ಕರ್ನಾಟಕದ ಜಿಲ್ಲಾ ಸುದ್ದಿಗಳ ಇಣುಕು ನೋಟ
ಬೀದರ್, ನ.21 : ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ಸಮಸ್ಯೆ ನಿವಾರಣೆಗೆ ಶಾಶ್ವತ ಯೋಜನೆ ರೂಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕದ 213 ಪಟ್ಟಣಗಳಲ್ಲಿ ಇಂತಹ ಶಾಶ್ವತ ಕುಡಿಯುವ ನೀರು, ಒಳಚರಂಡಿ ಯೋಜನೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬೀದರ್ ಜಿಲ್ಲೆಯ ಗುರುಮಠಕಲ್ ನಲ್ಲಿ ಜವಾಹರಲಾಲ್ ನೆಹರು ಮೈದಾನದಲ್ಲಿ ಬುಧವಾರ 27 ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, 13 ನೇ ಪಂಚವಾರ್ಷಿಕ ಯೋಜನೆಯಡಿ ಸುಮಾರು 25,862 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು, ಒಳಚರಂಡಿ ಯೋಜನೆ ಪೂರ್ಣ ಗೊಳಿಸಲಾಗುವುದು ಎಂದರು.
ಸರ್ಕಾರ 2013-14ನೇ ಸಾಲಿನಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ, ವಿದ್ಯುತ್ ಸೇರಿದಂತೆ ಸುಮಾರು 191 ಯೋಜನೆಗಳನ್ನು 380 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಹೈದರಾಬಾದ್ ಕರ್ನಾಟಕದ ಪ್ರದೇಶಗಳ ಅಭಿವೃದ್ಧಿಗೂ ವಿಶೇಷ ಸಾಮಾಜಿಕ, ಆರ್ಥಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಿಎಂ ಹೇಳಿದರು. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಪಟ್ಟಣಗಳ ಅಭಿವೃದ್ಧಿಗೆ ಶಾಶ್ವತ ಯೋಜನೆ
ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ಸಮಸ್ಯೆ ನಿವಾರಣೆಗೆ ಶಾಶ್ವತ ಯೋಜನೆ ರೂಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕದ 213 ಪಟ್ಟಣಗಳಲ್ಲಿ 13 ನೇ ಪಂಚವಾರ್ಷಿಕ ಯೋಜನೆಯಡಿ ಸುಮಾರು 25,862 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು, ಒಳಚರಂಡಿ ಯೋಜನೆ ಪೂರ್ಣ ಗೊಳಿಸಲಾಗುವುದು ಎಂದರು. ಸರ್ಕಾರ 2013-14ನೇ ಸಾಲಿನಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ, ವಿದ್ಯುತ್ ಸೇರಿದಂತೆ ಸುಮಾರು 191 ಯೋಜನೆಗಳನ್ನು 380 ಕೋಟಿ ವೆಚ್ಚದಲ್ಲಿ ವಿವಿಧ ಪಟ್ಟಣಗಳಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಸಹಾಯಕ ಆಯುಕ್ತರಿಗೆ 10 ಸಾವಿರ ದಂಡ
ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಎಂಎನ್‌ಜಿಟಿ ಲೋಡರ್ಸ್ ಯೂನಿಯನ್ ಕಚೇರಿ ಕಟ್ಟಡ ನಿರ್ಮಿಸಿರುವ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸದ ಮೈಸೂರು ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಿಗೆ ಕರ್ನಾಟಕ ಮಾಹಿತಿ ಆಯೋಗವು 10 ಸಾವಿರ ದಂಡ ವಿಧಿಸಿದೆ. ರೇಲ್ವೆ ಗೂಡ್ಸ್ ಲೋಡರ್ಸ್ ಯೂನಿಯನ್ ಕಚೇರಿ ಕಟ್ಟಡ ಅಕ್ರಮವೆ? ಅದರ ಒಡೆತನದ ವಿವರ, ಖಾತೆ, ಪರವಾನಗಿ, ನಕ್ಷೆ, ದಾಖಲೆಗಳ ಪ್ರತಿಗಳನ್ನು ಒದಗಿಸಬೇಕು ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರ ನೀಡಿದ ಸಹಾಯಕ ಆಯುಕ್ತರು ದಂಡ ಪಾವತಿ ಮಾಡಬೇಕಾಗಿದೆ.

ಹಸಿರು ಸೇನೆಯಿಂದ ಸುವರ್ಣ ಸೌಧಕ್ಕೆ ಮುತ್ತಿಗೆ
ಉತ್ತರ ಕರ್ನಾಟಕದ ವಿವಿಧ ಜ್ವಲಂತ ಸಮಸ್ಯೆಗಳನ್ನ್ನು ಮುಂದಿಟ್ಟುಕೊಂಡು, ಸುವರ್ಣ ವಿಧಾನಸೌಧಕ್ಕೆ ನ.25ರಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಚಾಮರಸ ಮಾಲಿ ಪಾಟೀಲ್ ಹೇಳಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರದ ಕಬ್ಬು ಖರೀದಿ ಹಾಗೂ ನಿಯಂತ್ರಣ ಮಂಡಳಿ ಟನ್ ಕಬ್ಬಿಗೆ 2500 ಘೋಷಣೆ ಮಾಡಿದೆ. ಆದರೆ ಕಾರ್ಖಾನೆಗಳು ಮಾತ್ರ 2 ಸಾವಿರ ದರ ನೀಡುವುದಾಗಿ ಹೇಳುತ್ತಿವೆ. ಹೀಗಾಗಿ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸಕ್ಕರೆ ಕಾರ್ಖಾನೆಗಳ ಧೋರಣೆ, ಸರ್ಕಾರದ ನಿಷ್ಕ್ರಿಯತೆ ಖಂಡಿಸಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.

ಮಧುಮೇಹ ಕುರಿತ ಅರಿವು ಶಿಬಿರ
ಡಯಾಬಿಟಿಸ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಯಲ್ಲಿ ನ.23ರಂದು ಡಯಾಬಿಟಿಸ್ ಮೇಳ ಹಾಗೂ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಿಂಡಿಕೇಟ್ ಬ್ಯಾಂಕ್‌ನ ಮುಖ್ಯಸ್ಥ ಪ್ರಭಾಕರ ಶೆಣೈ, ಶಂಕರ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಜಿ. ಶಂಕರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಜನರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಹಂಪಿ ಉತ್ಸವ ಸರಳವಾಗಿ ಆಚರಣೆ
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಹೊರತುಪಡಿಸಿ, ಉಳಿದ ಎಲ್ಲ 6 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿರುವ ಹಿನ್ನಲೆಯಲ್ಲಿ, ಈ ಬಾರಿಯ ಹಂಪಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್ ಹೇಳಿದ್ದಾರೆ. ಪ್ರತಿ ವರ್ಷ 25ರಿಂದ 30ಕೋಟಿ ರೂ. ಖರ್ಚು ಮಾಡಿ ಹಂಪಿ ಉತ್ಸವ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ 6 ಕೋಟಿ ರೂ. ವೆಚ್ಚದಲ್ಲಿ ಹಂಪಿ ಉತ್ಸವ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

44 ಗ್ರಾಮಗಳಿಗೆ ಶುದ್ಧ ನೀರಿನ ಘಟಕ
ಚಿತ್ರದುರ್ಗ ಜಿಲ್ಲೆಯ ಆರು ತಾಲೂಕುಗಳ 201 ಹಳ್ಳಿಗಳು ಫ್ಲೋರೈಡ್ ಅಂಶದ ನೀರಿನ ಸಮಸ್ಯೆಯಿಂದ ಬಳಲುತ್ತಿವೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದಂತೆ ಜಿಲ್ಲೆಯ 44 ಗ್ರಾಮಗಳಲ್ಲಿ ನೀರಿನ ಶುದ್ಧೀಕರಣ ಘಟಕ ಅಳವಡಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹೊಸದುರ್ಗ ತಾಲೂಕಿಗೆ ಅತ್ಯಧಿಕ ಪ್ರಮಾಣದ ಅಂದರೆ 23, ಚಳ್ಳಕೆರೆ 8, ಚಿತ್ರದುರ್ಗ 4, ಹಿರಿಯೂರು 3, ಮೊಳಕಾಲ್ಮೂರು 2, ಹೊಳಲ್ಕೆರೆ ತಾಲೂಕಿಗೆ ಒಂದು ನೀರಿನ ಶುದ್ಧೀಕರಣ ಘಟಕ ಮಂಜೂರಾಗಿವೆ.

ಅನುದಾನ ಖರ್ಚು ಮಾಡಲು ಗಡುವು
ಕೋಲಾರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ವಿಕಲ ಚೇತನರ ಅಭಿವೃದ್ಧಿಗಾಗಿ ಮೀಸಲಿಟ್ಟ ಶೇ.3ರ ಅನುದಾನವನ್ನು ಡಿಸೆಂಬರ್ ಅಂತ್ಯದೊಳಗೆ ಖರ್ಚು ಮಾಡಿ ಜ.15ರೊಳಗೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ, ಇದನ್ನು ನಿರ್ಲಕ್ಷಿಸಿದರೆ ಅಟ್ರಾಸಿಟಿ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಬೇಕಾದೀತು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕೃಷಿ ಸಂಶೋಧನಾ ಕೇಂದ್ರದ ಅಮೃತ ಮಹೋತ್ಸವ
ಮಂಡ್ಯ ತಾಲೂಕಿನ ವಿ.ಸಿ.ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದ ಅಮೃತ ಮಹೋತ್ಸವ ನ.22ರಂದು ನಡೆಯಲಿದೆ. ಜಿಲ್ಲೆಯಲ್ಲಿನ ಕಬ್ಬು ಬೆಳೆಗಳ ಬಗ್ಗೆ ಸಂಶೋಧ ಮಾಡಲು, 1931ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಸಂಶೋಧನಾ ಕೇಂದ್ರ ಆರಂಭಿಸಿದ್ದರು. ಕೃಷಿ ಸಂಶೋಧನಾ ಕೇಂದ್ರವನ್ನು ಮೊದಲು ಇರ್ವಿನ್ ನಾಲಾ ಪ್ರದೇಶವೆಂದು ಗುರುತಿಸಲಾಗುತ್ತಿತ್ತು. 1945ರಲ್ಲಿ ಇದು ವಿಶ್ವೇಶ್ವರಯ್ಯ ನಾಲಾ ಪ್ರದೇಶವೆಂದು ಪುನರ್ ನಾಮಕರಣಗೊಂಡಿತು.












Click it and Unblock the Notifications