Channapatna : ಚನ್ನಪಟ್ಟಣ ಕ್ಷೇತ್ರದಿಂದ ಡಿ ಕೆ ಶಿವಕುಮಾರ್ ಸ್ಪರ್ಧೆ ಇಲ್ಲ, ಮತ್ಯಾರು?
ರಾಮನಗರ, ಜುಲೈ 03: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು ಭಾರಿ ಚುರುಕು ಪಡೆದುಕೊಂಡಿವ. ಚುನಾವಣೆ ದಿನಾಂಕ ನಿಗದಿಯಾಗುವ ಮುನ್ನವೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈಗಾಗಲೇ ಚನ್ನಪಟ್ಟಣದಲ್ಲಿ ಓಡಾಟ ನಡೆಸಿದ್ದು, ಮತದಾರರನ್ನು ವಿಶ್ವಾಸಕ್ಕೆ ಪಡೆಯಲು ಕಸರತ್ತು ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ನಾನೇ ಸ್ಪರ್ಧೆ ಮಾಡದೇ ವಿಧಿಯಿಲ್ಲ ಎಂದಿದ್ದ ಡಿ ಕೆ ಶಿವಕುಮಾರ್, ಇದೀಗ ವರಸೆ ಬದಲಿಸಿದ್ದು, ಡಿಕೆಶಿ ಬದಲಿಗೆ ಮತ್ತೋರ್ವ ನಾಯಕ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಚನ್ನಪಟ್ಟಣದಲ್ಲಿ ಶಾಸಕರು ಇದ್ದಿದ್ದರೆ ನಾನೇಕೆ ಬರುತ್ತಿದ್ದೆ? ಕುರ್ಚಿ ಖಾಲಿ ಇರುವುದಕ್ಕೆ ಬಂದು ಕುಳಿತಿದ್ದೇನೆ. ಬೇರೆಯವರು ಕುರ್ಚಿಯಲ್ಲಿ ಕುಳಿತಿದ್ದರೆ ಬರುತ್ತಿದ್ದೇನೆಯೇ? ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದು, ಕಳೆದ ಒಂದು ತಿಂಗಳಿನಿಂದ ಚನ್ನಪಟ್ಟಣದಲ್ಲಿ ಸುತ್ತಾಟ ಆರಂಭಿಸಿದ್ದಾರೆ.

ಚನ್ನಪಟ್ಟಣದಿಂದ ಯಾರೇ ಅಭ್ಯರ್ಥಿಯಾದರು ನನಗೆ ಮತ ಹಾಕಿದಂತೆ. ಯಾರು ಏನು ಬೇಕಾದರೂ ಖುಷಿಪಡಲಿ, ಚರ್ಚೆ ಮಾಡಲಿ. ನಾವು ಜನ ಸೇವೆ ಮಾಡಲು ಬಂದಿದ್ದೇವೆ. ಅದು ಮುಖ್ಯವೇ ಹೊರತು, ರಾಜಕೀಯವಲ್ಲ, ಯಾರೇ ಅಭ್ಯರ್ಥಿ ಆದರೂ ನನ್ನ ಮುಖ ನೋಡಿ ಓಟು ಹಾಕಿ ಎಂದು ಮನವಿ ಮಾಡಿದರು.
ಪ್ರತಿ ಜಿಲ್ಲೆಯಲ್ಲೂ ಜನಸ್ಪಂದನ ಕಾರ್ಯಕ್ರಮ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ. ಅದರಂತೆ ಚನ್ನಪಟ್ಟಣದಲ್ಲಿ ನಾನು ವಿಶೇಷ ಆದ್ಯತೆ ನೀಡಿ ಕಾರ್ಯಕ್ರಮ ಮಾಡ್ತಿದ್ದೇನೆ. ಜನರ ಸಮಸ್ಯೆಗಳನ್ನ ಬಗೆಹರಿಸಿ ತೊಂದರೆ ತಪ್ಪಿಸಬೇಕು. ಅರ್ಜಿ ವಿಲೇವಾರಿಗೆ ಅಧಿಕಾರಿಗಳಿಗೆ ಟೈಂ ಪಿಕ್ಸ್ ಮಾಡ್ತಿದ್ದೇವೆ. ಶೀಘ್ರದಲ್ಲೇ ಜನರ ಜನರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕ್ಷೇತ್ರಕ್ಕೆ ಜಮೀರ್, ಕೃಷ್ಣಭೈರೇಗೌಡರು ಬರ್ತಾರೆ. ಇಲ್ಲಿ ರಿವ್ಯೂ ಮೀಟಿಂಗ್ ಮಾಡಿ ಸಮಸ್ಯೆ ಆಲಿಸುತ್ತಾರೆ. ಮತ್ತಷ್ಟು ಇಲಾಖೆ ಸಚಿವರು ಬಂದು ಅಹವಾಲು ಸ್ವೀಕರಿಸುತ್ತಾರೆ ಎಂದರು.
ಇನ್ನೂ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಸ್ಪರ್ಧೆ ಮಾಡಲ್ಲ. ಅವರದ್ದು ರಾಜಕೀಯ ತಂತ್ರಗಾರಿಕೆ ಅಷ್ಟೇ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡಿರುವ ಡಿಕೆ ಶಿವಕುಮಾರ್ ಸಹೋದರ್ ಡಿಕೆ ಸುರೇಶ್, ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆ ನಡೆದಿತ್ತು. ಆದರೆ, ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಡಿ ಕೆ ಶಿವಕುಮಾರ್ ವಿಷಯವನ್ನ ಡೈವರ್ಟ್ ಮಾಡಿದ್ದರು.
ಚನ್ನಪಟ್ಟಣದಿಂದ ಡಿ ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಅವರನ್ನು ಕಣಕ್ಕಿಳಿಸುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವಿಚಾರವಾಗಿ ನಮ್ಮ ಕುಟುಂಬದಿಂದ ಯಾರು ಸ್ಪರ್ಧೆ ಮಾಡಲ್ಲ ಎಂದು ಡಿ ಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದರು. ಇದೀಗ ಕಾಂಗ್ರೆಸ್ನಿಂದ ಯಾರೇ ಸ್ಪರ್ಧೆ ಮಾಡಲಿ ನನ್ನ ನೋಡಿ ಮತ ನೀಡಿ ಎಂದು ಹೇಳಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಚನ್ನಪಟ್ಟಣ ಬೈ ಎಲೆಕ್ಷನ್ಗೆ ಸ್ಪರ್ಧೆ ಮಾಡಲ್ಲ ಎನ್ನುವುದು ಸ್ಪಷ್ಟವಾಗಿದೆ. ಮಾಜಿ ಸಂಸದ ಡಿಕೆ ಸುರೇಶ್ ಅವರೇ ಸ್ಪರ್ಧೆ ಮಾಡುವ ಎಲ್ಲಾ ಸಾಧ್ಯತೆಗಳಿವೆ.












Click it and Unblock the Notifications