ದೇವರಾಯನದುರ್ಗ ಜಾತ್ರೆ: ಮಾ.3ರ ಮಧ್ಯಾಹ್ನವೇ ಅದ್ಧೂರಿ ರಥೋತ್ಸವ, ಗ್ರಹಣ ಪ್ರಭಾವದಿಂದ ತೇರು ಸಾಗದೆಂಬ ಚರ್ಚೆ
ತುಮಕೂರು: ತಾಲೂಕಿನ ಸುಪ್ರಸಿದ್ಧ ಯಾತ್ರೆ ಸ್ಥಳ ದೇವರಾಯನದುರ್ಗದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ, ಸಡಗರ ಮನೆ ಮಾಡಿದೆ. ಈಗಾಗಲೇ ಜಾತ್ರೆಯ ಆಚರಣೆಗಳು ಶುರುವಾಗಿವೆ. ಶ್ರೀ ಯೋಗ ಮತ್ತು ಭೋಗ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಗಳಲ್ಲಿ ದೇವಸ್ಥಾನ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಧ್ವಜಾರೋಹಣ ನೆರವೇರಿಸುವ ಮೂಲಕ ದೇವಸ್ಥಾನ ಸಮಿತಿ ಹಾಗೂ ಊರ ಭಕ್ತರು ಜಾತ್ರೆಯ ಆರಂಭಕ್ಕೆ ಸಾಕ್ಷಿಯಾದರು. ಈ ಬಾರಿ ಚಂದ್ರಗ್ರಹಣ ಇರುವ ದಿವಸವೇ ದೇವಸ್ಥಾನ ರಥೋತ್ಸವ ಜರುಗಲಿದೆ.
ಅಂಕುರಾರ್ಪಣ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಸಂಜೆ ಚಾಲನೆ ನೀಡಲಾಯಿತು. ಆಗಮಿಕರಾದ ವಾಸುದೇವ ಭಟ್ಟರ್ ಹಾಗೂ ಪ್ರಧಾನ ಅರ್ಚಕರಾದ ವೆಂಕಟರಾಜ ಭಟ್ಟರ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈಗಾಗಲೇ ನೆರವೇರುತ್ತಿವೆ. ಮಾರ್ಚ್ 3ರಂದು ಅದ್ಧೂರಿ ರಥೋತ್ಸವ ನಡೆಯಲಿದೆ.

ಈ ಬಾರಿ ಹುಣ್ಣಿಮೆಯ ದಿನವೇ ಚಂದ್ರಗ್ರಹಣ ಇರುವುದರಿಂದ ಮಧ್ಯಾಹ್ನ 11 ಗಂಟೆ ವೇಳೆಗೆ ರಥೋತ್ಸವ ನಡೆಸಲು ದೇವಸ್ಥಾನ ಆಡಳಿತ ಮಂಡಳಿ, ಗ್ರಾಮದ ಭಕ್ತರು ತೀರ್ಮಾನಿಸಿದ್ದಾರೆ. ಇಲ್ಲಿ ಮತ್ತೊಂದು ವಿಶೇಷವೆಂದರೆ ಚಂದ್ರಗ್ರಹಣಕ್ಕೂ ಮೊದಲೇ ರಥೋತ್ಸವ ಹಮ್ಮಿಕೊಂಡರು ಸಹಿತ ಗ್ರಹಣದ ಪ್ರಭಾವದಿಂದ 'ತೇರು' ಸಾಗದೇ ನಿಲ್ಲಲಿದೆ ಎನ್ನಲಾಗುತ್ತಿದೆ. ಹೀಗಾಗಿ ಈ ಬಾರಿ ರಥೋತ್ಸವ ಮತ್ತಷ್ಟು ಮಹತ್ವ ಪಡೆದುಕೊಳ್ಳಲಿದ್ದು, ಅದನ್ನು ನೋಡಲು ಅಪಾರ ಭಕ್ತರು ಸೇರುವ ನಿರೀಕ್ಷೆ ಇದೆ.
ಸಂತಾನ ಪ್ರಾಪ್ತಿಗಾಗಿ ಗರುಡಬುತ್ತಿ ಪ್ರಸಾದ
ಜಾತ್ರಾ ಮಹೋತ್ಸವದ ಎರಡನೇ ದಿನವಾದ ಇಂದು ಭಾನುವಾರ ಗರುಡ ದೋಷದಿಂದ ಮಕ್ಕಳಾಗದ ದಂಪತಿಗಳಿಗೆ ಸಂತಾನ ಪ್ರಾಪ್ತಿಗಾಗಿ 'ಗರುಡಬುತ್ತಿ' ನೀಡಲಾಗುತ್ತದೆ. ಸಂಜೆ ಬೆಟ್ಟದ ಮೇಲಿರುವ ಶ್ರೀ ಯೋಗಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ನೇರವೇರಲಿದ್ದು, ಈ ವೇಳೆ ಪ್ರಸಾದ ರೂಪದಲ್ಲಿ 'ಗರುಡಬುತ್ತಿ' ನೀಡಲಾಗುತ್ತದೆ, ಪ್ರತಿ ವರ್ಷ ಜಾತ್ರಾ ಮಹೋತ್ಸವದ ಧ್ವಜಾರೋಹಣ ಹಾಗೂ ಧ್ವಜಾವರೋಹಣ ಸಂದರ್ಭದಲ್ಲಿ ಗರುಡಬುತ್ತಿ ನೀಡಲಾಗುತ್ತದೆ. ಇಲ್ಲಿ ಪ್ರಸಾದ ಸ್ವೀಕರಿಸಿದ ಅನೇಕ ಭಕ್ತರು ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅನೇಕ ದಂಪತಿಗಳು ಇಲ್ಲಿನ ಬುತ್ತಿ ಸವಿದು ಸಂತಾನ ಪಡೆದಿರುವ ಐತಿಹಾಸಕ ಘಟನೆಗಳು ಸಾಕಷ್ಟಿವೆ.












Click it and Unblock the Notifications