ಚಿನ್ನ ಮತ್ತು ಇಂಧನ ಬೆಲೆ ಏರಿಕೆ ಬಗ್ಗೆ ಪ್ರಧಾನಿ ಮೌನ: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ
ಬೆಂಗಳೂರು: ಚಿನ್ನ ಖರೀದಿ ಹಾಗೂ ಇಂಧನ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಲಹೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಬೆಲೆ ಏರಿಕೆಗೆ ಕಾರಣವೇನು ಎಂಬುದನ್ನು ಕೇಂದ್ರ ಸರ್ಕಾರ ಮೊದಲು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಅವರು, ತ್ಯಾಗದ ಸಂದೇಶ ನೀಡುವ ಮೊದಲು ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರು ಅದನ್ನು ಅನುಸರಿಸಲಿ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಸರ್ಕಾರಿ ನಿವಾಸ ಕುಮಾರಪಾರ್ಕ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶದ ಜನರಿಗೆ ಕೊಟ್ಟಿರುವ ಸಲಹೆ ಬಗ್ಗೆ ಕೇಳಿದಾಗ, "ಮದುವೆ, ಮುಂಜಿ ಮಾಡುವವರು ಚಿನ್ನ ತೆಗೆದುಕೊಳ್ಳಬೇಡಿ ಎಂದು ಹೇಳಲು ಸಾಧ್ಯವೇ? ಅವರು ಸಲಹೆಗಳನ್ನು ನೀಡುತ್ತಾರೆ. ಹಿಂದೆ ಕೋವಿಡ್ ಬಂದಾಗ ದೀಪ ಹಚ್ಚಿಸಿ, ಚಪ್ಪಾಳೆ ತಟ್ಟಿಸಿದರು. ಅದರಿಂದ ಸಮಸ್ಯೆ ನಿಂತು ಹೋಯಿತಾ? ಮದುವೆಯಾದ ಮಹಿಳೆ ಚಿನ್ನದ ತಾಳಿ, ಸರ ಹಾಕಿಕೊಳ್ಳುವುದುನ್ನು ಬೇಡ ಎನ್ನಲು ಸಾಧ್ಯವೇ? ಅವರ ಬದುಕಿನಲ್ಲಿ ಕಷ್ಟವೋ ಸುಖವೋ, ಸಾಲ ಮಾಡಿ ಚಿನ್ನ ಖರೀದಿ ಮಾಡುತ್ತಾರೆ. ಎಲ್ಲರನ್ನು ಸಾರ್ವಜನಿಕ ಸಾರಿಗೆಯಲ್ಲೇ ಓಡಾಡಿ ಎನ್ನುವುದಾದರೆ, ಪ್ರಧಾನ ಮಂತ್ರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತೆ ಸೂಚಿಸಲಿ. ಅವರ ಕೇಂದ್ರ ಸಚಿವರಿಗೆ ತಾಕೀತು ಮಾಡಲಿ. ನಾವು ಮೊದಲು ನಡೆದುಕೊಂಡು ನಂತರ ಸಾಮಾನ್ಯ ಜನಕ್ಕೆ ಸಂದೇಶ ನೀಡಬೇಕು" ಎಂದರು.
ಬಿಜೆಪಿ ಶಾಸಕರು, ನಾಯಕರು, ಕಾರ್ಯಕರ್ತರಿಂದ ತ್ಯಾಗ ಪ್ರಾರಂಭವಾಗಲಿ
ಜಗತ್ತಿನ ಪರಿಸ್ಥಿತಿ ಸರಿಯಿಲ್ಲ ಕೆಲವೊಮ್ಮೆ ತ್ಯಾಗಕ್ಕೂ ಸಿದ್ಧವಾಗಿರಬೇಕು ಎಂಬ ಕಾರಣಕ್ಕೆ ಸಂದೇಶ ನೀಡಿದ್ದಾರೆ ಎಂದಾಗ, "ಮೊದಲು ತ್ಯಾಗವನ್ನು ಮಂತ್ರಿಗಳು, ಕೇಂದ್ರ ಸರ್ಕಾರದ ಸಚಿವರು, ಅಧಿಕಾರಿಗಳು, ಬಿಜೆಪಿ ಆಡಳಿತ ರಾಜ್ಯಗಳಲ್ಲಿರುವ ಅಧಿಕಾರಿಗಳಿಂದ, ಅವರ ಪಕ್ಷದ ಶಾಸಕರು, ನಾಯಕರು ಹಾಗೂ ಕಾರ್ಯಕರ್ತರಿಂದ ತ್ಯಾಗ ಆರಂಭವಾಗಲಿ. ನಂತರ ಬೇರೆಯವರಿಗೆ ತ್ಯಾಗದ ಸಲಹೆ ನೀಡಲಿ" ಎಂದು ತಿರುಗೇಟು ನೀಡಿದರು.
ಬೆಂಗಳೂರಿಗೆ ಗ್ಯಾರಂಟಿ ಯೋಜನೆ; ಮೇ 13ರಂದು ಪ್ರಕಟ
ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ಜಿಬಿಎ ಸಭೆ ಮಾಡಿದ್ದೀರಿ ಎಂದು ಕೇಳಿದಾಗ, "ಸುರ್ಜೆವಾಲ ಅವರ ಜೊತೆ ರಾಜಕೀಯವಾಗಿ ಸಭೆ ಮಾಡಿದ್ದೇವೆ. ಅಧಿಕಾರಿಗಳನ್ನು ಕರೆದು ಕೆಲವು ಸೂಚನೆ ನೀಡಿದ್ದು, ಬೆಂಗಳೂರು ನಗರಕ್ಕೆ ದೊಡ್ಡ ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ, ಈ ಬಗ್ಗೆ ಮೇ 13ರಂದು ಮಾಹಿತಿ ನೀಡುತ್ತೇವೆ" ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಹೊಳೆಲ್ಕೆರೆಯಲ್ಲಿ ಸಚಿವ ಡಿ ಸುಧಾಕರ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸೋಮವಾರ ಸಂಜೆ ಪಾಲ್ಗೊಂಡರು. ಇದಕ್ಕೂ ಮೊದಲು ಅಂತಿಮ ನಮನ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ, ವಿಧಾನಸಭಾಧ್ಯಕ್ಷ ಯು ಟಿ ಖಾದರ್, ಸಚಿವರಾದ ಎಚ್ ಕೆ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಸುಧಾಕರ್ ಅವರ ಪತ್ನಿ ಹರ್ಷಿಣಿ, ಪುತ್ರ ಸುಹಾಸ್, ಪುತ್ರಿ ಸ್ಫೂರ್ತಿ ಮತ್ತಿತರರು ಉಪಸ್ಥಿತರಿದ್ದರು.














Click it and Unblock the Notifications