Government Employee: ಡಿಎ ಏರಿಕೆ, ಬೇಸರದಿಂದ ಮುಖ್ಯಮಂತ್ರಿಗಳಿಗೆ ಸರ್ಕಾರಿ ನೌಕರರ ಪತ್ರ
ಬೆಂಗಳೂರು, ನವೆಂಬರ್ 13: ಕೇಂದ್ರದ ಎನ್‌ಡಿಎ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಏರಿಕೆ ಮಾಡಿ ದೀಪಾವಳಿ ಹಬ್ಬದ ಉಡುಗೊರೆ ಕೊಟ್ಟಿದೆ. ಆದರೆ ಕರ್ನಾಟಕ ಸರ್ಕಾರ ಡಿಎ ಏರಿಕೆ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕೇಂದ್ರದಲ್ಲಿ ಡಿಎ ಏರಿಕೆಯಾದ ಬಳಿಕ ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಮಾಡಬೇಕಿತ್ತು. ಆದರೆ ಸರ್ಕಾರ ವಿಳಂಬ ಮಾಡುತ್ತಿದೆ. ಆದ್ದರಿಂದ ಬೇಸರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆಯಲಾಗಿದೆ.
ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದರು. ಸಿ. ಎಸ್. ಷಡಕ್ಷರಿ ನೇತೃತ್ವದ ನಿಯೋಗ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್ ಅವರನ್ನು ಭೇಟಿ ಮಾಡಿ, ಬಾಕಿ ಇರುವ ತುಟ್ಟಿ ಭತ್ಯೆಯನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದರು.

ಆದರೆ ಸರ್ಕಾರ ಇನ್ನೂ ಈ ಕುರಿತು ಯಾವುದೇ ಆದೇಶವನ್ನು ಹೊರಡಿಸಿಲ್ಲ. ಆದ್ದರಿಂದ ನವೆಂಬರ್ 12ರಂದು ಸಿ. ಎಸ್. ಷಡಕ್ಷರಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೊಂದು ಪತ್ರವನ್ನು ಬರೆದಿದ್ದಾರೆ. ಸರ್ಕಾರಿ ನೌಕರರು ನಿರಾಸೆಗೊಂಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದ ವಿವರಗಳು: ಸಿ. ಎಸ್. ಷಡಾಕ್ಷರಿ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01-07-2024ರಿಂದ ಬಾಕಿ ಇರುವ ತುಟ್ಟಿಭತ್ಯೆ ಆದೇಶವನ್ನು ಶೀಘ್ರವಾಗಿ ಹೊರಡಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಕೇಂದ್ರ ಸರ್ಕಾರದ ಆದೇಶ ದಿನಾಂಕ 21-10-2024, ಸಂಘದ ಪತ್ರ ದಿನಾಂಕ 22-10-2024 ಉಲ್ಲೇಖಿಸಲಾಗಿದೆ.
ಪತ್ರದಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ 01-07-2024 ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ 3ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಿದೆ. ಕೇಂದ್ರ ಸರ್ಕಾರ ತುಟ್ಟಿ ಭತ್ಯೆ ಆದೇಶ ಹೊರಡಿಸಿದ 24 ಗಂಟೆಯೊಳಗಾಗಿ ರಾಜ್ಯದಲ್ಲಿ ತುಟ್ಟಿಭತ್ಯೆ ಆದೇಶವನ್ನು ತಮ್ಮ ಅವಧಿಯಲ್ಲಿ ಈ ಹಿಂದೆ ಹೊರಡಿಸಲಾಗಿತ್ತು.
ಕೇಂದ್ರ ಸರ್ಕಾರದ ಆದೇಶದನ್ವಯ ರಾಜ್ಯ ಸರ್ಕಾರವು ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿಯಾದರೂ ತುಟ್ಟಿಸಭತ್ಯೆಯನ್ನು ಮಂಜೂರು ಮಾಡುವುದೆಂಬ ಆಶಾಭಾವನೆಯನ್ನು ನೌಕರರು ಹೊಂದಿದ್ದರು. ಆದರೆ, ಸಂಘದಿಂದ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರೂ ಸಹ ಇದುವರೆಗೂ ದಿನಾಂಕ 01-07-2024ರಿಂದ ಬಾಕಿ ಇರುವ ತುಟ್ಟಿಭತ್ಯೆಯನ್ನು ಆದೇಶವನ್ನು ಸರ್ಕಾರ ಹೊರಡಿಸದೇ ಇರುವುದರಿಂದ ರಾಜ್ಯದ 6 ಲಕ್ಷ ಸರ್ಕಾರಿ ಅಧಿಕಾರಿ/ ನೌಕರರಲ್ಲಿ ತೀವ್ರ ನಿರಾಶೆಯನ್ನು ಮೂಡಿಸಿದೆ ಎಂದು ಹೇಳಿದ್ದಾರೆ.
ಅಲ್ಲದೇ, ಹಲವಾರು ಅಧಿಕಾರಿ-ನೌಕರರು ಸಂಘದ ಮೇಲೆ ನಿರಂತರ ಒತ್ತಡವನ್ನು ಹಾಕುತ್ತಿರುವುದರಿಂದ ಶೀಘ್ರವಾಗಿ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01-07-2024ರಿಂದ ಅನ್ವಯವಾಗುವಂತೆ ಬಾಕಿ ಇರುವ ಶೇ 3ರಷ್ಟು ತುಟ್ಟಿಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ನೀಡಿ ಆದೇಶ ಹೊರಡಿಸಲು ಸಂಬಂಧಪಟ್ಟವರಿಗೆ ಆದೇಶಿಸುವಂತೆ ಮತ್ತೊಮ್ಮೆ ತಮ್ಮಲ್ಲಿ ಕೋರಿದೆ ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ತುಟ್ಟಿಭತ್ಯೆ ಏರಿಕೆ ಮಾಡಿದ ಬಳಿಕ ಕರ್ನಾಟಕದ ಸರ್ಕಾರಿ ನೌಕರರು ರಾಜ್ಯ ಸರ್ಕಾರ ಡಿಎ ಹೆಚ್ಚಳದ ಕುರಿತು ಯಾವಾಗ ಆದೇಶವನ್ನು ಹೊರಡಿಸಲಿದೆ? ಎಂದು ಕಾದು ಕುಳಿತಿದ್ದಾರೆ. ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ 'ಆತ್ಮೀಯ ರಾಜ್ಯದ ಸರ್ಕಾರಿ ನೌಕರ ಬಾಂಧವರೇ, ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಬಾಕಿ ಇರುವ ತುಟ್ಟಿ ಭತ್ಯೆ ಆದೇಶದ ಕಡತ ಸರ್ಕಾರದಲ್ಲಿ ಅನುಮೋದನೆಗೆ ಬಾಕಿ ಇದ್ದು, ಸೋಮವಾರ ಅಥವಾ ಮಂಗಳವಾರ ಸರ್ಕಾರಿ ಆದೇಶವಾಗಲಿದೆ' ಎಂದು ಮಾಹಿತಿ ಹರಿದಾಡುತ್ತಿತ್ತು. ಆದರೆ ಇನ್ನೂ ಸಹ ಆದೇಶವಾಗದಿರುವುದು ಸರ್ಕಾರಿ ನೌಕರರಲ್ಲಿ ನಿರಾಸೆ ಮೂಡಿಸಿದೆ.
ಅಕ್ಟೋಬರ್ 16ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಈ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿತ್ತು. ನೌಕರರಿಗೆ ಶೇ. 3ರಷ್ಟು ಹೆಚ್ಚುವರಿ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರಕ್ಕೆ ಸಂಪುಟ ಅನುಮೋದನೆ ಕೊಟ್ಟಿತ್ತು. ಇದರಿಂದಾಗಿ ನೌಕರರಿಗೆ ಹಬ್ಬದ ಉಡುಗೊರೆ ಸಿಕ್ಕಿತ್ತು. ಸಂಪ್ರದಾಯದಂತೆ ಕೇಂದ್ರದಲ್ಲಿ ತುಟ್ಟಿಭತ್ಯೆ ಏರಿಕೆಯಾದ ಬಳಿಕ ರಾಜ್ಯದಲ್ಲಿ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಬೇಕು.
ಕೆಲವು ದಿನಗಳ ಹಿಂದೆ ಸಿ. ಎಸ್. ಷಡಾಕ್ಷರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01-07-2024ರಿಂದ ಅನ್ವಯವಾಗುವಂತೆ ಬಾಕಿ ಇರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದರು ಮತ್ತು ಕೇಂದ್ರ ಸರ್ಕಾರ ಡಿಎ ಹೆಚ್ಚಳದ ಆದೇಶವನ್ನು ಉಲ್ಲೇಖಿಸಿದ್ದರು. ಆದರೆ ಇನ್ನೂ ಸಹ ಕರ್ನಾಟಕ ಸರ್ಕಾರದ ಆದೇಶವಾಗಿಲ್ಲ.












Click it and Unblock the Notifications