KSRTC ಅಂಬಾರಿ ಉತ್ಸವಕ್ಕೆ ಬೊಮ್ಮಾಯಿ ಚಾಲನೆ: ಮಹಿಳೆ-ವಿದ್ಯಾರ್ಥಿನಿಯರಿಗೆ ಉಚಿತ ಬಸ್ ವಿತರಣೆಗೆ ಸೂಚನೆ
ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4-9600 ಸ್ಲೀಪರ್ ಬಸ್ಸುಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.
ಬೆಂಗಳೂರು, ಫೆಬ್ರವರಿ 21: ರಾಜ್ಯ ಸರ್ಕಾರ ಈಗಾಗಲೇ ಬಜೆಟ್ ನಲ್ಲಿ ಘೋಷಿಸಿರುವಂತೆ ದುಡಿಯುವ ಮಹಿಳೆಯರಿಗೆ ಮತ್ತು ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಹೊಸ ಹಣಕಾಸು ವರ್ಷದ (ಏಪ್ರಿಲ್ 1) ಆರಂಭದಿಂದ ಕಲ್ಪಿಸಲು ಕ್ರಮ ಕೈಗೊಳ್ಳಿ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4-9600 ಸ್ಲೀಪರ್ ಬಸ್ಸುಗಳನ್ನು ಲೋಕಾರ್ಪಣೆ ಮಾಡಿ ಅವರು ಅಧಿಕಾರಿಗಳಿಗೆ ಈ ರೀತಿ ಸೂಚನೆ ನೀಡಿದರು. ಮಹಿಳೆಯರು ಗೌರವಯುಥವಾಗಿ, ಆರ್ಥಿಕ ಸ್ವಾವಲಂಬಿ ಜೀವನ ನಡೆಸಲು ಈ ವ್ಯವಸ್ಥೆ ರೂಪಿಸಲಾಗಿದೆ.
ಸರ್ಕಾರ ಮಿನಿ ಸ್ಕೂಲ್ ಬಸ್‌ಗಳನ್ನು ಪರಿಚಯಿಸುವುದರ ಜೊತೆಗೆ ಹಾಲಿ ಬಸ್ ಸಂಚಾರ ಮುಂದುವರಿಸಬೇಕು. ಶೈಕ್ಷಣಿಕ ವರ್ಷದ ವೇಳೆ ಶಾಲೆ ಆರಂಭವಾಗುವ ಸಮಯದಲ್ಲಿ ಎಲ್ಲ ತಾಲೂಕಿನಲ್ಲಿ ಕಡಿಮೆ ಎಂದರೂ ಐದು ಬಸ್ ಸಂಚಾರ ಆರಂಭಿಸಬೇಕು, ಅಗತ್ಯದಷ್ಟು ಅನುದಾನ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಆರ್ಥಿಕ ಬೆಳವಣಿಗೆ ಸಹಕಾರಿಯಾಗುತ್ತಿರುವ ಸಂಚಾರ ವ್ಯವಸ್ಥೆ ಸರ್ಕಾರ ಬೆಂಬಲಿಸುತ್ತಲೇ ಇದೆ. ಬಜೆಟ್ ನಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ದುಡಿಯುವ ಹೆಣ್ಣುಮಕ್ಕಳಿಗೆ ಉಚಿತ ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದು, ಸರ್ಕಾರ ನೌಕರ ವರ್ಗ ಹಾಗೂ ಆಡಳಿತ ಮಂಡಳಿ ಜೊತೆಗಿರುತ್ತದೆ. ಸಾರ್ವಜನಿಕರಿಗೂ ಅತ್ಯುತ್ತಮ ಸೇವೆ ನೀಡೋಣ ಎಂದರು.

KSRTC ಸಂಚಾರದ ವಿಶೇಷ ಪಡೆಗೆ ಚಾಲನೆ
ಕೆಎಸ್‌ಆರ್‌ಟಿಸಿಯ ಹೊಸ ಸಂಚಾರದ ವಿಶೇಷ ಪಡೆಗೆ ಚಾಲನೆ ನೀಡಿದ್ದೇವೆ. ಇದರಲ್ಲಿ ಸ್ಲೀಪರ್ ವ್ಯವಸ್ಥೆ ಇದೆ. ದೊರ ಪ್ರಯಾಣಕ್ಕೆ ಅಗತ್ಯವಿರುವ ರೈಲ್ವೆ ಮಾದರಿಯಲ್ಲಿವುದಕ್ಕಿಂತ ಉತ್ತಮವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಹಿಂದೆ ವೊಲ್ವೊ ಬಸ್ ಗಳು ಹೆಚ್ಚು ಅನುಕೂಲಕರವಾಗಿರಲಿಲ್ಲ. ಹಿಂದಿನ ಸಮಸ್ಯೆಗಳನ್ನು ತಿಳಿದುಕೊಂಡು ಈ ಬಸ್‌ಗಳಲ್ಲಿ ಅಗತ್ಯ ಮಲ್ಟಿ ಎಕ್ಸೆಲ್ ವ್ಯವಸ್ಥೆಗೆ ಅನುವು ಮಾಡಿಕೊಡಲಾಗಿದೆ. ರಾತ್ರಿ ಪ್ರಯಾಣ ಇದರಲ್ಲಿ ಸುಖಕರವಾಗಿರಲಿದೆ. ಈ ರೀತಿಯ ಇನ್ನಷ್ಟು ಬಸ್ ಪಡೆಯುವುದು ಸೂಕ್ತ ಎಂದು ನಿಗಮಕ್ಕೆ ಸಲಹೆ ನೀಡಿದರು.

KSRTCಗೆ ಖಾಸಗಿಯವರ ಪೈಪೋಟಿ
ವಿಶಿಷ್ಟ ಇತಿಹಾಸ ಹೊಂದಿರುವ KSRTC ಉತ್ತಮ ಸೇವೆ ನೀಡುತ್ತಿದೆ ಎಂದು ತಮ್ಮ ಕಾಲೇಜಿನಲ್ಲಿ ಬಸ್‌ನಲ್ಲಿ ತೆರಳುತ್ತಿದ್ದ ದಿನಗಳನ್ನು ಸ್ಮರಿಸಿದರು. ಗ್ರಾಮೀಣ ಜನರುಸರ್ಕಾರಿ ಸಾರಿಗೆ ಹೆಚ್ಚು ನೆಚ್ಚಿಕೊಂಡಿದ್ದಾರೆ. ಇಂತಹ ಸೇವೆಯು ಇಂದು ಖಾಸಗೀಕರಣದಿಂದ ಪೈಪೋಟಿ ಎದುರಿಸುತ್ತಿದೆ. ಖಾಸಗಿಯವರು ಲಾಭದಾಯಕ ಮಾರ್ಗಗಳಲ್ಲಿ ಮಾತ್ರ ಸಂಚಾರ ನಡೆಸುತ್ತಾರೆ. ಸಾಮಾಜಿಕವಾಗಿ ಕೆಲಸ ಮಾಡುವ ಮಾರ್ಗಗಳನ್ನು KSRTC ಗೆ ಬಿಟ್ಟು ಬಿಡುತ್ತಾರೆ. ನಾವು ಸೇವಾ ವಲಯದಲ್ಲಿಯೂ ಹಾಗೂ ವಾಣಿಜ್ಯ ಮಾರ್ಗಗಳಲ್ಲಿಯೂ ಸಂಚರಿಸಿ ನಿಗಮವನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಬೊಮ್ಮಾಯಿ ತಿಳಿಸಿದರು.

ನಿಗಮದ ಆದಾಯ ಹೆಚ್ಚಿಸಲು ಸಿಎಂ ಸಲಹೆ
ಮುಂದಿನ ದಿನಗಳಲ್ಲಿ KSRTC ಯಲ್ಲಿ ಮಹತ್ವದ ಬದಲಾವಣೆ ಆಗಲಿವೆ. ಕೆಲವು ಹಿಂದಿನ ಕ್ರಮ ಅನುಸರಿಸಲಿದ್ದೇವೆ. ಕೋವಿಡ್ ಹಾಗೂ ನಂತರದಲ್ಲಿ ಎಲ್ಲಾ ರಂಗಗಳಲ್ಲಿ ಕುಸಿತ ಕಂಡಿತು. ಈ ವೇಳೆ ಕೆಎಸ್‌ಆರ್‌ಟಿಸಿ ಸಹ ಸಾಕಷ್ಟು ತೊಂದರೆ ಎದುರಿಸಿತು. ಆಗ ನಿಗಮಕ್ಕೆ ಅಗತ್ಯ ಹಣಕಾಸಿನ ನೆರವು ಸರ್ಕಾರ ನೀಡಿತು. 2 ವರ್ಷವೂ ಬೆಂಬಲ ನೀಡಿ ನೌಕರರಿಗೆ ವೇತನ, ಡೀಸೆಲ್ ಬಿಲ್ ಗೆ ಅನುದಾನ ಒದಗಿಸಲಾಗಿದೆ. ನಷ್ಟದಲ್ಲಿದ್ದ ಸಾರಿಗೆ ನಿಗಮಗಳಿಗೆ 4600 ಕೋಟಿ ರೂ. ನೀಡಲಾಗಿದೆ ಎಂದು ಅವರು ವಿವರಿಸಿದರು.

ಸಾರಿಗೆ ನಿಗಮಗಳಿಗೆ ಸರ್ಕಾರದ ಬೆಂಬಲ
ನಿಗಮಗಳಿಗೆ ರಾಜ್ಯ ಸರ್ಕಾರ ಅಗತ್ಯ ಸರ್ವರೀತಿಯ ಬೆಂಬಲ ಒದಗಿಸಲು ಸಿದ್ದವಿದೆ. ತೆರಿಗೆ ವಿನಾಯಿತಿ ಅವಕಾಶ ಸಹ ನೀಡಲಿದೆ. ಸಾರಿಗೆ ನಿಗಮಗಳು ವಾಣಿಜ್ಯ ಮಾರ್ಗಗಳ ಸಂಚಾರ ಹಾಗೂ ಸೋರಿಕೆ ತಡೆಯುವ ಮೂಲಕ ಆದಾಯ ಹೆಚ್ಚಳಕ್ಕೆ ಪ್ರಯತ್ನ ಪಡಬೇಕು. ಖರೀದಿಯಲ್ಲಿನ ಪಾರದರ್ಶಕತೆ ತರಬೇಕು. ಬಿಡಿ ಭಾಗ, ಆಯಿಲ್, ಟೈಯರ್ ಖರೀದಿಯಲ್ಲಿ ಪಾರದರ್ಶಕತೆ ತಂದು ವೆಚ್ಚವನ್ನು ಕಡಿಮೆ ಮಾಡಬೇಕು. ಸಾರಿಗೆ ಸಂಸ್ಥೆಯನ್ನು ಮತ್ತೊಮ್ಮೆ ಲಾಭದಾಯಕವಾಗಿ ನಡೆಸಬೇಕು ಎಂಬ ಅಭಿಲಾಷೆಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಸಿಬ್ಬಂದಿ ವೇತನ ಹೆಚ್ಚಳದ ಪ್ರಸ್ತಾವ
ಸಾರಿಗೆ ನೌಕರರ ಸಿಬ್ಬಂದಿ ಸಂಬಳ ಏರಿಕೆ ಮಾಡಲು ಪ್ರಸ್ತಾವನೆ ಬಂದಿದೆ. ಹಣಕಾಸಿನ ಇತಿಮಿತಿಯಲ್ಲಿ ನೌಕರರೊಂದಿಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು. ತಂತ್ರಜ್ಞಾನ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ಪ್ರಯಾಣಿಕರ ಆಯ್ಕೆಗಳು ಬದಲಾಗುತ್ತಿದೆ. ಇದನ್ನು ಗಮನಿಸಿ, ಖಾಸಗಿಯವರೊಂದಿಗೆ ಪೈಪೋಟಿ ಮಾಡಿ ಅವರಿಗಿಂತ ಹೆಚ್ವು ಸೇವೆ ನೀಡಿ ಜನಮನ ಗೆಲ್ಲಬೇಕು ಎಂದು ಕರೆ ನೀಡಿದರು. ಸೂಚಿತ ಕಾರ್ಯಸೂಚಿಗೆ ತಕ್ಕ ಹಾಗೆ ಸೇವೆ ನೀಡಬೇಕು ಎಂದರು.
ಸಚಿವ ಆರ್.ಅಶೋಕ್, ಕೆ.ಎಸ್.ಆರ್.ಟಿ. ಸಿ ಅಧ್ಯಕ್ಷ ಚಂದ್ರಪ್ಪ ,ಉಪಾಧ್ಯಕ್ಷ ಮೋಹನ್ ಮೆಣಸಿನಕಾಯಿ, ಶಾಸಕರಾದ ಸೋಮಶೇಖರ್ ರೆಡ್ಡಿ, ಸತೀಶ್ ರೆಡ್ಡಿ, ನಿವೃತ್ತ ಐ.ಎ. ಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಮತ್ತಿತರರು ಇದ್ದರು.












Click it and Unblock the Notifications