ತನ್ನ ಬಣದ ಶಾಸಕರಿಂದ ಹೈಕಮಾಂಡ್ ಭೇಟಿ: ಡಿ.ಕೆ.ಶಿವಕುಮಾರ್ ರಿಯಾಕ್ಷನ್
ಡಿ.ಕೆ.ಶಿವಕುಮಾರ್ ಅವರ ಬಣದ ಕೆಲ ಶಾಸಕರು ದೆಹಲಿಗೆ ತೆರಳಿ, ಹೈಕಮಾಂಡ್ ಬಳಿ ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ, ಅಲ್ಲದೆ ಡಿಕೆ ಶಿವಕುಮಾರ್ ಅವರೇ ಸಿಎಂ ಸ್ಥಾನಕ್ಕಾಗಿ ತಮ್ಮ ಬಣದ ಶಾಸಕರಿಂದ ಹೈಕಮಾಂಡ್‌ಗೆ ಒತ್ತಡ ಹಾಕಲು ಮಾಸ್ಟರ್‌ಪ್ಲ್ಯಾನ್ ಮಾಡಿದ್ದಾರೆ ಎಂಬ ವಿಚಾರದ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಶಾಸಕರು ದೆಹಲಿಗೆ ಹೋಗಿದ್ದು ಯಾವ ಕಾರಣಕ್ಕೆ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಸಿಎಂ ಹುದ್ದೆಯ ಬಗ್ಗೆ ಇರುವ ಊಹಾಪೋಹಗಳ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್, 'ಮುಖ್ಯಮಂತ್ರಿಗಳು ಸಂಪುಟ ಪುನರ್‌ರಚನೆ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಎಲ್ಲರೂ ಸಚಿವರಾಗಲು ಬಯಸುತ್ತಾರೆ. ಆದ್ದರಿಂದ ಅವರು ದೆಹಲಿಯಲ್ಲಿ ನಾಯಕರನ್ನು ಭೇಟಿಯಾಗುವುದು ಸಹಜ ಎಂದಿದ್ದಾರೆ. ಅದು ಅವರ ಹಕ್ಕು. ನಾವು ಅವರನ್ನು ತಡೆಯಲು ಆಗಲ್ಲ, ಇಲ್ಲ ಎಂದು ಹೇಳಲು ಸಾಧ್ಯವಿಲ್ಲ' ಎಂದಿದ್ದಾರೆ.

'ಸಂಪುಟ ಪುನರ್‌ರಚನೆಗೆ ಸಿಎಂ ನಿರ್ಧರಿಸಿದ್ದಾರೆ. ಆದ್ದರಿಂದ ಅವರೆಲ್ಲರೂ ಸಚಿವರಾಗಲು ಆಸಕ್ತಿ ಹೊಂದಿದ್ದಾರೆ. ಅವರು ದೆಹಲಿಯಲ್ಲಿ ನಾಯಕರನ್ನು ಭೇಟಿಯಾಗಲು ಹೋಗುವುದು ಸಹಜ. ಅದರ ಹೊರತಾಗಿ, ನಾನು ಏನು ಹೇಳಲಿ? ಅವರಿಗೆ ಎಲ್ಲಾ ಹಕ್ಕಿದೆ. ನಾನು ಯಾರನ್ನೂ ಕರೆದುಕೊಂಡು ಹೋಗಿಲ್ಲ' ಎಂದಿದ್ದಾರೆ ಡಿ.ಕೆ.ಶಿವಕುಮಾರ್.
'ಅವರಲ್ಲಿ ಕೆಲವರು ಹೋಗಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ. ಅವರು ಸಿಎಂ ಅವರನ್ನು ಕೂಡ ಭೇಟಿಯಾಗಿದ್ದಾರೆ. ಇದರಲ್ಲಿ ಏನು ತಪ್ಪು? ಅದು ಅವರ ಜೀವನ. ಯಾರೂ ಅವರನ್ನು ಕರೆದಿಲ್ಲ, ಅವರೇ ಸ್ವಯಂಪ್ರೇರಣೆಯಿಂದ ಹೋಗಿ ತಮ್ಮ ಮುಖಗಳನ್ನು ತೋರಿಸುತ್ತಿದ್ದಾರೆ. ಅವರು ಮುಂಚೂಣಿಯಲ್ಲಿದ್ದಾರೆ, ಕೆಲಸ ಮಾಡಬಹುದು ಮತ್ತು ಜವಾಬ್ದಾರಿಯನ್ನು ಬಯಸುತ್ತಾರೆ ಎಂದು ತಮ್ಮ ಉಪಸ್ಥಿತಿಯನ್ನು ತೋರಿಸಲು ಬಯಸಿದ್ದರು' ಎಂದು ಸ್ಪಷ್ಟನೆ ನೀಡಿದ್ದಾರೆ.
'ನನ್ನ ಯಾವ ಬಣವೂ ಇಲ್ಲ'
'ನನ್ನ ಬಳಿ ಯಾವ ಬಣವೂ ಇಲ್ಲ. ನಾನು ಯಾವ ಬಣದ ನಾಯಕನೂ ಅಲ್ಲ. ಗುಂಪು ಕಟ್ಟುವುದು ನನ್ನ ರಕ್ತದಲ್ಲಿಯೇ ಇಲ್ಲ. ಎಲ್ಲ 140 ಶಾಸಕರಿಗೂ ನಾನು ಕಾಂಗ್ರೆಸ್ ಅಧ್ಯಕ್ಷ. ನನಗೆ ಎಲ್ಲ ಶಾಸಕರು ಮುಖ್ಯ. ನಾನು ಯಾವ ಗುಂಪನ್ನು ಕರ್ಕೊಂಡು ಹೋಗಿಲ್ಲ. ಆ ಕೆಲಸ ನಾನು ಮಾಡೋದೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ವರ್ಷಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಅವರಿಗೆ ಶುಭ ಹಾರೈಸುತ್ತೇನೆ. ನಾವೆಲ್ಲರೂ ಅವರೊಂದಿಗೆ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿ ಮತ್ತು ನಾನು ಇಬ್ಬರೂ ಹೈಕಮಾಂಡ್‌ಗೆ ಬದ್ಧರಾಗಿರುತ್ತೇವೆ ಎಂದು ಪದೇ ಪದೇ ಹೇಳುತ್ತಿದ್ದೇವೆ' ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications