ಉಗ್ರರಿಗೆ ತಿರುಗೇಟು, ಕರ್ನಾಟಕ ಮಸೀದಿಗಳು ಗ್ರೇಟು
ಬೆಂಗಳೂರು, ನ.24: ಇರಾಕಿ ಉಗ್ರರ ಆಮಿಷಕ್ಕೆ ಬಲಿಯಾಗಿ ಕರ್ನಾಟಕ ಮೂಲಕದ ಮುಸ್ಲಿಂ ಯುವಕರು ಐಎಸ್ಐಎಸ್ ಸೇರಿ ಹತರಾಗಿರುವ ಸುದ್ದಿ ಬಂದಿದೆ. ಇದರ ಬೆನ್ನಲ್ಲೇ ಉಗ್ರರ ವಿರುದ್ಧ ರಾಜ್ಯದ ಮಸೀದಿಗಳು ಸಾರಿರುವ ಸಮರಕ್ಕೆ ಸಮಾಜದ ವಿವಿಧ ವರ್ಗಗಳಿಂದ ಭಾರಿ ಬೆಂಬಲ ವ್ಯಕ್ತವಾಗಿದೆ.
ಸಿರಿಯಾದಲ್ಲಿ ಕರ್ನಾಟಕ ಮೂಲದ ಮೂವರು ಸೇರಿದಂತೆ ಭಾರತೀಯ ಮೂಲದ 6 ಮಂದಿ ಉಗ್ರರು ಹತರಾಗಿರುವ ಸುದ್ದಿ ತಿಳಿದಿರಬಹುದು. ಹತ ಉಗ್ರರ ಪೈಕಿ ಇಬ್ಬರು ಬೆಂಗಳೂರಿನವರಾಗಿದ್ದರೆ, ಭಟ್ಕಳ ಮೂಲದ ಒಬ್ಬ ಸಾವನ್ನಪ್ಪಿದ್ದಾರೆ.[ಇರಾಕಿ ಉಗ್ರರ ವಿರುದ್ಧ ಕರ್ನಾಟಕ ಮಸೀದಿಗಳ ಯುದ್ಧ]
ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ವಿರುದ್ಧ ಕರ್ನಾಟಕದಲ್ಲಿರುವ ಮಸೀದಿಗಳು ದೊಡ್ಡ ಮಟ್ಟದ ಸಮರ ಆರಂಭಿಸಿ ಒಂದು ತಿಂಗಳ ಬಳಿಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಎಲ್ಲಾ ಮಸೀದಿಗಳಿಗೆ ಸುತ್ತೋಲೆ ಕಳಿಸಿ, ಜಾಗೃತಿ ಮೂಡಿಸಿದ್ದು ಫಲ ನೀಡಿದೆ.

ಜಾಮೀಯಾ ಮಸೀದಿ ಹಾಗೂ ಮುಸ್ಲಿಂ ಚಾರಿಟೇಬಲ್ ಫಂಡ್ ವತಿಯಿಂದ ಈ ಸುತ್ತೋಲೆ ರಾಜ್ಯದ ಮಸೀದಿಗಳಿಗೆ ಪ್ರಕಟಣೆ ಹೊರಡಿಸಲಾಗಿತ್ತು. ಜಾಮೀಯಾ ಮಸೀದಿಯ ಇಮಾಮ್ ಮೊಹಮ್ಮದ್ ಮಕ್ಸೂದ್ ಇಮ್ರಾನ್ ಅವರು ಈ ಬಗ್ಗೆ ಮಾತನಾಡಿ ಎಲ್ಲಾ ಮಸೀದಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದಿದ್ದಾರೆ.
ಜಾಗೃತ ಸಿಡಿಗಳನ್ನು ಹಂಚಲಾಗಿದೆ: ಪ್ರತಿ ಶುಕ್ರವಾರದ ನಮಾಜು ಸಮಯಕ್ಕೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಿಡಿಗಳನ್ನು ಎಲ್ಲರಿಗೂ ವಿತರಿಸಿ ಯುವಕರಿಗೆ ಧರ್ಮ ಎಂದರೇನು? ಧರ್ಮ ಯುದ್ಧ ಬೇಕೆ? ಇರಾಕಿ ಉಗ್ರ ಸಂಘಟನೆಗಳ ಆಮಿಷದಿಂದ ತಪ್ಪಿಸಿಕೊಳ್ಳುವುದು ಹೇಗೆ? ಭಾರತದಲ್ಲಿ ಸಹಿಷ್ಣುತೆಯಿಂದ ಬಾಳುವುದು ಹೇಗೆ? ಇವೆ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. [ಇರಾಕಿ ಉಗ್ರರಿಂದ 'ಏಡ್ಸ್ ಬಾಂಬ್' ಬೀಳಲಿದೆ ಎಚ್ಚರ!]
ಇದಲ್ಲದೆ ಜಾಗ್ಟೃತಿ ದಳದ ಸದಸ್ಯರು ಅನೇಕ ಶಾಲೆ, ಕಾಲೇಜುಗಳಿಗೆ ತೆರಳಿ ಇಸ್ಲಾಂ ಧರ್ಮ ಗಲಭೆಗೆ ಆಸ್ಪದ ನೀಡುವುದಿಲ್ಲ. ಉಗ್ರವಾದಕ್ಕೂ ಇಸ್ಲಾಂಗೂ ಸಂಬಂಧವಿಲ್ಲ ಎಂದು ಎಚ್ಚರಿಕೆ ಮೂಡಿಸುತ್ತಿದ್ದಾರೆ.
ಬೆಂಗಳೂರು ನಗರವೊಂದರಲ್ಲೇ ಸುಮಾರು 140ಕ್ಕೂ ಅಧಿಕ ಮಸೀದಿಗಳಿಗೆ ಸುತ್ತೋಲೆ ತಲುಪಿದ್ದು, ಈಗಾಗಲೇ ಐಎಸ್ ಐಎಸ್ ಬಗ್ಗೆ ಎಚ್ಚರವಹಿಸುವಂತೆ ಯುವ ಮುಸ್ಲಿಮ್ ಸಮುದಾಯಕ್ಕೆ ತಿಳಿ ಹೇಳಲಾಗುತ್ತಿದೆ.
ಇರಾಕಿ ಉಗ್ರ ಸಂಘಟನೆಯ ಬಗ್ಗೆ ಜಾಗೃತಿ ಮೂಡಿಸಲು ಅಲರ್ಟ್ ಸಂದೇಶಗಳನ್ನು ಮೊದಲಿಗೆ ಬೆಂಗಳೂರಿನ ಮಸೀದಿಗಳಿಗೆ ಕಳಿಸಲಾಗಿದೆ. ನಂತರ ರಾಜ್ಯದೆಲ್ಲೆಡೆ ಇರುವ ಮಸೀದಿಗಳಿಗೆ ಕಳಿಸಲಾಗಿದ್ದು, ವ್ಯಾಪಕವಾಗಿ ಜಾಗೃತಿಯಾಗಬೇಕಿದೆ ಎಂದು ಇಮಾಮ್ ಹೇಳಿದ್ದಾರೆ.












Click it and Unblock the Notifications