ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಳವಳ; ಮೋದಿಗೆ ಮಾಜಿ ಪ್ರಧಾನಿ ದೇವೇಗೌಡರ ಸಲಹೆ...

|
Google Oneindia Kannada News

ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಬಿಕ್ಕಟ್ಟನ್ನು ನಿವಾರಿಸುವ ಕುರಿತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕೆಲವು ಸಲಹೆಗಳನ್ನು ನೀಡಿದ್ದಾರೆ.

ನಾಲ್ಕು ಪುಟಗಳ ಪತ್ರವನ್ನು ಪ್ರಧಾನಿಯವರಿಗೆ ಬರೆದಿದ್ದು, "ಇದು ರಾಷ್ಟ್ರೀಯ ಬಿಕ್ಕಟ್ಟು. ಈ ಬಿಕ್ಕಟ್ಟಿನ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ಕೊರೊನಾದಿಂದ ಜೀವ ಉಳಿಸಲು, ಸಾವು ನೋವನ್ನು ಕಡಿಮೆ ಮಾಡಲು ರಚನಾತ್ಮಕ ಕ್ರಮಗಳಿಗೆ ನಾವೆಲ್ಲರೂ ಬೆಂಬಲ ನೀಡಬೇಕಿದೆ" ಎಂದು ಟ್ವೀಟ್ ಮಾಡಿದ್ದಾರೆ.

"ಕೊರೊನಾ ಎರಡನೇ ಅಲೆ ಭೀಕರತೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಸ್ಮಶಾನ, ಚಿತಾಗಾರಗಳು ಕೋವಿಡ್ ಮೃತದೇಹಗಳಿಂದ ತುಂಬಿತುಳುಕುತ್ತಿವೆ. ಕೊರೊನಾದಿಂದ ಜೀವ ಕಾಪಾಡಲು ಹಾಗೂ ಕೊರೊನಾ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಲು ನಿಮ್ಮ ನೇತೃತ್ವದಲ್ಲಿ ಕೇಂದ್ರ ಕೈಗೊಳ್ಳುವ ಎಲ್ಲಾ ನಿರ್ಧಾರಗಳಿಗೂ ನನ್ನ ಬೆಂಬಲವಿದೆ" ಎಂದಿದ್ದಾರೆ. ಏಪ್ರಿಲ್ 21ರಂದು ಕರ್ನಾಟಕ ಸಿಎಂ ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದು ಕೆಲವು ಸಲಹೆಗಳನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ. ದೇವೇಗೌಡ ಅವರು ಬರೆದ ಪತ್ರದಲ್ಲೇನಿದೆ? ಮುಂದೆ ಓದಿ...

"ರಾಜ್ಯ ಮಟ್ಟದಲ್ಲಿ ವಾರ್ ರೂಂ ನಿರ್ಮಾಣ ಸಾಲುವುದಿಲ್ಲ"

ಆರೋಗ್ಯ ಆಡಳಿತ ಹಾಗೂ ಕೊರೊನಾ ನಿರ್ವಹಣೆಯನ್ನು ಶೀಘ್ರವೇ ವಿಕೇಂದ್ರೀಕರಣಗೊಳಿಸಬೇಕು. ಜಿಲ್ಲಾ ಹಂತಗಳಲ್ಲಿ ವೈದ್ಯಕೀಯ ವೃತ್ತಿಪರರನ್ನು ತುರ್ತಾಗಿ ಅಲ್ಪಾವಧಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಬೇಕು. ಈ ನೇಮಕಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಅಧಿಕಾರ ನೀಡಬೇಕು ಎಂದು ತಿಳಿಸಿದ್ದಾರೆ.

ರಾಜ್ಯ ಮಟ್ಟದಲ್ಲಿ ವಾರ್ ರೂಂಗಳನ್ನು ನಿರ್ಮಿಸುವುದು ಸದ್ಯದ ಪರಿಸ್ಥಿತಿಗೆ ಸಾಲುವುದಿಲ್ಲ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಾರ್ ರೂಂ ನಿರ್ಮಿಸಬೇಕು. ಕೊರೊನಾ ಪ್ರಕರಣಗಳು ತಾತ್ಕಾಲಿಕವಾಗಿ ಕಡಿಮೆಯಾಗುತ್ತಿದ್ದಂತೆ ಇವನ್ನು ಮುಚ್ಚಬಾರದು. ಕೊರೊನಾ ಶೂನ್ಯವಾಗುವವರೆಗೂ ಕಾರ್ಯನಿರ್ವಹಿಸಬೇಕು. ಕಳೆದ ಡಿಸೆಂಬರ್ ನಿಂದ ಈ ಆಗಸ್ಟ್ 2021ರವರೆಗೆ ಕೊರೊನಾ ಚಿಕಿತ್ಸೆಗೆಂದೇ ಖಾಸಗಿ ಹಾಗೂ ಸರ್ಕಾರಿ ವಲಗಳಲ್ಲಿದ್ದ ಕೋವಿಡ್ ಆಸ್ಪತ್ರೆ ಹಾಗೂ ಕೇಂದ್ರಗಳಲ್ಲಿ 6% ಇಳಿಕೆಯಾಗಿರುವುದು ಕಂಡುಬಂದಿದೆ. ಕೊರೊನಾ ಎರಡನೇ ಅಲೆಯಲ್ಲಿ ಇವುಗಳನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂದಿದ್ದಾರೆ.

"ಲಸಿಕೆ ಕುರಿತ ಗೊಂದಲ ನಿವಾರಿಸಿ"

ಸದ್ಯಕ್ಕೆ ದೊಡ್ಡ ನಗರಗಳ ಮೇಲೆ ಆಡಳಿತದ ಗಮನ ಕೇಂದ್ರೀಕೃತವಾಗಿದೆ. ಆದರೆ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿಯೂ ಕೊರೊನಾ ಅಪಾಯವಿದೆ. ಹೀಗಾಗಿ ಗ್ರಾಮಗಳೆಡೆಗೂ ಗಮನ ನೀಡಬೇಕಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಸಚಿವಾಲಯ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು.

ಕೊರೊನಾ ಲಸಿಕೆ ಕುರಿತು ಜನರಲ್ಲಿ ಸಾಕಷ್ಟು ಗೊಂದಲವಿದೆ. ಕೊರೊನಾ ಎರಡನೇ ಅಲೆ ನಂತರ ಈ ಗೊಂದಲ ಹೆಚ್ಚಾಗಿದೆ. ಕೊರೊನಾ ಲಸಿಕೆಯ ಎರಡು ಡೋಸ್ ಪಡೆದ ನಂತರವೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಇದಕ್ಕೆ ಕಾರಣವಾಗಿದೆ. ವೈದ್ಯರು ಈ ಕುರಿತು ಸ್ಪಷ್ಟನೆ ನೀಡಬೇಕು. ಕೊರೊನಾ ಲಸಿಕೆ ಕುರಿತು ಧನಾತ್ಮಕ ಅಂಶಗಳನ್ನಿಟ್ಟುಕೊಂಡು ಜಾಗೃತಿ ಮೂಡಿಸುವುದು ಈ ಕ್ಷಣದ ತುರ್ತಾಗಿದೆ ಎಂದು ಹೇಳಿದ್ದಾರೆ.

"ಲಸಿಕೆ ಪಡೆಯಲು ಬರುವ ಬಡ ಜನರಿಗೆ ಕಠಿಣ ನಿಯಮ ಬೇಡ"

ಲಸಿಕೆ ಪಡೆಯಲು ಜನರಿಗೆ ಗಡುವು ನೀಡಬೇಕು. ಎಲ್ಲಾ ಜನಪ್ರತಿನಿಧಿಗಳಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಲಸಿಕೆಗೆ ದಿನ ನಿಗದಿ ಮಾಡಿ, ಲಸಿಕಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಗುರಿ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಕೊರೊನಾ ಲಸಿಕೆ ದರದ ಕುರಿತು ಕೆಲವು ಗೊಂದಲಗಳಿವೆ. ಆದರೆ ಬಡಜನರನ್ನು ಗಮನದಲ್ಲಿಟ್ಟುಕೊಂಡೇ ದರ ನಿಗದಿ ಮಾಡಬೇಕು. ಸರ್ಕಾರ ದೇಶದ ಎಲ್ಲಾ ಜನರಿಗೂ ಉಚಿತವಾಗಿ ಲಸಿಕೆ ನೀಡಿದರೆ ಅದು ಮಹತ್ವದ ಕಾರ್ಯವಾಗುತ್ತದೆ. ಈ ಕಾರ್ಯದ ಸುತ್ತಲಿನ ಕೆಲಸಗಳು ಪಾರದರ್ಶಕವಾಗಿರಬೇಕು ಎಂದಿದ್ದಾರೆ.
ಲಸಿಕೆ ಪಡೆಯಲು ಖುದ್ದು ಮುಂದೆ ಬರುವ ಬಡ ಜನರಿಗೆ ಗುರುತಿನ ಚೀಟಿ ತೋರುವಂಥ ಕಠಿಣ ನಿಯಮಗಳನ್ನು ಕೈಬಿಡಬೇಕು.ಇಂಟರ್‌ನೆಟ್ ಕುರಿತು ಜ್ಞಾನವಿಲ್ಲದ, ಸರ್ಕಾರದ ಲಸಿಕಾ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಯದ ಜನರಿಗೆ ಈ ನಿಯಮಗಳೇ ಅಡ್ಡಿಯಾಗಬಾರದು ಎಂದು ಹೇಳಿದ್ದಾರೆ.

"ಖಾಸಗಿ ವಲಯಗಳ ಆರೋಗ್ಯ ಕಾರ್ಯಕರ್ತರಿಗೂ ವಿಮೆ ಇರಲಿ"

12-15ರ ವಯಸ್ಸಿನ ಮಕ್ಕಳಿಗೂ ಲಸಿಕೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರಯೋಗಗಳನ್ನು ನಡೆಸಬೇಕು. ಶೈಕ್ಷಣಿಕ ವರ್ಷದಲ್ಲಿ ಅವರು ಶಾಲೆಗೆ ಹೋಗಲು ಆರಂಭಿಸಿದರೆ ಬಹಳ ಮುಖ್ಯ ಸಂಗತಿಯಾಗುತ್ತದೆ.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೊರೊನಾ ವಾರಿಯರ್‌ಗಳಿಗೆ ಇನ್ಸುರೆನ್ಸ್ ಇತ್ತು. ಇದನ್ನು ಸರ್ಕಾರ ಮತ್ತೆ ಪರಿಷ್ಕೃತಗೊಳಿಸಬೇಕು. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕೆಲಸ ನಡೆಯಬೇಕು. ಖಾಸಗಿ ವಲಯಗಳ ಆರೋಗ್ಯ ಕಾರ್ಯಕರ್ತರಿಗೂ ಇನ್ಸುರೆನ್ಸ್ ಸೌಲಭ್ಯ ದೊರೆಯಬೇಕು ಎಂದಿದ್ದಾರೆ.
ನೀಟ್ ಪರೀಕ್ಷೆ ಬರೆಯುವವರಿಗೆ ಗ್ರೇಸ್ ಅಂಕ ನೀಡಿ

ನೀಟ್ ಪರೀಕ್ಷೆ ಬರೆಯುವವರಿಗೆ ಗ್ರೇಸ್ ಅಂಕ ನೀಡಿ

ಕೊರೊನಾ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರಿಗೆ ನೀಟ್ ಪರೀಕ್ಷೆಯಲ್ಲಿ ಗ್ರೇಸ್ ಅಂಕಗಳನ್ನು ನೀಡಬೇಕು. ಆಸ್ಪತ್ರೆಗಳಲ್ಲೇ ತಮ್ಮ ಬಹುಪಾಲು ಸಮಯವನ್ನು ಅವರು ಕಳೆದಿರುವುದರಿಂದ ಪರೀಕ್ಷೆಗೆ ತಯಾರಾಗಲು ಕಡಿಮೆ ಅವಧಿ ದೊರೆತ ಕಾರಣ ಗ್ರೇಸ್ ಅಂಕ ನೀಡಬೇಕು ಎಂದು ದೇವೇಗೌಡ ಅವರು ಹೇಳಿದ್ದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದಿದ್ದಾರೆ.

ರಾಜ್ಯ ಸರ್ಕಾರಗಳೂ ಒಬ್ಬರಿಗೊಬ್ಬರು ನೆರವಾಗಲು ಅನೌಪಚಾರಿಕ ಸಂವಹನ ವ್ಯವಸ್ಥೆಯನ್ನು ಹೊಂದುವುದು ಒಳಿತು. ರಾಜ್ಯದ ಒಬ್ಬ ಸಚಿವನನ್ನು ಸಹಾಯ ನೀಡಲು, ಸಹಾಯ ಪಡೆಯಲು ನಿಯೋಜಿಸಬೇಕು. ಆಡಳಿತ ಅನುಭವವಿರುವ ವಿರೋಧ ಪಕ್ಷದವರನ್ನು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಇದು ರಾಷ್ಟ್ರೀಯ ಬಿಕ್ಕಟ್ಟು ಎಂಬುದನ್ನು ಎಲ್ಲರೂ ಗಮನಿಸಬೇಕು ಎಂದಿದ್ದಾರೆ.

Recommended Video

ಕೊರೋನ ತಡಿಯೋಕೆ 14 ದಿನಗಳ ಕಾಲ Lock Down! | Oneindia Kannada

"ಆರು ತಿಂಗಳಗಳ ಕಾಲ ಸಾರ್ವಜನಿಕ ಸಭೆ ಸಮಾರಂಭ ರದ್ದುಗೊಳಿಸಿ"

ಮುಂದಿನ ಆರು ತಿಂಗಳವರೆಗೂ ಎಲ್ಲಾ ಸಾರ್ವಜನಿಕ ಸಭೆ ಸಮಾರಂಭಗಳನ್ನು ರದ್ದುಗೊಳಿಸಬೇಕು. ಚುನಾವಣಾ ವಿಜಯೋತ್ಸವವನ್ನು ನಡೆಸದಂತೆ ಶೀಘ್ರವೇ ಕ್ರಮ ಕೈಗೊಳ್ಳಬೇಕು.

ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಭಾರತ ಸರ್ಕಾರ ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಕೊರೊನಾ ಲಸಿಕಾ ತಯಾರಿಕಾ ಕೇಂದ್ರಗಳನ್ನು ನಿರ್ಮಿಸಬೇಕು.ದೀರ್ಘಾವಧಿಯ ಸಾರ್ವಜನಿಕ ಆರೋಗ್ಯ ಮೂಲಸೌಲಭ್ಯಗಳ ಕುರಿತು ಈಗಲೇ ಯೋಜನೆ ಹಾಗೂ ಪ್ರಯತ್ನ ಆರಂಭಿಸಬೇಕು. ಲಭ್ಯವಿರುವ ಬಹುಪಾಲು ಸಂಪನ್ಮೂಲವನ್ನು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಬೇಕು. ಈ ನಿಟ್ಟಿನಲ್ಲಿ ನಾವು ಬದ್ಧರಾಗಿ ಮುಂದುವರೆಯಬೇಕು ಎಂದು ಹೇಳಿದ್ದಾರೆ.

English summary
Former PM HD Devegowda written letter to Prime minister Narendra modi offering few suggestions to tackle corona pandemic. Here is his suggestions
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X