ರಾಜ್ಯದಲ್ಲಿ 7 ಸಾವಿರಕ್ಕೂ ಅಧಿಕ ಡೆಂಘಿ ಪ್ರಕರಣ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು,ಸೆಪ್ಟೆಂಬರ್ 11: ರಾಜ್ಯಾದ್ಯಂತ ಕಳೆದ ಕೆಲವು ದಿನಗಳ ಅವಧಿಯಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಡೆಂಘಿ ಪ್ರಕರಣಗಳು ವರದಿಯಾಗಿವೆ, ಇದರಲ್ಲಿ 4 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಕಂಡುಬಂದಿದೆ. ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಿದ್ದರಾಮಯ್ಯ ಅವರು, ಡೆಂಘಿ ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿ, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಜೌಷಧ ಸಿಂಪಡಣೆ, ನೀರು ಶೇಖರಣೆಯಾಗುವ ಸ್ಥಳಗಳನ್ನು ಗುರುತಿಸಿ ಸ್ವಚ್ಚಗೊಳಿಸುವುದು ಸೇರಿದಂತೆ ಸೊಳ್ಳೆ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ.

ಅಲ್ಲದೇ ಮನೆ ಸುತ್ತಮುತ್ತಲಿನ ಪರಿಸರದ ಸ್ವಚ್ಚತೆಗೆ ಆದ್ಯತೆ ನೀಡಿ, ಸೊಳ್ಳೆ ಕಡಿತದ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ಡೆಂಘಿ ಬಗ್ಗೆ ಭಯ ಬೇಡ, ಜಾಗೃತೆಯಿರಲಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲೇ 4427 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಡೆಂಗ್ಯೂ ನಿಯಂತ್ರಣದಲ್ಲಿಡಲು ಮುಂಜಾಗೃತ ಕ್ರಮ ವಹಿಸುವಂತೆ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಡೆಂಗ್ಯೂ ಕುರಿತಂತೆ ಕೇವಲ ಜಾಗೃತಿ ಜಾಥಾ ಮಾಡಿದರೆ ಪ್ರಯೋಜನೆವಿಲ್ಲ. ಸ್ಥಳೀಯ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತರನ್ನ ಪರಿಣಾಮಕಾರಿಯಾಗಿ ಬಳಸಿಕೊಂಡು ಜನರನ್ನ ಎಚ್ವರಿಸಬೇಕು ಎಂದರು.
ಟೆಸ್ಟಿಂಗ್ ಸ್ಯಾಂಪಲ್ಸ್ ಹೆಚ್ಚು ಮಾಡುವ ಅಗತ್ಯವಿದೆ. ಕಳೆದ ಎರಡು ತಿಂಗಳಲ್ಲಿ ಡೆಂಗ್ಯೂ ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸುವಂತೆ ಗುಂಡೂರಾವ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇನ್ನೂ ಆ್ಯಪ್ ಮೂಲಕ ಡೆಂಗ್ಯೂ ಪ್ರಕರಣಗಳನ್ನ ಮಾನಿಟರ್ ಮಾಡುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಾಳೆ ಆ್ಯಪ್ ಬಿಡುಗಡೆಯಾಗಲಿದ್ದು, ಆರೋಗ್ಯ ಕಾರ್ಯಕರ್ತರು ವಾರ್ಡ್ ಗಳಲ್ಲಿ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸಿದ್ದಾರೆ ಎಂಬುದನ್ನ ಮಾನಿಟರ್ ಮಾಡಬಹುದು. ಅಲ್ಲದೇ ತಿಂಗಳ ಮೊದಲೇ ಡೆಂಗ್ಯೂ ಪ್ರಕರಣಗಳ ಬಗ್ಗೆ ಮೂನ್ಸೂಚನೆ ನೀಡಿವ ತಂತ್ರಜ್ಞಾನ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸೈನ್ಸ್ ನವರು ಕಂಡುಹಿಡಿದಿದ್ದಾರೆ. ಈ ತಂತ್ರಜ್ಞಾನವನ್ನ ಕೂಡ ನಾಳೆ ಬಿಡುಗಡೆಗೊಳಿಸುವುದಾಗಿ ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.












Click it and Unblock the Notifications