ಡಿಕೆಶಿ, ಬಿಎಸ್‌ವೈ ಕೇಸು ರದ್ದತಿ ತೀರ್ಪು ಕಾಯ್ದಿರಿಸಿದ ಕೋರ್ಟ್
ಬೆಂಗಳೂರು, ಡಿಸೆಂಬರ್ 03 : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಡಿ-ನೋಟಿಫಿಕೇಷನ್ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.
ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. [ಯಡಿಯೂರಪ್ಪಗೆ ರಿಲೀಫ್ ನೀಡಿದ 5 ಪ್ರಕರಣಗಳು ಯಾವುವು?]

ಬುಧವಾರ ಅರ್ಜಿಯ ವಾದ-ಪ್ರತಿವಾದ ಆಲಿಸಿ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರ ಏಕಸದಸ್ಯ ಪೀಠ, ತೀರ್ಪನ್ನು ಕಾಯ್ದಿರಿಸಿದೆ. 2012ರ ಜುಲೈ 31ರಿಂದ ಕರ್ನಾಟಕ ಹೈಕೋರ್ಟ್‌ನಲ್ಲಿ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ. [ಯಡಿಯೂರಪ್ಪ ವಿದೇಶ ಪ್ರವಾಸ ಮಾಡಬಹುದು]
ಏನಿದು ಪ್ರಕರಣ? : ಡಿ.ಕೆ.ಶಿವಕುಮಾರ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಬೆಂಗಳೂರು ಪೂರ್ವ ತಾಲೂಕಿನ ಬೆನ್ನಿಗಾನಹಳ್ಳಿಯ ಸರ್ವೆ ನಂ 50/2ರಲ್ಲಿ 4 ಎಕರೆ 20 ಗುಂಟೆ ಖರೀದಿ ಮಾಡಿದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಶಿವಕುಮಾರ್ ಅವರ ಮನವಿ ಮೇರೆಗೆ ಅದನ್ನು ಅಕ್ರಮವಾಗಿ ಡಿ-ನೋಟಿಫಿಕೇಷನ್ ಮಾಡಿಸಲಾಗಿದೆ ಎಂಬುದು ಆರೋಪ.[ಯಡಿಯೂರಪ್ಪ ವಿರುದ್ಧದ 4 ದೂರು ರದ್ದು]
ಸಾಮಾಜಿ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ಈ ಕುರಿತು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು 2012ರಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಚಾರ್ಚ್ ಶೀಟ್ ಸಲ್ಲಿಸಿತ್ತು. ಯಡಿಯೂರಪ್ಪ ಅವರನ್ನು ಆರೋಪ ಪಟ್ಟಿಯಿಂದ ಕೈ ಬಿಟ್ಟಿತ್ತು.
ಆದರೆ, ಲೋಕಾಯುಕ್ತ ನ್ಯಾಯಾಲಯ ಯಡಿಯೂರಪ್ಪ ಅವರ ಹೆಸರನ್ನು ಸೇರಿಸಿಕೊಂಡು ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣ ರದ್ದುಕೋರಿ ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications