ದೇವೇಗೌಡ-ದಿನೇಶ್ ಗುಂಡೂರಾವ್ ಭೇಟಿ: ಸೀಟು ಹಂಚಿಕೆ ಮಾತುಕತೆ
ಬೆಂಗಳೂರು, ಫೆಬ್ರವರಿ 21: ದೇವೇಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪದ್ಮನಾಭ ನಗರ ನಿವಾಸದಲ್ಲಿ ಇಂದು ಭೇಟಿಯಾಗಿ ಲೋಕಸಭೆ ಸೀಟು ಹಂಚಿಕೆ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಇಬ್ಬರೂ ನಾಯಕರು ಚರ್ಚೆ ನಡೆಸಿದರು. ಲೋಕಸಭೆ ಚುನಾವಣೆ ಸೀಟು ಹಂಚಿಕೆ ವಿಚಾರವಾಗಿ ಜೆಡಿಎಸ್-ಕಾಂಗ್ರೆಸ್ ನಡುವೆ ನಡೆದ ಮೊದಲ ಅಧಿಕೃತ ಸಭೆ ಇದಾಗಿದೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಸೀಟು ಹಂಚಿಕೆ ಬಗ್ಗೆ ನಡೆದ ಪ್ರಾಥಮಿಕ ಹಂತದ ಮಾತುಕತೆ ಇದಾಗಿದ್ದು, ಒಳ್ಳೆಯ ಚರ್ಚೆ ಆಯಿತು, ಇನ್ನು ಎರಡು ಮೂರು ದಿನಗಳಲ್ಲಿ ಅಂತಿಮ ಚರ್ಚೆ ಆಗಲಿದೆ ಎಂದರು.
ಅಂತಿಮ ಸಭೆಯ ಬಳಿಕ ಹೈಕಮಾಂಡ್‌ಗೆ ಮಾಹಿತಿ ರವಾನೆ ಆಗುತ್ತದೆ, ಆ ನಂತರದ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಪ್ರಾಥಮಿಕ ಸಭೆ ಅಷ್ಟೆ
ಪ್ರಸ್ತುತ ಹಾಲಿ ಸಂಸದರಿರುವ ಕ್ಷೇತ್ರದಲ್ಲಿ ಬದಲಾವಣೆ ಮಾಡುವುದಿಲ್ಲ ಎಂಬ ಕಾಂಗ್ರೆಸ್ ತೀರ್ಮಾನದ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆ ಆಯಿತು, ಇದು ನಮ್ಮ ಪಕ್ಷದ ನಿರ್ಣಯವಾಗಿತ್ತು. ಈ ಬಗ್ಗೆ ದೇವೇಗೌಡರು ಅಭಿಪ್ರಾಯ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮಂಡ್ಯ-ಹಾಸನದ ಬಗ್ಗೆ ಮಾತಿಲ್ಲ
ಇಂದಿನ ಚರ್ಚೆ ಆರೋಗ್ಯಕರವಾಗಿತ್ತು ಎಂದು ಹೇಳಿದ ಅವರು, ಮಂಡ್ಯ ಮತ್ತು ಹಾಸನ ಕ್ಷೇತ್ರಗಳ ಬಗ್ಗೆ ಏನೂ ಮಾತನಾಡುವುದಿಲ್ಲ, ಯಾರಿಗೆ ಎಷ್ಟು ಸೀಟು ಎಂಬುದು ಸಹ ಇಂದು ಚರ್ಚೆ ಆಗಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸುವ ಉಮೇದು ದೇವೇಗೌಡರಿಗಿದೆ, ಆದರೆ ಸುಮಲತಾ ಅಂಬರೀಶ್ ಅದಕ್ಕೆ ಅಡ್ಡಗಾಲಾಗಿದ್ದಾರೆ.

ಕುಮಾರಸ್ವಾಮಿ-ದೇವೇಗೌಡ ಭೇಟಿ
ಇಂದು ಬೆಳಿಗ್ಗೆಯಷ್ಟು ಕುಮಾರಸ್ವಾಮಿ ಅವರು ದೇವೇಗೌಡ ಅವರನ್ನು ಭೇಟಿಯಾಗಿ ಲೋಕಸಭೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಿದ್ದರು. ಜೆಡಿಎಸ್‌ಗೆ 12 ಕ್ಷೇತ್ರಗಳು ಬೇಕು ಎಂಬುದು ಕುಮಾರಸ್ವಾಮಿ ಅವರ ಬೇಡಿಕೆ ಆಗಿದೆ.

ಕಾಂಗ್ರೆಸ್ ಯೋಜನೆ ಏನು?
ಪ್ರಸ್ತುತ ಸಂಸದರು ಇರುವ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಬೇಡ ಎನ್ನುವುದು ಜೊತೆಗೆ ಜೆಡಿಎಸ್‌ಗೆ ಆರು-ಏಳು ಸ್ಥಾನಗಳನ್ನು ನೀಡುವುದು ಎಂದು ಕಾಂಗ್ರೆಸ್ ನಿಶ್ಚಯಿಸಿದೆ ಎನ್ನಲಾಗಿದೆ. ಸೀಟು ಹಂಚಿಕೆಯು ಜೆಡಿಎಸ್-ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ ತಂದೊಡ್ಡುವ ಸಂಭವ ಇದೆ ಎನ್ನಲಾಗಿದೆ.












Click it and Unblock the Notifications