಾಪ್ತಿಯಲ್ಲಿನ ಐದು ಪಾಲಿಕೆಗಳಲ್ಲಿರುವ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸುವ ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೀಪಾವಳಿ ಹಬ್ಬದ ನಂತರ ಬೆಂಗಳೂರಿನ ನಾಗರೀಕರ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ನಮ್ಮ ಸರ್ಕಾರ ಮುಂದಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏಕರೂಪ ಖಾತಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಎಲ್ಲರಿಗೂ ಒಂದೇ ರೀತಿ ಖಾತ ನೀಡಲು ಮುಂದಾಗಿದ್ದೇವೆ. ಮೊದಲು ನಾವು ಇ ಖಾತಾ ನೀಡಲು ಆರಂಭಿಸಿದೆವು. ಇಲ್ಲಿ ಎದುರಿಸಿದ ಅಡಚಣೆಗಳನ್ನು ಸರಿಪಡಿಸಿದ್ದೇವೆ. ಆಸ್ತಿಗಳ ದಾಖಲೆ ಡಿಜಿಟಲೀಕರಣ ಮಾಡಲು ಸ್ಕ್ಯಾನ್ ಮಾಡಿದ್ದೇವೆ. ಆನ್ ಲೈನ್ ಖಾತಾ ವ್ಯವಸ್ಥೆ ತಂದಿದ್ದೇವೆ. ಇದೆಲ್ಲದರ ನಂತರ ನಾವು ಈ ಖಾತಾ ಪರಿವರ್ತನೆ ಮಾಡುತ್ತಿದ್ದೇವೆ. ಕಳೆದ 50 ವರ್ಷಗಳಿಂದ ಇಂತಹ ತೀರ್ಮಾನ ಆಗಿರಲಿಲ್ಲ. ನಮ್ಮ ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇದು ನಮ್ಮ ಸರ್ಕಾರದ ಆರನೇ ಗ್ಯಾರಂಟಿಯಾಗಿದೆ. ನಿಮ್ಮ ಆಸ್ತಿ, ನಿಮ್ಮ ಹಕ್ಕು. ನಿಮ್ಮ ಹಕ್ಕನ್ನು ನಾವು ಸರಿಪಡಿಸುತ್ತಿದ್ದೇವೆ ಎಂದು ತಿಳಿಸಿದರು. ನಗರದಲ್ಲಿ 25 ಲಕ್ಷ ಆಸ್ತಿಗಳಿದ್ದು, ಇದರಲ್ಲಿ 7.5 ಲಕ್ಷ ಎ ಖಾತೆಗಳು, 7.5 ಲಕ್ಷ ಆಸ್ತಿಗಳು ಬಿ ಖಾತೆ ಹೊಂದಿವೆ. ಇನ್ನು 7-8 ಲಕ್ಷ ಆಸ್ತಿಗಳು ಬಿ ಖಾತೆ ಪಡೆಯಲೂ ಅನುಮೋದನೆ ಪಡೆದಿಲ್ಲ. ಈ ಕಾರ್ಯಕ್ರಮದ ಮೂಲಕ ಜನರ ಆಸ್ತಿ ದಾಖಲೆಗಳನ್ನು ಕಾಪಾಡಿಕೊಳ್ಳಲು ನಮ್ಮ ಸರ್ಕಾರ 6ನೇ ಗ್ಯಾರಂಟಿ ನೀಡುತ್ತಿದೆ, ನಿಮ್ಮ ಭೂಮಿಯ ಆಸ್ತಿ ಮೌಲ್ಯ ಭರ್ಜರಿ ಹೆಚ್ಚಳವಾಗಲಿದೆ ಎಂದು ತಿಳಿಸಿದರು.
ಕೆಟಿಸಿಪಿ ಕಾಯ್ದೆ 61 ರ ಅಡಿಯಲ್ಲಿ ಅನುಮೋದನೆಗೊಂಡ ಕಂದಾಯ ಜಮೀನಿನಲ್ಲಿ ಇರುವ ನಿವೇಶನಗಳು. ಅಂದರೆ ಈ ಭೂಮಿಯಲ್ಲಿ ಒಂದಷ್ಟು ಜನರು ಭೂ ಪರಿವರ್ತನೆ ಮಾಡಿಕೊಳ್ಳದೆ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ಈ ಆಸ್ತಿಗಳಿಗೆ ಬಿ ಖಾತಾ ನೀಡಲಾಗಿತ್ತು. ಇಂತಹವರಿಗೆ ಬ್ಯಾಂಕ್ ಸಾಲ ದೊರೆಯುತ್ತಿರಲಿಲ್ಲ, ಕಾನೂನು ಪ್ರಕಾರ ಕಟ್ಟಡ ನಕ್ಷೆಗೆ ಅನುಮತಿ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಪರದಾಡಬೇಕಿತ್ತು. ಸರ್ಕಾರದ ಈ ಕ್ರಮದಿಂದ ಜನರಿಗೆ ಈ ಪರದಾಟ ತಪ್ಪಲಿದೆ. ನಾವು ಈ ನಿವೇಶನಗಳಲ್ಲಿ ಕಟ್ಟಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು ಈಗ ಕೈಹಾಕುತ್ತಿಲ್ಲ ಎಂದು ಹೇಳಿದರು.
ನಾವು ಮೊದಲನೆಯದಾಗಿ ಕಂದಾಯ ಜಮೀನಿನಲ್ಲಿ ಇರುವ ಎಲ್ಲಾ ಬಡಾವಣೆ ರಸ್ತೆಗಳನ್ನು ಸರ್ಕಾರಿ ರಸ್ತೆಗಳು ಎಂದು ಘೋಷಣೆ ಮಾಡಿದ್ದೇವೆ. ಏಕೆಂದರೆ ಜಮೀನಿನ ಮಾಲೀಕರು ಎರಡಕ್ಕಿಂತ ಹೆಚ್ಚು ಖರೀದಿದಾರರಿಗೆ ನಿವೇಶನ ನೋಂದಣಿ ಮಾಡಿಸಿ ದೋಖಾ ಮಾಡುತ್ತಿದ್ದರು. ಇದನ್ನು ತಪ್ಪಿಸಲು ಕಳೆದ ವಿಧಾನಸಭಾ ಅಧಿವೇಶನದಲ್ಲಿಯೇ ಈ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದರು. ನಗರ ಯೋಜನಾ ಪ್ರಾಧಿಕಾರವಾಗಿ ಬಿಡಿಎ ನಿರ್ವಹಣೆ ಮಾಡುತ್ತಿದ್ದ ಕೆಲಸವನ್ನು ಇನ್ನುಮುಂದೆ ಜಿಬಿಎ ನಿರ್ವಹಿಸಲಿದೆ. ಇಲ್ಲಿ ಏಕಗವಾಕ್ಷಿ ಯೋಜನೆ ತಂದಿದ್ದೇವೆ. ಆಮೂಲಕ ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸಿದ್ದೇವೆ. ಅಲಿನೇಷನ್ ಹಣವನ್ನು ನಾವೇ ತೆಗೆದುಕೊಂಡು ಕಂದಾಯ ಇಲಾಖೆಗೆ ಪಾವತಿ ಮಾಡುವುದು. ಆನಂತರ ನಮ್ಮ ಶುಲ್ಕವನ್ನು ಪಡೆಯುವುದು ಎಲ್ಲವೂ ಒಂದೇ ಕಡೆ ನಡೆಯುತ್ತದೆ. ಕಳೆದ 50 ವರ್ಷಗಳಿಂದ ಯಾರೂ ಮಾಡದ ಕೆಲಸವನ್ನು ಈಗ ಮಾಡಲಾಗುತ್ತಿದೆ" ಎಂದರು.
ನಮ್ಮ ಸರ್ಕಾರದ ಈ ಕೆಲಸವನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ನಮ್ಮ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿದೆ. ದೇಶದಲ್ಲಿಯೇ ಯಾರೂ ಇಂತಹ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿಲ್ಲ ಎಂದು ಪ್ರಶಂಸೆ ಮಾಡಿ ಶುಭ ಹಾರೈಸಿದೆ. ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಪ್ರಶಸ್ತಿ ನೀಡಿದ್ದಾರೆ. ಇದಕ್ಕೆ ಶ್ರಮಿಸುತ್ತಿರುವ ಎಲ್ಲ ಅಧಿಕಾರಿಗಳಿಗೆ ಜನರು ಹಾಗೂ ಸರ್ಕಾರದ ಪರವಾಗಿ ಅಭಿನಂದಿಸುತ್ತೇನೆ ಎಂದರು.












Click it and Unblock the Notifications