2028ರ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಘೋಷಿಸಿದ ಡಿ ಕೆ ಶಿವಕುಮಾರ್
ಬೆಂಗಳೂರು, ಜೂನ್ 02: 2018 ರ ದಾಸರಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಆರ್ ಮಂಜುನಾಥ್ ಅವರು ಕಣಕ್ಕಿಳಿದಿದ್ದು, ಭರ್ಜರಿ ಗೆಲುವು ಸಾಧಿಸಿದ್ದರು. 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್ ಮುನಿರಾಜು ಅವರು ಗೆಲುವು ಸಾಧಿಸಿದ್ದು, ಜೆಡಿಎಸ್ ಅಭ್ಯರ್ಥಿಯಾಗಿದ್ದ ಆರ್ ಮಂಜುನಾಥ್ ಅವರು ಹೀನಾಯವಾಗಿ ಸೋಲು ಅನುಭವಿಸಿದ್ದರು. ಇನ್ನೂ ಸೋಲು ಕಂಡ ಆರ್ ಮಂಜುನಾಥ್ ಅವರು 2023 ರ ನವೆಂಬರ್‌ನಲ್ಲಿ ಜೆಡಿಎಸ್ ಬಿಟ್ಟು ತಮ್ಮ ಬೆಂಬಲಿಗರೊಂದಿಗೆ ಗೆಲುವು ಸಾಧಿಸಿದ್ದರು.
ಕಾಂಗ್ರೆಸ್ ಸೇರ್ಪಡೆಯ ನಂತರ ಆರ್ ಮಂಜುನಾಥ್ ಅವರು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮುಂದಾಗಿದ್ದು, ಮೂರು ವರ್ಷದ ಮುನ್ನವೇ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನ ಘೋಷಣೆ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಮಾಜಿ ಶಾಸಕ ಮಂಜುನಾಥ್ ಗೆ ಎಲ್ಲಾ ರೀತಿ ಹೇಳಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ, ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳಿದ್ದೆ. ಮಂಜಣ್ಣ ನನ್ನ ಮಾತು ಕೇಳಿದ್ದರೆ, ನನ್ನ ಹಾಗೂ ಕೃಷ್ಣ ಭೈರೇಗೌಡ ಅವರ ಮಧ್ಯೆ ವಿಧಾನಸೌಧದಲ್ಲಿ ಕೂರುತ್ತಿದ್ದರು ಎಂದು ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಮಂಜಣ್ಣ ಇಲ್ಲಿ ಶಾಸಕರಾಗಿ ಗೆದ್ದಿದ್ದು, ತನ್ನ ಸಾಮರ್ಥ್ಯದ ಮೇಲೆ ಹೊರತು ಜೆಡಿಎಸ್ ಪಕ್ಷದಿಂದ ಅಲ್ಲ. ಈಗ ಆಗಿಹೋಗಿರುವುದನ್ನು ಬಿಟ್ಟು, ಮುಂಬರುವ 2028ರ ಚುನಾವಣೆಯಲ್ಲಿ ನೀವು ಮಂಜಣ್ಣ ಅವರನ್ನು ವಿಧಾನ ಸೌಧದಲ್ಲಿ ಕೂರಿಸಬೇಕು ಎಂದು ಡಿ ಕೆ ಶಿವಕುಮಾರ್ ಹೇಳುವ ಮೂಲಕ ದಾಸರಹಳ್ಳಿ ಅಭ್ಯರ್ಥಿಯನ್ನ ಘೋಷಿಸಿದ್ದಾರೆ.
ನಮ್ಮ ಸರ್ಕಾರ ಈ ದೇಶಕ್ಕೆ ಮಾದರಿ. ಬಿಜೆಪಿ ಭಾವನೆ ಮೇಲೆ ರಾಜಕೀಯ ಮಾಡಿದರೆ, ನಾವು ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆ. ನಮಗೆ ನಿಮ್ಮ ಬದುಕು ಮುಖ್ಯ. ನಿಮಗೆ ಪ್ರತಿ ತಿಂಗಳು ಕನಿಷ್ಠ 5 ಸಾವಿರ ಉಳಿತಾಯ ಆದರೆ ನಿಮಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ನಾವು ಗ್ಯಾರಂಟಿ ಯೋಜನೆ ಜಾರಿಗೆ ತಂದೆವು. ಬೆಲೆ ಏರಿಕೆ ಸಮಸ್ಯೆಯಿಂದ ಜನರನ್ನು ರಕ್ಷಣೆ ಮಾಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಾಲ್ಕು ವರ್ಷ ಅಧಿಕಾರದಲ್ಲಿತ್ತು. ಬಿಜೆಪಿ ಇಂತಹ ಒಂದೇ ಒಂದು ಯೋಜನೆಯನ್ನು ನೀಡಲಿಲ್ಲ.
ನಿಮ್ಮ ಶಾಸಕರು ಕೇವಲ ಬರಿ ಮಾತಲ್ಲೇ ನಿಮಗೆ ಮರಳು ಮಾಡುತ್ತಿದ್ದಾರೆ. ಖಾಲಿ ಡಬ್ಬಾದಂತೆ ಕೇವಲ ಸದ್ದು ಮಾತ್ರ ಮಾಡುತ್ತಾರೆ. ಮಂಜಣ್ಣ ಇಲ್ಲಿ ಸೋತಿದ್ದರು. 8 ಸಾವಿರ ಕುಟುಂಬಗಳ ಆಸ್ತಿಯನ್ನು ಇ ಖಾತಾ ಮಾಡುಸಿದ್ದಾರೆ. ನಮ್ಮ ಪಾಲಿಗೆ ಇಲ್ಲಿ ಮಂಜುನಾಥ್ ಅವರೇ ಶಾಸಕರು. ಅವರು ಹೇಳಿದಂತೆ ನಾವು ಕೇಳುತ್ತೇವೆ. ನಿಮ್ಮ ಆಸ್ತಿ ದಾಖಲೆ ಸರಿಪಡಿಸಿ, ಅದನ್ನು ನಿಮ್ಮ ಮನೆಬಾಗಿಲಿಗೆ ಉಚಿತವಾಗಿ ತಲುಪಿಸುವ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ ಎಂದರು.
ಬೆಂಗಳೂರಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರಗಳ ಕೊಡುಗೆಯೇ ಹೆಚ್ಚು. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ 1 ಲಕ್ಷ ಕೋಟಿ ಮೊತ್ತದ ದೊಡ್ಡ ಯೋಜನೆಗಳನ್ನು ಹಮ್ಮಿಕೊಂಡಿದೆ. ಕಳೆದ 20 ವರ್ಷಗಳಲ್ಲಿ ಬೆಂಗಳೂರು ಜನತೆ 70 ಲಕ್ಷದಿಂದ 1.50 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಬೆಂಗಳೂರಿನ ಅಭಿವೃದ್ಧಿಗೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ 1 ಲಕ್ಷ ಕೋಟಿ ಮೊತ್ತದ ಯೋಜನೆ ರೂಪಿಸಿದ್ದೇವೆ. ನಿಮ್ಮ ಕ್ಷೇತ್ರದಲ್ಲಿ ಹಾದು ಹೋಗುವ ನೆಲಮಂಗಲ ಮೇಲ್ಸೇತುವೆ ಬಿಜೆಪಿಯವರು ಮಾಡಿದ್ದಲ್ಲ, ಕೃಷ್ಣ ಭೈರೇಗೌಡ ಅವರ ಕ್ಷೇತ್ರದಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆ, ಹೊಸೂರು ರಸ್ತೆಯಲ್ಲಿರುವ ಮೇಲ್ಸೇತುವೆ, ಕೋಲಾರಕ್ಕೆ ಡಬಲ್ ರೋಡ್ ಮಾಡಿದ್ದು ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ. ಬೆಂಗಳೂರಿನಲ್ಲಿ ಇಂತಹ ಯಾವುದೇ ಕಾರ್ಯಕ್ರಮವಿದ್ದರೂ ಅದು ಕಾಂಗ್ರೆಸ್ ಸರ್ಕಾರದ ಕೊಡುಗೆಯೇ ವಿನಃ ಬಿಜೆಪಿ ಸರ್ಕಾರವಲ್ಲ ಎಂದು ತಿಳಿಸಿದರು.












Click it and Unblock the Notifications