ಪ್ರಕರಣ ರದ್ದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಜೆಪಿ ನಡ್ಡಾ
ಬೆಂಗಳೂರು, ಜೂನ್ 08: ಪರಿಶಿಷ್ಟ ಜಾತಿ, ಪಂಗಡ ಮತ್ತು ಮುಸ್ಲಿಂ ಸಮುದಾಯಗಳ ಕುರಿತಂತೆ ಅವಹೇಳನಾಕಾರಿ ಪೋಸ್ಟ್ ಅನ್ನು ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪ ಎದುರಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮತ್ತು ಸಾಮಾಜಿಕ ಜಾಲತಾಣಗಳ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಮುಖ್ಯಸ್ಥ ಅಮಿತ್ ಮಾಳವಿಯ ಹೈಕೋರ್ಟ್ ಮೊರೆ ಹೋಗಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಕೋರಿ ಜೆ. ಪಿ. ನಡ್ಡಾ ಮತ್ತು ಅಮಿತ್ ಮಾಳವೀಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

ಪ್ರಕರಣದಲ್ಲಿ ಸಿಲುಕಿಸಲಾಗಿದೆ: ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಪಾತ್ರವಿಲ್ಲ. ಆದರೂ, ಅರ್ಜಿದಾರರು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಾಮಾಜಿಕ ಜಾಲಾತಾಣದ ಅಧ್ಯಕ್ಷರಾಗಿದ್ದ ಎಂಬ ಕಾರಣಕ್ಕೆ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆದ್ದರಿಂದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು.
ಅಲ್ಲದೆ, ಅರ್ಜಿಯಲ್ಲಿ ಪ್ರತಿ ರಾಜ್ಯದ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಆಪಾದನೆಗಳಿಗೆ ರಾಷ್ಟ್ರಾಧ್ಯಕ್ಷರ ಪಾತ್ರವಿದೆ ಎಂಬುದಾಗಿ ಅರ್ಥೈಸುವಂತಿಲ್ಲ. ಈ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಯಾವುದೇ ನಿರ್ಧಿಷ್ಟವಾದ ಸಾಕ್ಷ್ಯಾಧಾರಗಳಿಲ್ಲ.
ಅಲ್ಲದೆ, ಇದೇ ಆರೋಪದಲ್ಲಿ ಎರಡು ಪ್ರಕರಣಗಳು ಇವೆ. ಪಕ್ಷಕ್ಕೆ ರಾಷ್ಟ್ರಮಟ್ಟದಿಂದ ಸ್ಥಳೀಯ ಮಟ್ಟದವರೆಗೂ ವಿವಿಧ ಹಂತದಲ್ಲಿ ಮುಖ್ಯಸ್ಥರಿರಲಿದ್ದಾರೆ. ಹೀಗಿರುವಾಗ ಸಾಮಾಜಿಕ ಜಾಲಾತಾಣಗಳಲ್ಲಿನ ದೈನಂದಿನ ಚಟುವಟಿಕೆಗಳಿಗೆ ಅರ್ಜಿದಾರರು ಕಾರಣ ಎಂದು ಭಾವಿಸಲಾಗುವುದಿಲ್ಲ.
ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ಇದೇ ಆರೋಪ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿಯೂ ಮತ್ತೊಂದು ಪ್ರಕರಣ ದಾಖಲಾಗಿದ್ದು, ಇದಕ್ಕೆ ಕಾನೂನಲ್ಲಿ ಅವಕಾಶವಿಲ್ಲ ಎಂದು ವಾದ ಮಂಡಿಸಿದರು.
ಪ್ರಕರಣದ ಹಿನ್ನೆಲೆ: 2024 ಏಪ್ರಿಲ್ 4ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮತ್ತು ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಅಮಿತ್ ಮಾಳವಿಯಾ ಅವರು ಬಿಜೆಪಿ ಕರ್ನಾಟಕದ ಸಾಮಾಜಿಕ ತಾಣವಾದ ಎಕ್ಸ್‌ನಲ್ಲಿ ಹಂಚಿಕೊಂಡಿದ್ದ ಅಮಿಮೇಷನ್ ಮಾದರಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.
ಅದರಲ್ಲಿ ಶಿರೋನಾಮೆಯನ್ನು ಎಚ್ಚರ.. ಎಚ್ಚರ.. ಎಚ್ಚರ ಎಂದು ಬರೆದಿದ್ದು, ಅದರಲ್ಲಿ ಎಸ್ಸಿ, ಎಸ್ಟಿ, ಮತ್ತು ಹಿಂದುಳಿದ ವರ್ಗಗಳನ್ನು ಮೂರು ಮೊಟ್ಟೆಗಳಿಂದ ಮರಿಗಳು ಹೊರ ಬರುತ್ತಿರುವಂತೆ ಗುರುತಿಸಲಾಗಿತ್ತು. ಅದರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಿದ್ದರಾಯ್ಯ ಮತ್ತೊಂದು ಧರ್ಮದ ಮೊಟ್ಟೆಯೊಂದನ್ನು ತಂದಿಟ್ಟು ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಿದ್ದ ಆಹಾರವನ್ನು ನೀಡುತ್ತಿರುವಂತೆ ಬಿಂಬಿಸಲಾಗಿತ್ತು.
ಇದು ಚುನಾವಣೆ ಸಂದರ್ಭದಲ್ಲಿ ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆಯನ್ನು ಮೂಡಿಸುವ ಉದ್ದೇಶದಿಂದ ಮಾಡಿರುವ ವಿಡಿಯೋ ಪೋಸ್ಟ್, ಇದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ.
ಅಲ್ಲದೆ, ಒಂದು ಧಾರ್ಮಿಕ ಸಮುದಾಯದ ಮತಗಳನ್ನು ಪಡೆಯುವುದಕ್ಕಾಗಿ ಬಿಜೆಪಿ ಈ ರೀತಿಯ ವಿಡಿಯೋ ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ 2024ರ ಮೇ 5ರಂದು ಕಾಂಗ್ರೆಸ್ ಕಾನೂನು ವಿಭಾಗದ ಮುಖ್ಯಸ್ಥ ರಮೇಶ್ ಬಾಬು ದೂರು ದಾಖಲಿಸಿದ್ದರು.












Click it and Unblock the Notifications