Vande Bharat Express: ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಬಿಡಿ, ಉತ್ತರ ಕರ್ನಾಟಕದ ರೈಲು ಸೌಲಭ್ಯಗಳಿಗೆ ಒತ್ತಾಯ
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ರೈಲು ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ. ಉತ್ತರ ಕರ್ನಾಟಕದ ಭಾಗದಲ್ಲಿ ಅಗತ್ಯವಿರುವ ರೈಲ್ವೆ ಮೂಲ ಸೌಕರ್ಯಗಳ ಕಡೆಗೆ ಹೊಸ ಮಾರ್ಗ, ರೈಲು ಪುನಾರಂಭ ಮತ್ತು ಹೊಸ ವಂದೇ ಭಾರತ್ ರೈಲಿಗೆ ಬೇಡಿಕೆ ಇಡಲಾಗಿದೆ. ಹೊಸಪೇಟೆ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ರೈಲು ಬಳಕೆದಾರರು ವಿವಿಧ ರೈಲು ಸೌಲಭ್ಯಗಳ ಕಲ್ಪಿಸುವಂತೆ ಒತ್ತಾಯಿಸಿ ಸಚಿವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.
ನೈರುತ್ಯ ರೈಲ್ವೇ ವಲಯಕ್ಕೆ ಹೆಚ್ಚು ಆದಾಯ ನೀಡುತ್ತಿರುವ ಈ ಮೂರು ಜಿಲ್ಲೆಗಳ ಜನರಿಗೆ ಅಗತ್ಯವಾಗಿರುವ ರೈಲ್ವೇ ಸೌಲಭ್ಯಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು 'ವಿಜಯನಗರ ರೈಲ್ವೆ ಬಳಕೆದಾರರ ಸಂಘ-ಹೊಸಪೇಟೆ' ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ. ಬೇಡಿಕೆಗಳಲ್ಲಿ ವಂದೇ ಭಾರತ್ ರೈಲು ಸೇರಿ ಎರಡು ಹೊಸ ರೈಲುಗಳ ಕಾರ್ಯಾರಂಭದ ಆಗ್ರಹವು ಪ್ರಮುಖವಾಗಿದೆ.

ಹೊಸಪೇಟೆ-ಬಳ್ಳಾರಿ-ಬೆಂಗಳೂರು ವಂದೇ ಭಾರತ್ ರೈಲು
ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿತಾಣಗಳ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಗದಗ, ಹೊಸಪೇಟೆ ಮತ್ತು ಬಳ್ಳಾರಿ ಮಾರ್ಗವಾಗಿ ಒಂದೇ ಭಾರತ್ ರೈಲು ಆರಂಭಿಸಿದರೆ ಈ ಜಿಲ್ಲೆಗಳ ಜನರು ತ್ವರಿತವಾಗಿ ಬೆಂಗಳೂರಿಗೆ ಹೋಗಿ ಬರಲು ಅನುಕೂಲವಾಗುತ್ತದೆ. ಜೊತೆಗೆ ರಾಜ್ಯದ ಪ್ರವಾಸಿ ತಾಣಗಳ ನಡುವೆ ನೇರ ಸಂಪರ್ಕ ಉಂಟಾಗಿ ಪ್ರವಾಸೋದ್ಯಮ ಮತ್ತು ಆರ್ಥಿಕ ಬೆಳವಣಿಗೆಗೆ ಅನುಕೂಲವಾಗುತ್ತದೆ. ಆದ್ದರಿಂದ (ವಿಜಯಪುರ-ಗದಗ) ಹೊಸಪೇಟೆ-ಬಳ್ಳಾರಿ-ಬೆಂಗಳೂರು ಒಂದೇ ಭಾರತ್ ರೈಲು ಆರಂಭಿಸುವಂತೆ ಒತ್ತಾಯಿಸಲಾಗಿದೆ.
ಇಲ್ಲಿಂದ ಮಂತ್ರಾಲಯ ನೂತನ ನೇರ ರೈಲು ಸೇವೆ
ಬೆಳಗಾವಿ-ಹೊಸಪೇಟೆ-ರಾಯಚೂರು (ಮಂತ್ರಾಲಯ) ನೂತನ ರೈಲು ಆರಂಭಿಸುವಂತೆ ಕೋರಿದ್ದಾರೆ. ಕಳೆದ 6-ವರ್ಷಗಳಿಂದ ಸಂಚರಿಸುತ್ತಿದ್ದ, ಬೆಳಗಾವಿ-ಹೈದರಾಬಾದ್-ಮಣಗೂರು ರೈಲು (17335/17336) ಸೇವೆ ರದ್ದುಗೊಳಿಸಲಾಗಿದೆ. ಇದರಿಂದ ಧಾರ್ಮಿಕ ಕೇಂದ್ರ ಮಂತ್ರಾಲಯಕ್ಕೆ ನೇರ ಸಂಪರ್ಕ ಇಲ್ಲದಂತಾಗಿದೆ. ಅಪಾರ ಭಕ್ತರಿಗೆ ತೊಂದರೆ ಆಗುತ್ತಿದೆ. ಆದುದರಿಂದ ಉತ್ತರ ಕರ್ನಾಟಕ ಜಿಲ್ಲೆಗಳಾದ ಬೆಳಗಾವಿ-ಹುಬ್ಬಳ್ಳಿ-ಧಾರವಾಡ-ಗದಗ-ಕೊಪ್ಪಳ-ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಮಂತ್ರಾಲಯ ಮತ್ತು ರಾಯಚೂರು ಕಡೆಗೆ ಹೋಗುವ ಪ್ರಯಾಣಿಕರಿಗೆ ನೆರವಾಗುವಂತೆ ಬೆಳಗಾವಿ ಅಥವಾ ಹುಬ್ಬಳ್ಳಿಯಿಂದ ರಾಯಚೂರಿಗೆ ನೂತನ ರೈಲು ಆರಂಭಿಸುವ ಅಗತ್ಯವಿದೆ ಎಂಬುದನ್ನು ಸಚಿವರ ಗಮನಕ್ಕೆ ತಂದರು.

ರೈಲು ಮಾರ್ಗ: ಮೇಲ್ಸೇತುವೆ ನಿರ್ಮಿಸಿ
ಇನ್ನೂ ಹೊಸಪೇಟೆ ನಗರ ಮತ್ತು ಚಿತ್ತಾವಾಡಿ ನಡುವೆ ಹಾದು ಹೋಗುತ್ತಿರುವ ರೈಲು ಮಾರ್ಗಕ್ಕೆ ಎಲ್.ಸಿ-ಗೇಟ್ ನಂ : 4ರಲ್ಲಿ ಅಂಡರ್ ಪಾಸ್ ನಿರ್ಮಿಸುವ ಅಗತ್ಯವಿದೆ. ಸಚಿವರು ಈ ಮೂಲಸೌಕರ್ಯ ನಿರ್ಮಾಣಕ್ಕೆ ಒತ್ತು ನೀಡುವಂತೆ ಮನವಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದಲ್ಲಿ ಹಾದು ಹೋಗುತ್ತಿರುವ ರೈಲು ಮಾರ್ಗದ ಎಲ್.ಸಿ.ಗೇಟ್ ನಂ.10ಕ್ಕೆ ಮೇಲು ಸೇತುವೆ ನಿರ್ಮಿಸುವ ಅಗತ್ಯವಿದೆ. ಇದರಿಂದ ಉತ್ತರ ಕರ್ನಾಟಕ ಜಿಲ್ಲೆಗಳಿಂದ ಬಸ್ ಮಾರ್ಗವಾಗಿ ಆಗಮಿಸುವ ಪ್ರಯಾಣಿಕರು ವಿಳಂಬವಿಲ್ಲದೇ ಸಂಚರಿಸಲು ಅನುಕೂಲವಾಗುತ್ತದೆ.
ಪ್ರವಾಸೋದ್ಯಮ: ರೈಲು ನಿಲ್ದಾಣ ಅಭಿವೃದ್ಧಿ ಮಾಡಿ
ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ರೈಲು ನಿಲ್ದಾಣವು ವಿಶ್ವ ಪಾರಂಪರಿಕ ತಾಣವಾದ ಹಂಪಿ, ಜಿಂದಾಲ್ ವಿಮಾನ ನಿಲ್ದಾಣ ಮತ್ತು ದರೋಜಿ ಕರಡಿ ಧಾಮಕ್ಕೆ ಸನಿಹದಲ್ಲಿದೆ. ಆದುದ್ದರಿಂದ ಈ ನಿಲ್ದಾಣವನ್ನು ಅಭಿವೃದ್ಧಿಗೊಳಿಸಿ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಿದರೆ ಒಣಭೂಮಿ ಮತ್ತು ಬಯಲು ಪ್ರದೇಶವಾದ ಈ ಭಾಗದಲ್ಲಿ ಪ್ರವಾಸೋದ್ಯಮ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಸಿಕ್ಕಂತಾಗುತ್ತದೆ ಎಂದು ರೈಲು ಬಳಕೆದಾರರು ವಿನಂತಿಸಿಕೊಂಡಿದ್ದಾರೆ.
ಹೊಸ ಪ್ಲಾಟ್ ಫಾರಂ ನಿರ್ಮಾಣ ಅಗತ್ಯ
ಹೊಸಪೇಟೆ ರೈಲು ನಿಲ್ದಾಣದಲ್ಲಿ ಪಿಟ್ ಲೈನ್ ಮತ್ತು 3 ಹೊಸ ಪ್ಲಾಟ್ ಫಾರಂಗಳ ಬಗ್ಗೆ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ದೇಶ ವಿದೇಶಗಳಿಂದ ಮೂಲಕ ಕರ್ನಾಟಕದ ಹೆಬ್ಬಾಗಿಲು ಆಗಿರುವ ಹೊಸಪೇಟೆ ನಗರ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಅವಶ್ಯಕತೆ ಇದೆ. ನಿತ್ಯ ರೈಲು ಮೂಲಕ ಆಗಮಿಸುತ್ತಿರುವ ಪ್ರವಾಸಿಗರಿಗೆ ಪೂರಕವಾಗಿ ಪ್ರಯಾಣಿಕರ ರೈಲುಗಾಡಿಗಳ ವಿಳಂಬ ರಹಿತ ಸಂಚಾರಕ್ಕೆ ಅನುಕೂಲವಾಗುವಂತೆ ರೈಲು ನಿಲ್ದಾಣದಲ್ಲಿ 3 ಹೊಸ ಪ್ಲಾಟ್ ಫಾರಂಗಳನ್ನು ನಿರ್ಮಿಸಬೇಕು. ರೈಲುಗಳನ್ನು ನಿರ್ವಹಣೆ ಮಾಡಲು ಪಿಟ್‌ಲೈನ್ ನಿರ್ಮಿಸಬೇಕಿದೆ ಎಂದರು.
ಯಶವಂತಪುರ-ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ ರೈಲನ್ನು (16547/16548) ಟಿ.ಬಿ.ಡ್ಯಾಂ ಮತ್ತು ಮುನಿರಾಬಾದ್ (ಹುಲಿಗಿ) ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಸರ್ಕಾರ ಹಾಗೂ ಸಚಿವರು ಒಪ್ಪಿಗೆ ನೀಡಬೇಕು. ಮಧ್ಯಮ ವರ್ಗದ ಪ್ರವಾಸಿಗರ ಅನುಕೂಲಕ್ಕಾಗಿ ಹೊಸಪೇಟೆ ರೈಲ್ವೇ ನಿಲ್ದಾಣಕ್ಕೆ ಹೊಂದಿಕೊಂಡಂತೆ ಪ್ರವಾಸಿ ವಸತಿ ಸಂಕೀರ್ಣ ನಿರ್ಮಿಸಬೇಕೆಂದು ಬಳ್ಳಾರಿ, ಹೊಸಪೇಟೆ ಹಾಗೂ ಕೊಪ್ಪಳ ರೈಲು ಬಳಕೆದಾರರು ಆಗ್ರಹಿಸಿದ್ದಾರೆ.
ಈ ಮೇಲಿನ ಬೇಡಿಕೆಗಳು ಈಡೇರಿದರೆ ಹಾಗೂ ಈಗಾಗಲೇ ಉತ್ತರ ಕರ್ನಾಟಕದ ಇತರ ಭಾಗಗಳಲ್ಲಿ ಚಾಲ್ತಿಯಲ್ಲಿರುವ ರೈಲು ಯೋಜನೆಗಳು, ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಪೂರ್ಣಗೊಂಡರೆ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಿದೆ. ಮಾತ್ರವಲ್ಲದೇ ಪ್ರವಾಸೋದ್ಯಮ, ಶೈಕ್ಷಣಿಕ, ಕೈಗಾರಿಕೆ, ವ್ಯಾಪಾರ ವ್ಯವಹಾರಕ್ಕೂ ಉತ್ತೇಜನ ದೊರೆಯುತ್ತದೆ.












Click it and Unblock the Notifications