ದಿನೇಶ್ ಗುಂಡೂರಾವ್‌ರ ಅರ್ಧ ಮನೆ ಪಾಕಿಸ್ತಾನವೆಂದ ಯತ್ನಾಳ್: ರೊಚ್ಚಿಗೆದ್ದ ದಿನೇಶ್ ಪತ್ನಿ ಮಾಡಿದ್ದೇನು?
ಬೆಂಗಳೂರು, ಏಪ್ರಿಲ್ 08: ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿಅರ್ಧ ಪಾಕಿಸ್ತಾನ ಇದೆ ಎಂದುಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಈಗ ಮತ್ತೊಂದು ದೂರು ದಾಖಲಾಗಿದೆ. ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ಅವರು ಯತ್ನಾಳ್ ವಿರುದ್ಧ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಿಸಿದ್ದಾರೆ.
ಶಾಸಕ ಯತ್ನಾಳ್ ಅವರ ಹೇಳಿಕೆ ಕೀಳು ಮಟ್ಟದ್ದಾಗಿದೆ. ಸಮಾಜದಲ್ಲಿ ಧಾರ್ಮಿಕ ಭಾವನೆಗಳನ್ನ ಕೆರಳಿಸುವಂತೆ ಹೇಳಿಕೆ ಕೊಟ್ಟಿದ್ದಾರೆ. ನಾನು ಮುಸ್ಲಿಂ ಕುಟುಂಬದಲ್ಲಿ ಜನಿಸಿರಬಹುದು. ಆದರೆ ನನ್ನ ಭಾರತೀಯತೆಯನ್ನ ಪ್ರಶ್ನೆ ಮಾಡಲಾಗದು. ಚುನಾವಣೆ ಹಿನ್ನೆಲೆಯಲ್ಲಿ ಯತ್ನಾಳ್ ಅವರು ಧಾರ್ಮಿಕ ಭಾವನೆಗಳನ್ನ ಕೆರಳಿಸುವ ದುರುದ್ದೇಶದಿಂದ ನಮ್ಮ ಕುಟುಂಬದ ಬಗ್ಗೆ ವೈಯಕ್ತಿಕವಾಗಿ ನಿಂದಿಸಿ ಹೇಳಿಕೆ ಕೊಟ್ಟಿದ್ದಾರೆ ಎಂದು ಟಬು ರಾವ್ ದೂರಿನಲ್ಲಿ ಹೇಳಿದ್ದಾರೆ.

ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಟಬು ರಾವ್, ಮಹಿಳೆಯರಿಗೆ ಗೌರವ ಕೊಟ್ಟು ಮಾತನಾಡುವ ಸಂಸ್ಕೃತಿ ಯತ್ನಾಳ್ ಅವರಿಗಂತು ಇಲ್ಲ. ಬಿಜೆಪಿಯವರದ್ದು ಯತ್ನಾಳ್ ಸಂಸ್ಕೃತಿಯೇ ಎಂದು ಟಬು ರಾವ್ ಕಟುವಾಗಿ ಪ್ರಶ್ನಿಸಿದ್ದಾರೆ. ನಾನು ರಾಜಕೀಯದಲ್ಲಿ ಇಲ್ಲ. ಅನಗತ್ಯವಾಗಿ ನಮ್ಮ ಕುಟುಂಬದ ಬಗ್ಗೆ ವೈಯಕ್ತಿಕ ನಿಂದನೆ ಮಾಡಿರುವುದು ಸರಿಯಲ್ಲ. ದಿನೇಶ್ ಗುಂಡೂರಾವ್ ಅವರ ವಿಚಾರದಲ್ಲಿ ಬೇಕಾದರೆ ಯತ್ನಾಳ್ ಅವರು ರಾಜಕೀಯವಾಗಿ ಮಾತನಾಡಲಿ. ಬರೀ ಮುಸ್ಲಿಂ ಕಾರ್ಡ್ ಬಳಸುವ ಬದಲು ತಮ್ಮ ಕೆಲಸ ಕಾರ್ಯಗಳ ಬಗ್ಗೆ ಮಾತಾಡಿ ಚುನಾವಣೆ ಎದುರಿಸಲಿ. ಅದು ಬಿಟ್ಟು ಇಂಥಹ ಕೀಳು ಅಭಿರುಚಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ಟಬು ರಾವ್ ಯತ್ನಾಳ್ ಅವರಿಗೆ ತಿರುಗೇಟು ನೀಡಿದ್ದಾರೆ.
ನಾನು ಆರ್. ಗುಂಡೂರಾವ್ ಫೌಂಡೇಷನ್ ನಿಂದ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನ ನಡೆಸಿಕೊಂಡು ಬಂದಿದ್ದೇನೆ. ಹಲವು ಹಿಂದು ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳನ್ನ ಫೌಂಡೇಷನ್ ಮೂಲಕ ಕೈಗೊಂಡಿದ್ದೇನೆ. ಹಿಂದು, ಮುಸ್ಲಿಂ ಎನ್ನದೇ ಎಲ್ಲ ಸಮಾಜದವರನ್ನು ಸಮಾನವಾಗಿ ನೋಡುವ ದೃಷ್ಟಿಕೋನ ಹೊಂದಿದವಳು ನಾನು. ಗಾಂಧೀ ನಗರದ ಜನತೆಗೆ ನಾನು ಕಳೆದ 25 ವರ್ಷಗಳಿಂದ ಚಿರಪರಿತ. ನಮ್ಮ ಕುಟುಂಬ ಗೌರವಯುತವಾಗಿ ಜನರ ಪರ ಕಾರ್ಯಗಳನ್ನ ನಡೆಸಿಕೊಂಡು ಬಂದಿದೆ ಎಂದು ಟಬು ರಾವ್ ಹೇಳಿದ್ದಾರೆ.
ಬಸವನಗೌಡ ಅವರ ಬುದ್ಧಿಭ್ರಮಣೆಗೆ ಉಚಿತ ಚಿಕಿತ್ಸೆ ಕೊಡಿಸುವ ಗ್ಯಾರಂಟಿ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕುಟುಂಬದ ಬಗ್ಗೆ ವೈಯಕ್ತಿಕ ನಿಂದನೆಯ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಅವರಿಗೆ ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಿದೆ. ಯತ್ನಾಳ್ ಅವರನ್ನ ಸ್ವತಃ ಬಿಜೆಪಿಯೇ ಎತ್ತಿ ಮೂಲೆಗೆ ಎಸೆದಿದೆ.. ಬಸವನಗೌಡ ಅವರ ಬಾಯಿ ಬಚ್ಚಲು ಎಂದು ಬಿಎಸ್ ವೈ ಬಣದ ನಾಯಕರೇ ಹೇಳುತ್ತಿದ್ದಾರೆ. ಯತ್ನಾಳ್ ಅವರ ಮಾನಸಿಕ ಹಾಗೂ ಬಾಯಿ ಚಿಕಿತ್ಸೆಗೆ ಕಾಂಗ್ರೆಸ್ ಸರ್ಕಾರ ಉಚಿತ ಚಿಕೆತ್ಸೆ ವ್ಯವಸ್ಥೆ ಕಲ್ಪಿಸಲು ಸಿದ್ಧ. ಇದು ಕಾಂಗ್ರೆಸ್ ನ ಗ್ಯಾರಂಟಿ ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.
ಮುಸ್ಲಿಂಮರೆಲ್ಲರನ್ನು ಪಾಕಿಸ್ತಾನ ದೃಷ್ಟಿಯಿಂದ ನೋಡುವ ಯತ್ನಾಳ್ ಅವರು ಸ್ವತಃ ಮೌಲ್ವಿ ಕುಟುಂಬದೊಂದಿಗೆ ವ್ಯವಹಾರಿಕ ಸಂಬಂಧ ಇಟ್ಟುಕೊಂಡಿರಲಿಲ್ಲವೇ. ಹಾಗಾದರೆ ಯತ್ನಾಳ್ ಅವರಿಗೂ ಪಾಕಿಸ್ತಾನದ ಜೊತೆ ಸಂಬಂಧವಿದೆ ಎನ್ನೋಣವೇ ಎಂದು ಬಸವನಗೌಡ ಯತ್ನಾಳ್ ಅವರನ್ನ ಕಾಂಗ್ರೆಸ್ ಪ್ರಶ್ನಿಸಿದೆ. ಪಾಕಿಸ್ತಾನದ ಜಪ ಮಾಡುವುದನ್ನ ಬಿಟ್ಟು ಬಿಜೆಪಿಯಲ್ಲಿ ನಿಮ್ಮ ಅಸ್ಥಿತ್ವ ಏನು ಎಂಬುದನ್ನ ಚಿಂತಿಸಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಬಿಜೆಪಿಯಲ್ಲಿ ಬದಿಗೆ ಸರಿದು ಬೀದಿಗೆ ಬಿದ್ದಿರುವ ಯತ್ನಾಳ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮತಿಭ್ರಮಣೆಯಲ್ಲಿ ಕೀಳು ಅಭಿರುಚಿಯ ಹೇಳಿಕೆಗಳನ್ನ ನೀಡುವ ಮೂಲಕ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ. ಬಸವನಗೌಡ ಯತ್ನಾಳ್ ಅವರಿಗೆ ಒಳ್ಳೆಯ ಟ್ರೀಟ್ ಮೆಂಟ್ ನ ಅಗತ್ಯತೆ ಇದೆ ಎಂದು ಕಾಂಗ್ರೆಸ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ನಿಟ್ಟಿನಲ್ಲಿ ಯತ್ನಾಳ್ ಅವರಿಗೆ ಉಚಿತ ಮಾನಸಿಕ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲು ಕಾಂಗ್ರೆಸ್ ಸರ್ಕಾರ ಸಿದ್ಧವಿದೆ. ಯತ್ನಾಳ್ ಅವರ ಬಾಯಿ ಚಿಕಿತ್ಸೆ ಹಾಗೂ ಮಾನಸಿಕ ಚಿಕಿತ್ಸೆ ಉಚಿತವಾಗಿ ಕಲ್ಪಿಸಿಕೊಡಲಿದ್ದು, ಇದು ಕಾಂಗ್ರೆಸ್ ನ ಗ್ಯಾರಂಟಿ ಎಂದು ತಿರುಗೇಟು ನೀಡಿದೆ.
ಇನ್ನು ಕುಟುಂಬದ ಬಗ್ಗೆ ವಯಕ್ತಿಕ ನಿಂದನೆ ಮಾಡಿರುವ ಯತ್ನಾಳ್ ಅವರ ಹೇಳಿಕೆ ಕೀಳು ಅಭಿರುಚಿಯದ್ದು.. ನಾನು ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಮಾತ್ರಕ್ಕೆ ನನ್ನ ಭಾರತೀಯತೆಯನ್ನ ಯಾರು ಪ್ರಶ್ನೆ ಮಾಡಲಾಗದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬಸು ರಾವ್ ಟ್ವೀಟ್ ಮಾಡಿದ್ದಾರೆ. ಇಂಥಹವರ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಲಿದೆಯೇ ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications