ಧಾರವಾಡಕ್ಕೆ ಮತ್ತೆ ಬಂತು ಆಧಾರ್ ಸೇವಾ ಕೇಂದ್ರ: ಸಚಿವ ಪ್ರಹ್ಲಾದ್ ಜೋಶಿ ಸಿಹಿಸುದ್ದಿ
ಧಾರವಾಡದಲ್ಲಿದ್ದ ಆಧಾರ್ ಸೇವಾ ನಿರ್ವಹಣಾ ಕೇಂದ್ರವನ್ನು ಈ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಈ ಕೇಂದ್ರವನ್ನು ಮತ್ತೆ ಆರಂಭಿಸಬೇಕು ಎಂಬ ಆಗ್ರಹ ಕೂಡ ಕೇಳಿಬಂದಿತ್ತು. ಈ ಹಿನ್ನೆಲೆ ಈ ಭಾಗದ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದೀಗ ಧಾರವಾಡದಲ್ಲಿ ಶೀಘ್ರವೇ ಆಧಾರ್ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆಯಾಗಲಿದೆ ಎಂದು ಜೋಶಿ ಸಿಹಿಸುದ್ದಿ ನೀಡಿದ್ದಾರೆ.
ಈ ಬಗ್ಗೆ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಕರ್ನಾಟಕದಲ್ಲಿ ಈ ಮೊದಲು 6 ಜಿಲ್ಲೆಗಳಲ್ಲಿ ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಈ ಸೌಲಭ್ಯವನ್ನು ರಾಜ್ಯದ ಹೆಚ್ಚಿನ ಜನರಿಗೆ ಅನಕೂಲವಾಗುವ ದೃಷ್ಟಿಯಿಂದ ಉಳಿದ ಪ್ರತಿ ಜಿಲ್ಲೆಗೂ ಒಂದರಂತೆ ರಾಜ್ಯಾದ್ಯಂತ 19 ಕೇಂದ್ರಗಳನ್ನು ಸ್ಥಾಪಿಸಲಾಯಿತು ಎಂದಿದ್ದಾರೆ.

ಆ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಮಾತ್ರ ಆಧಾರ ಕೇಂದ್ರ ಮುಂದುವರಿದಿತ್ತು. ಜಿಲ್ಲೆಗೆ ಒಂದೇ ಕೇಂದ್ರ ಎಂಬ ಹೊಸ ನಿಯಮದಂತೆ ಧಾರವಾಡದ ಕೇಂದ್ರವನ್ನು ಸ್ಥಗಿತಗೊಳಿಸಲಾಗಿತ್ತು. ನಾನು ಧಾರವಾಡ ಕೇಂದ್ರವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮರು ಪ್ರಾರಂಭಮಾಡಬೇಕೆಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ನೀಡಿ ವಿನಂತಿಸಿದ್ದೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರಾದ ಅರವಿಂದ ಬೆಲ್ಲದ ಅವರು ಕೂಡ ಸಹಿತ ಧಾರವಾಡದಲ್ಲಿ ಆಧಾರ್ ಸೇವಾ ಕೇಂದ್ರ ಸ್ಥಾಪನೆಗೆ ವಿನಂತಿಸಿದ್ದರು ಎಂದಿದ್ದಾರೆ.
ಕೂಡಲೇ ನನ್ನ ಮನವಿಗೆ ಸ್ಪಂದಿಸಿ, ಧಾರವಾಡ ಜಿಲ್ಲೆಗೆ ಅದರಲ್ಲಿಯೂ ಧಾರವಾಡದಲ್ಲಿ ಕೇಂದ್ರದ ಅವಶ್ಯಕತೆಯನ್ನು ಮನಗಂಡು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗ ಸೂಚನೆ ನೀಡಿದ್ದಾರೆ. ಧಾರವಾಡದಲ್ಲಿಯೂ ಒಂದು ಕೇಂದ್ರವನ್ನು ವಿಶೇಷ ಪ್ರಕರಣದಡಿ ಸ್ಥಾಪಿಸುವಂತೆ ಆದೇಶಿಸಿದ್ದಾರೆ. ಆದಷ್ಟು ಬೇಗನೆ ಧಾರವಾಡ ಆಧಾರ್ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆಗೆ ಶೀಘ್ರವಾಗಿ ಟೆಂಡರ್ ಕರೆಯಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ನನ್ನ ಮನವಿಗೆ ಸ್ಪಂದಿಸಿ ನಮ್ಮ ಧಾರವಾಡ ಜಿಲ್ಲೆಯ ಲಕ್ಷಾಂತರ ಜನರಿಗೆ ಅನಕೂಲವಾಗುವಂತೆ ಮತ್ತೊಂದು ಆಧಾರ್ ಸೇವಾ ಮತ್ತು ನಿರ್ವಹಿಸುವ ಕೇಂದ್ರವನ್ನು ಸ್ಥಾಪಿಸಲು ಒಪ್ಪಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ ಅನಂತ ಧನ್ಯವಾದಗಳು ಎಂದಿದ್ದಾರೆ.
ಆಧಾರ್ ಸೇವಾ ಕೇಂದ್ರದ ಸೇವೆಗಳು
ಆಧಾರ್ ಸೇವಾ ನಿರ್ವಹಣಾ ಕೇಂದ್ರವು UIDAIನಿಂದ ನಿರ್ವಹಿಸಲ್ಪಡುವ ಹವಾನಿಯಂತ್ರಿತ ಕೇಂದ್ರವಾಗಿದೆ. ಆಧಾರ್ ಕಾರ್ಡ್‌ಗೆ ಹೊಸದಾಗಿ ನೋಂದಾಯಿಸುವುದು, ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿಗಳ ನವೀಕರಣ ಮತ್ತು ಮಕ್ಕಳ ಬಯೋಮೆಟ್ರಿಕ್ ನವೀಕರಣದಂತಹ ಎಲ್ಲ ಸೇವೆಗಳನ್ನು ಒಂದೇ ಸ್ಥಳದಲ್ಲಿ ನೀಡುವ ತಾಣವಾಗಿದೆ. ಈ ಕೇಂದ್ರಗಳು ವಾರದ 7 ದಿನವೂ ಬೆಳಿಗ್ಗೆ 9:30ರಿಂದ ಸಂಜೆ 5:30ರವರೆಗೆ (ರಾಷ್ಟ್ರೀಯ ರಜಾ ದಿನಗಳನ್ನು ಹೊರತುಪಡಿಸಿ) ಕಾರ್ಯನಿರ್ವಹಿಸುತ್ತವೆ. ಇಲ್ಲಿ ವಿಕಲಚೇತನರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಇವು ಬ್ಯಾಂಕುಗಳು, ಅಂಚೆ ಕಚೇರಿಗಳೊಂದಿಗೆ ಕಾರ್ಯನಿರ್ವಹಿಸುತ್ತವೆ.
ಎಲ್ಲ ವಯೋಮಾನದವರಿಗೆ ಹೊಸ ಆಧಾರ್ ನೋಂದಣಿ, ಹೆಸರು, ವಿಳಾಸ, ಲಿಂಗ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ನವೀಕರಣ, ಫೋಟೋ, ಬೆರಳಚ್ಚು, ಐರಿಸ್ ಸ್ಕ್ಯಾನ್ ಬಯೋಮೆಟ್ರಿಕ್ ನವೀಕರಣ, 5 ಮತ್ತು 15 ವರ್ಷದ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ನವೀಕರಣ, ಆಧಾರ್ ಕಾರ್ಡ್ ನಕಲನ್ನು ಪಡೆಯುವುದು ಸೇರಿದಂತೆ ಅನೇಕ ಸೇವೆಗಳು ಇಲ್ಲಿ ಲಭ್ಯ. ಈ ಕ್ರಮದಿಂದ ಧಾರವಾಡ ಮಂದಿಗೆ ಈಗ ರಿಲೀಫ್ ಸಿಕ್ಕಿದೆ.












Click it and Unblock the Notifications