ಏಕರೂಪ ನಾಗರಿಕ ಸಂಹಿತೆ ಜಾರಿಗೆ ದೇವೇಗೌಡರ ವಿರೋಧ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಅಕ್ಟೋಬರ್ 15: ದೇಶದಲ್ಲಿ ಹಲವು ಧರ್ಮಗಳಿವೆ. ಎಲ್ಲ ಧರ್ಮಗಳಿಗೂ ಅದರದೇ ನೀತಿ-ನಿಯಮಗಳಿವೆ. ಆದ್ದರಿಂದ ಏಕರೂಪ ನಾಗರಿಕ ಸಂಹಿತೆಯನ್ನು ನಾನು ತೀವ್ರವಾಗಿ ವಿರೋಧಿಸ್ತೀನಿ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರೈತರ ಆತ್ಮಹತ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಲ್ಲದೆ ಬೆಳೆಗಳಿಗೆ ಸರಿಯಾದ ಪ್ರಮಾಣದಲ್ಲಿ ಬೆಲೆ ಕೂಡ ದೊರೆಯುವುದಿಲ್ಲ. ಮೊದಲಿಗೆ ದೇಶದ ಈ ಸಮಸ್ಯೆಗಳಿಗೆ ಒತ್ತು ನೀಡಿ, ಪರಿಹಾರ ಕಂಡುಹಿಡಿಯುವುದು ಅಗತ್ಯ ಎಂದು ಅವರು ಹೇಳಿದರು.['ಮೋದಿ ಸರಕಾರದ ವೈಫಲ್ಯ ಮುಚ್ಚಲು ಏಕರೂಪ ನಾಗರಿಕ ಸಂಹಿತೆ']

Devegowda

ರಾಜ್ಯದಲ್ಲಿ ಕಾಂಗ್ರೆಸ್‌ನವರದ್ದು ಏನು ಭಾಗ್ಯ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಏನು ಮಾಡುತ್ತಿದೆ? ಜೆಡಿಎಸ್ ಪಕ್ಷವನ್ನು ಪುನರ್ ಸಂಘಟಿಸುವ ಉದ್ದೇಶದಿಂದ ಮಂಗಳೂರಿಗೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಜೆಡಿಎಸ್ ನಿರ್ಣಾಯಕವಾಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ಪಕ್ಷ ನಿರ್ಣಾಯಕ ಶಕ್ತಿಯಲ್ಲ. ಬದಲಾಗಿ 224 ವಿಧಾನಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದರು.

ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿದ ಬಳಿಕ, ದೇಶವ್ಯಾಪಿ ಸಂಘಟಿಸಲಾಗುವುದು. ನನಗೀಗ 84 ವರ್ಷ, ಆದರೆ ನನ್ನ 55 ವರ್ಷಗಳ ರಾಜಕೀಯ ಜೀವನದಲ್ಲಿ ಪ್ರಾಂತೀಯ ಪಕ್ಷ ಅತೀ ಮುಖ್ಯ ಎಂದು ಗ್ರಹಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಪ್ರಾಂತೀಯ ನಾಯಕತ್ವವನ್ನು ಉಳಿಸಿ, ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದರು.[ಈ ಮುಸ್ಲಿಂ ಕುಟುಂಬದಲ್ಲಿ 30ನೇ ಕೃಷ್ಣ ಜನ್ಮಾಷ್ಟಮಿ ಸಂಭ್ರಮ]

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಗೌಡರು, ಎತ್ತಿನಹೊಳೆ ಯೋಜನೆಯಿಂದ 9 ಟಿಎಂಸಿ ಅಡಿ ನೀರು ಕೂಡ ಸಿಗುವುದಿಲ್ಲ ಎಂದು ತಜ್ಞರೇ ಹೇಳುತ್ತಾರೆ. ಆದರೆ ಚಿಕ್ಕಬಳ್ಳಾಪುರ, ಕೋಲಾರ ಜನರಿಗೆ ನೀರು ಬೇಕು. ಸರಕಾರ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

Deve gowda

ಉಡುಪಿ ಕೃಷ್ಣ ಮಠಕ್ಕೆ ಸಂಬಂಧಿಸಿದ ವಿಷ್ಯಯಕ್ಕಿಂತಲೂ ಮುಖ್ಯವಾದ ಅನೇಕ ಸಮಸ್ಯೆಗಳಿವೆ. ದೇವರ ಮೇಲೆ ನಂಬಿಕೆ ಇದ್ದರೆ ದೇವಸ್ಥಾನಕ್ಕೆ ಹೋಗಬಹುದು. ಇಲ್ಲವಾದಲ್ಲಿ ಸುಮ್ಮನಿದ್ದು ಬಿಡಬಹುದು. ಇಂತಹ ಸಮಸ್ಯೆಗಳೆಲ್ಲ ಎದುರಾಗಲೇಬಾರದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಉಳ್ಳಾಲ ದರ್ಗಾ, ಚರ್ಚ್‌ಗಳಿಗೆ ಹೋಗಲು ನನ್ನನ್ನು ಯಾರೂ ಒತ್ತಾಯಿಸಿಲ್ಲ. ದೇವರ ಮೇಲೆ ನಂಬಿಕೆ ಇರುವ ಕಾರಣಕ್ಕೆ ಅಲ್ಲಿಗೆ ಹೋಗುತ್ತೇನೆ. ಕೃಷ್ಣಮಠದ ವಿಷಯದಲ್ಲಿಯೂ ಅಷ್ಟೆ. ನಂಬಿಕೆ ಇದ್ದವರು ಮಾತ್ರ ದೇವರ ದರ್ಶನಕ್ಕೆ ಹೋಗಬಹುದು ಎಂದು ಅವರು ಹೇಳಿದರು.[11 ವರ್ಷಗಳಲ್ಲಿ ಇದೇ ಮೊದಲು, ಸುಪ್ರೀಂಕೋರ್ಟಿನಲ್ಲಿ ಮುಸ್ಲಿಂ ಜಡ್ಜ್ ಗಳಿಲ್ಲ!]

ಜೆಡಿಎಸ್ ಮುಖಂಡರಾದ ಶಾಸಕ ಮಧು ಬಂಗಾರಪ್ಪ, ಅಮರನಾಥ ಶೆಟ್ಟಿ, ರಾಷ್ಟ್ರೀಯ ಕಾರ್ಯದರ್ಶಿ ಜಾಫರುಲ್ಲಾ ಖಾನ್, ಜೀವಿಜಯ, ಸದಾಶಿವ ಉಳ್ಳಾಲ್, ರಮೀಝಾ ಬಾನು, ಅಝೀಝ್ ಕುದ್ರೋಳಿ, ಅಕ್ಷಿತ್, ವಸಂತ ಪೂಜಾರಿ, ರಾಮ್ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Devegowda, former prime minister opposes implementation of uniform civil code. He also speaks about Udupi Krishna mutt issue in a Mangaluru press conference.
Please Wait while comments are loading...