ಕಾಂಗ್ರೆಸ್‌ಗೆ ಕೈ ಕೊಟ್ಟ ಜಾಧವ್: ಇನ್ನೂ ಮೂವರು ಶಾಸಕರು ಅದೇ ದಾರಿಯಲ್ಲಿ?

ಬೆಂಗಳೂರು, ಮಾರ್ಚ್ 04: ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದ ಉಮೇಶ್ ಜಾಧವ್ ಅವರು ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ನೀಡಿದ ಬೆನ್ನಲ್ಲೆ ಅತೃಪ್ತ ಕಾಂಗ್ರೆಸ್ ಶಾಸಕರ ಕಡೆಗೆ ಎಲ್ಲರ ಚಿತ್ತ ಹರಿದಿದೆ.
ಅತೃಪ್ತ ಶಾಸಕರಲ್ಲಿ ಒಬ್ಬರಾಗಿದ್ದ ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಕಾಂಗ್ರೆಸ್‌ನ ಉಳಿದ ಅತೃಪ್ತ ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ವಿಧಾನಸೌಧದ ಪಡಸಾಲೆಗಳಲ್ಲಿ ಹರಿದಾಡುತ್ತಿದೆ.
ಈಗ ಎಲ್ಲರ ಚಿತ್ತ ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ, ಮಹೇಶ್ ಕುಮಟಳ್ಳಿ ಅವರ ಕಡೆಗೆ ಹರಿದಿದೆ. ಈ ಶಾಸಕರು ಸಹ ಯಾವಾಗಲಾದರೂ ಕಾಂಗ್ರೆಸ್‌ಗೆ 'ಕೈ' ಕೊಡಬಹುದು ಎನ್ನಲಾಗುತ್ತಿದೆ.
ಲೋಕಸಭಾ ಸೀಟು ಹಂಚಿಕೆ : ಕಾಂಗ್ರೆಸ್ ನಾಯಕರಿಗೆ ಪಟ್ಟಿ ಕೊಟ್ಟ ಜೆಡಿಎಸ್
ಮಾರ್ಚ್ 6 ರಂದು ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬರುತ್ತಿದ್ದು, ಕಲಬುರ್ಗಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಈಗ ರಾಜೀನಾಮೆ ನೀಡಿರುವ ಉಮೇಶ್ ಜಾಧವ್ ಅವರು ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ಗೆ ಮುಖಭಂಗ ಮಾಡಲು ಯೋಜನೆ
ಅಲ್ಲದೇ ಅದೇ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರುಗಳ ಜೊತೆ ಕೆಲವು ಕಾಂಗ್ರೆಸ್ ಅತೃಪ್ತ ಶಾಸಕರು ಕಾಣಿಸಿಕೊಂಡು ಕಾಂಗ್ರೆಸ್‌ಗೆ ತೀವ್ರ ಮುಖಭಂಗ ಉಂಟು ಮಾಡುವ ಸರ್ವ ಸಾಧ್ಯತೆ ಇದೆ.
ಇದೇ ನನ್ನ ಕೊನೆಯ ಚುನಾವಣೆ : ಮಲ್ಲಿಕಾರ್ಜುನ ಖರ್ಗೆ

ಮೂವರು ಶಾಸಕರು ಕೈ ಕೊಡುತ್ತಾರಾ?
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ ಪ್ರಸಾದ್ ಅವರುಗಳು ಕಾಂಗ್ರೆಸ್ ಪಕ್ಷದ ಒಳಗಿದ್ದರೂ ಒಂದು ಕಾಲು ಹೊರಗೆ ಇಟ್ಟಾಗಿದೆ. ಬಿಜೆಪಿಯ ತೆಕ್ಕೆಗೆ ಉರುಳಿ ಒಂದು ಬಾರಿ ರೆಸಾರ್ಟ್ ದರ್ಶನವನ್ನೂ ಮಾಡಿಬಂದಿದ್ದಾರೆ.
ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ರಾಜೀನಾಮೆ, ಮಾ.6 ರಂದು ಬಿಜೆಪಿಗೆ

ಎಚ್‌ಡಿಕೆ ಆಡಿಯೋ ಹೊಡೆತದಿಂದ ಹಿನ್ನಡೆ
ಯಡಿಯೂರಪ್ಪ ಅವರ ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡಿದ್ದ ಕುಮಾರಸ್ವಾಮಿ ಅವರು, ಆಪರೇಷನ್ ಕಮಲದ ಬಳ್ಳಿ ಬಿಜೆಪಿ ಕೊರಳಿಗೆ ಸುತ್ತಿಕೊಳ್ಳುವಂತೆ ಮಾಡಿ, ಯಡಿಯೂರಪ್ಪ ಅವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ ಕಾರಣ ಅತೃಪ್ತ ಶಾಸಕರು ಆಟಾಟೋಪ ಆಗ ನಿಂತಿತ್ತು. ಆದರೆ ಈಗ ಜಾಧವ್ ರಾಜೀನಾಮೆ ನೀಡಿರುವುದರಿಂದ ಅತೃಪ್ತರು ಮತ್ತೆ ತಮ್ಮ ಅತೃಪ್ತಿಯನ್ನು ತೋರಲು ಮುಂದಾಗುವ ಸಾಧ್ಯತೆ ಇದೆ.

ಬಿಜೆಪಿ ಸೇರಲಿದ್ದಾರೆ ಉಮೇಶ್ ಜಾಧವ್?
ಮೋದಿ ಅವರ ಕಾರ್ಯಕ್ರಮದಲ್ಲಿ ಕನಿಷ್ಟ ಮೂರು ಮಂದಿ ಕಾಂಗ್ರೆಸ್ ಅತೃಪ್ತ ಶಾಸಕರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜಾಧವ್ ಈಗಾಗಲೇ ರಾಜೀನಾಮೆ ನೀಡಿರುವ ಕಾರಣ ಅವರು ಮೋದಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಇನ್ನು ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ, ಮಹೇಶ್ ಕುಮಟಳ್ಳಿ ಅವರು ಮೋದಿ ಅವರ ಸಮಾವೇಶದಲ್ಲಿ ಕಾಣಿಸಿಕೊಳ್ಳುವ ಸೂಚನೆ ಇದೆ.