'ಅಕ್ಟೋಬರ್-ನವೆಂಬರ್ ಅಂತ್ಯಕ್ಕೆ ಹಾಲಿ ಸಿದ್ದರಾಮಯ್ಯ ಗದ್ದುಗೆಯ ExpiryDate ಮುಗಿಯಲಿದೆ'
ಬೆಂಗಳೂರು, ಮಾರ್ಚ್ 11: ಸಿನಿಮಾದವರ ನಟ್ಟು ಬೋಲ್ಟ್ ಟೈಟ್ ಮಾಡುತ್ತೇನೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಾತಿಗೆ ಕರ್ನಾಟಕ ಬಿಜೆಪಿಯೂ ತಿರುಗೇಟು ನೀಡಿದೆ. ನಟ್ಟು-ಬೋಲ್ಟು ಟೈಟ್ ಮಾಡುವುದರಲ್ಲಿ ನಿಸ್ಸೀಮರಾಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಸಿಎಂ ಕುರ್ಚಿಯ ನಟ್ಟು ಬೋಲ್ಟುಗಳನ್ನು ಕಳಚುವುದರಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ ಎಂದು ಬಿಜೆಪಿ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಅಕ್ಟೋಬರ್-ನವೆಂಬರ್ ಅಂತ್ಯಕ್ಕೆ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗದ್ದುಗೆಯ ExpiryDate(ಅವಧಿ ಮುಕ್ತಾಯ) ಮುಗಿಯಲಿದ್ದು, ಆ ಸ್ಥಾನಕ್ಕೆ ಹೊಂಚು ಹಾಕಿರುವ ಡಿ ಕೆ ಶಿವಕುಮಾರ್ ಅವರು ಈಗಿನಿಂದಲೇ ಸಿದ್ದರಾಮಯ್ಯ ಅವರ ಕುರ್ಚಿಯ ನಟ್ಟು-ಬೋಲ್ಟುಗಳನ್ನು ಲೂಸ್ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಬಿಜೆಪಿ ಹೇಳಿದೆ.

ದೇಶದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ದಿವಾಳಿ ಆಗುತ್ತಿರುವುದನ್ನು ಆ ರಾಜ್ಯಗಳ ಮುಖ್ಯಮಂತ್ರಿಗಳೇ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಹಿಮಾಚಲ ಪ್ರದೇಶ ಸರ್ಕಾರ ದಿವಾಳಿಯಾಗಿ ಶೌಚಾಲಯಕ್ಕೂ ಟ್ಯಾಕ್ಸ್ ಆಗುವ ದುಸ್ಥಿತಿಗೆ ತಲುಪಿದೆ. ಇನ್ನೊಂದೆಡೆ ಗ್ಯಾರಂಟಿಗಳನ್ನು ನಿಲ್ಲಿಸಿರುವ ಸಿದ್ದರಾಮಯ್ಯ ಸರ್ಕಾರ ಬೆಲೆ ಏರಿಕೆ ಮೂಲಕ ಹಗಲು ದರೋಡೆ ಮಾಡುತ್ತಿದೆ. ಮತ್ತೊಂದೆಡೆ ತೆಲಂಗಾಣದ ಸರ್ಕಾರ ಗ್ಯಾರಂಟಿಗಳನ್ನು ನೀಡಲು ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂದು ಅಸಹಾಯಕತೆ ತೋರಿಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳನ್ನು ದಿವಾಳಿ ಮಾಡುತ್ತಿರವುದು ಖಚಿತ ನಿಶ್ಚಿತ ಎಂಧು ಬಿಜೆಪಿ ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಕ್ಕೆ ದರಿದ್ರ ಹಿಡಿದಿದೆ. ಲೂಟಿಯೊಂದನ್ನೇ ಅಜೆಂಡಾವಾಗಿರಿಸಿಕೊಂಡಿರುವ ಸಿದ್ದರಾಮಯ್ಯ ಅವರು ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದ್ದು, ಇದೀಗ ಮಧ್ಯಾಹ್ನದ ಬಿಸಿಯೂಟಕ್ಕೆ ಅಡುಗೆ ಎಣ್ಣೆ, ಬೇಳೆಯನ್ನೇ ಸರ್ಕಾರ ಪೂರೈಕೆ ಮಾಡುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಿನಿಂದ ಎಣ್ಣೆ, ಬೇಳೆ ಕಾಳು ಇಲ್ಲದೆ ಅಡುಗೆ ಮಾಡಿ ಮಕ್ಕಳಿಗೆ ಬಡಿಸುವಂತಾಗಿದೆ. ಮಧ್ಯಾಹ್ನದ ಬಿಸಿಯೂಟ ತಯಾರು ಮಾಡಲು ಅಡುಗೆ ಎಣ್ಣೆ ಮತ್ತು ಬೇಳೆಯನ್ನು ಸರ್ಕಾರ 3 ತಿಂಗಳಿಂದ ಕೊಡುತ್ತಿಲ್ಲ. ಮೊಟ್ಟೆಗೂ ಸರ್ಕಾರದ ಹಣ ಸಾಲುತ್ತಿಲ್ಲ ಎಂದು ಸ್ವಪಕ್ಷದ ಶಾಸಕರೇ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ದರಿದ್ರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಜ್ಯಪಾಲರಿಗೆ ಸುಳ್ಳು ಅಂಕಿ-ಅಂಶಗಳ ಮಾಹಿತಿ ನೀಡಿ ಭಾಷಣ ಹೇಳಿಸುವ ಸಿದ್ದರಾಮಯ್ಯ ಅವರೇ, ಇದಕ್ಕೆ ಏನು ಹೇಳುವಿರಿ? ಶಾಲಾ ಮಕ್ಕಳಿಗೆ ಎಣ್ಣೆ - ಬೇಳೆಯನ್ನೇ ಸರಿಯಾಗಿ ಪೂರೈಕೆ ಮಾಡೋಕೆ ಸಾಧ್ಯವಾಗದವರು ರಾಜ್ಯವನ್ನು ಹೇಗೆ ಉದ್ದಾರ ಮಾಡುವಿರಿ? ಎಂದು ಪ್ರಶ್ನಿಸಿದರು.
ಬೆಂಗಳೂರನ್ನು ವಿಭಜನೆ ಮಾಡಲು ಹೊರಟಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ರಾಜಕೀಯ ವಿಕೇಂದ್ರೀಕರಣದ ಬದಲು ಆಡಳಿತ ವಿಕೇಂದ್ರೀಕರಣ ಮಾಡಿ. ಕೆಂಪೇಗೌಡರು ಕಟ್ಟಿದ ನಗರವನ್ನು ವಿಭಜಿಸುವುದು ಸರಿಯಲ್ಲ. ಅಧಿಕಾರದ ವಿಕೇಂದ್ರೀಕರಣಕ್ಕೆ ಸರ್ಕಾರ ಆದ್ಯತೆ ನೀಡಲಿ. ಈಗಾಗಲೇ ನೂರಾರು ಪ್ರದೇಶದಲ್ಲಿ ನೀರಿನ ಅಭಾವ ಕಾಡುತ್ತಿದೆ. ಬೆಂಗಳೂರನ್ನು ವಿಭಜಿಸಿ ಮಹಾನಗರ ಪಾಲಿಕೆಗಳ ನಡುವೆ ಘರ್ಷಣೆ ಸೃಷ್ಟಿಸಬೇಡಿ. ಈಗಾಗಲೇ ವಿಪಕ್ಷಗಳ ಶಾಸಕರಿಗೆ ಅನುದಾನ ತಾರತಮ್ಯ ನಡೆಯುತ್ತಿದೆ. ಇನ್ನು ಬಹು ಮಹಾನಗರ ಪಾಲಿಕೆಗಳ ಸೃಷ್ಟಿಯಿಂದಾಗಿ ಅನುದಾನದ ವಿಚಾರದಲ್ಲಿ ಮತ್ತಷ್ಟು ಗೊಂದಲಗಳು ಮೂಡಲಿದೆ ಎಂದು ಬಿಜೆಪಿ ಹೇಳಿದೆ.












Click it and Unblock the Notifications