ಉತ್ತರ ಕರ್ನಾಟಕಕ್ಕೆ ಗುಡ್ನ್ಯೂಸ್; ದೆಹಲಿ-ಹುಬ್ಬಳ್ಳಿ, ಬೆಳಗಾವಿ ನೇರವಿಮಾನ ಸೇವಾರಂಭಕ್ಕೆ ದಿನಾಂಕ ಫಿಕ್ಸ್, ವೇಳಾಪಟ್ಟಿ
ಹುಬ್ಬಳ್ಳಿ: ರಾಜಧಾನಿ ಬೆಂಗಳೂರು ಮತ್ತು ಮಲೆನಾಡಿನ ಶಿವಮೊಗ್ಗದ ನಡುವೆ ವಿಮಾನಯಾನ ಪುನರಾರಂಭಗೊಲು ಮುಹೂರ್ತ ಫಿಕ್ಸ್ ಆಗಿದೆ. ಇದರ ಬೆನ್ನಲ್ಲೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಜನರಿಗೆ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿಯವರು ವಿಮಾನ ಸೇವೆಗೆ ಸಂಬಂಧಿಸಿದಂತೆ ಗುಡ್ನ್ಯೂಸ್ ನೀಡಿದ್ದಾರೆ.
ಪ್ರಯಾಣಿಕರ ಅನುಕೂಲ ಹಾಗೂ ಜನರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ- ಹುಬ್ಬಳ್ಳಿ ಹಾಗೂ ದೆಹಲಿ-ಬೆಳಗಾವಿ ನಡುವೆ ದೈನಂದಿನ ವಿಮಾನ (ಪ್ರತಿ ದಿನ) ಸೇವೆಗಳನ್ನು ಆರಂಭಿಸಲು ದಿನಾಂಕ ಫಿಕ್ಸ್ ಆಗಿದೆ. ಈ ಎರಡು ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭಿಸಲು ಇಂಡಿಗೋ ಏರ್ಲೈನ್ಸ್ ಉತ್ಸುಕವಾಗಿದೆ. ಈ ಮೂಲಕ ಉತ್ತರ ಕರ್ನಾಟಕದಿಂದ ರಾಷ್ಟ್ರ ರಾಜಧಾನಿಗೆ ನೇರ ಸಂಪರ್ಕ ಸಾಧ್ಯವಾಗುತ್ತಿದೆ. ಹುಬ್ಬಳ್ಳಿ, ಬೆಳಗಾವಿ ಭಾಗದ ಸುತ್ತಮುತ್ತಲಿನ ಉದ್ಯಮಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

ಅಕ್ಟೋಬರ್ 1ರಿಂದ ಸೇವೆ ಆರಂಭ
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಶಿಕ್ಷಣ ಸಚಿವರು, ಈ ಹಿಂದೆ @IndiGo6E ಸಂಸ್ಥೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಮಾನಯಾನ ಆರಂಭಿಸುವಂತೆ ಮಾಡಿದ್ದೇವೆ. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ವಿಮಾನ ಸಂಸ್ಥೆಯು ಮುಂದೆ ಅಕ್ಟೋಬರ್ 1ರಿಂದ ಪ್ರತಿದಿನ ದೆಹಲಿ-ಹುಬ್ಬಳ್ಳಿ ಹಾಗೂ ದೆಹಲಿ-ಬೆಳಗಾವಿ ನೇರ ವಿಮಾನ ಸೇವೆಗಳನ್ನು ಆರಂಭಿಸುವುದಾಗಿ ತಿಳಿಸಿದೆ ಎಂದರು.
ವಿಮಾನ ಸೇವೆಯ ವೇಳಾಪಟ್ಟಿ ಹೀಗಿದೆ
* ಅಕ್ಟೋಬರ್ 1ರಿಂದ ದೆಹಲಿ - ಹುಬ್ಬಳ್ಳಿ ವಿಮಾನ (6E758)ವು ಸಂಜೆ 4:30ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಟು, ನಂತರ 6:55ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.
* ಹುಬ್ಬಳ್ಳಿ-ದೆಹಲಿ ವಿಮಾನವು (6E2115) ಸಂಜೆ 7:30ಕ್ಕೆ ಹುಬ್ಬಳ್ಳಿಯಿಂದ ಹೊರಟು, ರಾತ್ರಿ 10:05ಕ್ಕೆ ದೆಹಲಿ ತಲುಪಲಿದೆ.
ದೆಹಲಿ-ಬೆಳಗಾವಿ ವಿಮಾನ ವೇಳಾಪಟ್ಟಿ
ದೆಹಲಿ-ಬೆಳಗಾವಿ ವಿಮಾನವು (6E2511) ಬೆಳಗ್ಗೆ 6:15ಗಂಟೆಗೆ ದೆಹಲಿಯಿಂದ ಹೊರಟು, 8:40ಕ್ಕೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ.
ಬೆಳಗಾವಿ- ದೆಹಲಿ ವಿಮಾನವು (6E2512) ಬೆಳಗ್ಗೆ 9:10 ಗಂಟೆಗೆ ಬೆಳಗಾವಿಯಿಂದ ಹೊರಟು, 11:40ಕ್ಕೆ ದೆಹಲಿ ತಲುಪಲಿದೆ. ಈ ಎರಡು ಮಾರ್ಗದಲ್ಲಿ ವಿಮಾನ ಸೇವೆಗಳು ಅಕ್ಟೋಬರ್ 1 ರಿಂದ ಪ್ರತಿದಿನ ಲಭ್ಯ ಇರಲಿವೆ ಎಂದು ಜೋಶಿ ಅವರು ತಿಳಿಸಿದ್ದಾರೆ.
ವಾರದ ಪ್ರತಿದಿನವೂ ವಿಮಾನ ಸಂಚರಿಸುವುದರಿಂದ ಹುಬ್ಬಳ್ಳಿ ಹಾಗೂ ಬೆಳಗಾವಿಯ ವ್ಯಾಪಾರ, ಉದ್ಯೋಗ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ, ಸಂಪರ್ಕ ವ್ಯವಸ್ಥೆಯ ಬಲವರ್ಧನೆಗೆ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.


Click it and Unblock the Notifications
