ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ: ಬಹು ರಾಜ್ಯ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಬೆಂಬಲ
ಬೆಂಗಳೂರು, ಮಾರ್ಚ್ 12: ಲೋಕಸಭಾ ಕ್ಷೇತ್ರ ಮರುವಿಂಗಡಣೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಇದಕ್ಕೆ ಬೆಂಬಲಯಾಚಿಸುವ ಸಲುವಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿರುದ್ಧವಾಗಿ ಮಾರ್ಚ್ 22ರಂದು ನಡೆಯುವ ಸಭೆಗೆ ಬರುವಂತೆ ಪತ್ರದ ಮೂಲಕ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದ್ದಾರೆ.
ಸಂಸತ್ ಸ್ಥಾನಗಳ ವಿಂಗಡಣೆ ಕುರಿತು ಕೇಂದ್ರ ಸರ್ಕಾರವನ್ನು ಎದುರಿಸಲು ತಮಿಳುನಾಡು ರೂಪಿಸುತ್ತಿರುವ ಬಹು ರಾಜ್ಯ ಒಕ್ಕೂಟಕ್ಕೆ ಸೇರಲು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ತಮಿಳುನಾಡು ಅರಣ್ಯ ಸಚಿವ ಕೆ. ಪೊನ್ಮುಡಿ ಮತ್ತು ರಾಜ್ಯಸಭಾ ಸದಸ್ಯ ಎಂ.ಎಂ. ಅಬ್ದುಲ್ಲಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಸಿದ್ದರಾಮಯ್ಯ ಬೆಂಬಲ ವ್ಯಕ್ತಪಡಿಸಿದರು.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಇಂದು ನನ್ನನ್ನು ಭೇಟಿಯಾಗಿ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ದಕ್ಷಿಣ ರಾಜ್ಯಗಳ ವಿರೋಧಿ ನಿಲುವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಚರ್ಚಿಸಿದರು. ಸಚಿವರ ನಿಯೋಗದ ಭೇಟಿಗೂ ಮೊದಲು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ, ಹೋರಾಟದ ಬಗ್ಗೆ ಚರ್ಚಿಸಿದೆ.
ದಕ್ಷಿಣ ರಾಜ್ಯಗಳ ಪ್ರತಿರೋಧಕ್ಕೆ ನನ್ನ ಬೆಂಬಲ ಸದಾ ಇರಲಿದೆ. ರಾಜ್ಯಗಳ ಹಿತಾಸಕ್ತಿಗೆ ವಿರುದ್ಧವಾದ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಸಂವಿಧಾನದ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಕೇಂದ್ರ ಸರ್ಕಾರದ ಎಲ್ಲಾ ನಡೆಗಳನ್ನೂ ನಾವು ಮುಲಾಜಿಲ್ಲದೆ ಖಂಡಿಸುತ್ತೇವೆ. ಈ ವಿಚಾರದಲ್ಲಿ ತಮಿಳುನಾಡಿನಂತೆ ಕರ್ನಾಟಕ ಕೂಡ ಸಮಾನ ಅಭಿಪ್ರಾಯ ಹೊಂದಿದೆ.
ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ದಕ್ಷಿಣ ರಾಜ್ಯಗಳ ವಿರೋಧಿ ನಿಲುವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಚರ್ಚಿಸಿದರು. ಡಿಲಿಮಿಟೇಷನ್ ಮತ್ತಿತರ ಸಂಗತಿಗಳ ವಿಚಾರದಲ್ಲಿ ಧ್ವನಿ ಎತ್ತುವಂತೆ, ಪ್ರತಿಭಟನೆ ಜೊತೆಗೆ ನಿಲ್ಲುವಂತೆ ಚರ್ಚಿಸಿದರು.
ಇದಕ್ಕೂ ಮೊದಲು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ದೂರವಾಣಿ ಮೂಲಕ ಮುಖ್ಯಮಂತ್ರಿಗಳ ಜೊತೆ ಇದೇ ವಿಚಾರಗಳ ಬಗ್ಗೆ ಚರ್ಚಿಸಿದರು. ತಮಿಳುನಾಡು ಸರ್ಕಾರದ ನಿಯೋಗ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆಗೆ ಚರ್ಚಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಕ್ಷಿಣ ರಾಜ್ಯಗಳ ಪ್ರತಿರೋಧಕ್ಕೆ ತಮ್ಮದೂ ಬೆಂಬಲ ಸೂಚಿಸಿದರು. ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಸಂವಿಧಾನದ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಕೇಂದ್ರ ಸರ್ಕಾರದ ಎಲ್ಲಾ ನಡೆಗಳನ್ನೂ ತಾವು ಮುಲಾಜಿಲ್ಲದೆ ಖಂಡಿಸುತ್ತೇವೆ. ಈ ವಿಚಾರದಲ್ಲಿ ಹೋರಾಟಕ್ಕೂ ಬೆಂಬಲ ನೀಡುತ್ತೇವೆ ಎಂದು ತಮ್ಮ ನಿಲುವನ್ನು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಸಂಬಂಧ ಅವಿರತ ಹೋರಾಟಕ್ಕೆ ತಮಿಳುನಾಡು ಜೊತೆ ಕೈಜೋಡಿಸುವಂತೆ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಕರ್ನಾಟಕ, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ, ಪಂಜಾಬ್, ಒಡಿಶಾ ಹಾಗೂ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ರಾಜ್ಯಗಳ ಕಳವಳಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು ಸ್ಪಷ್ಟತೆ ಅಥವಾ ಯಾವುದೇ ನಿರ್ದಿಷ್ಟ ಬದ್ಧತೆಯನ್ನು ನೀಡುತ್ತಿಲ್ಲ ಎಂದು ಸ್ಟಾಲಿನ್ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.












Click it and Unblock the Notifications