ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಪವರ್ ಗೇಮ್: ಸಿಎಂ ಕಚೇರಿ ಪಕ್ಕದಲ್ಲೇ ತಮಗೂ ಕಚೇರಿ ಬೇಕೆಂದ ಡಿಸಿಎಂ
ಬೆಂಗಳೂರು, ಜುಲೈ 08: ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡಿಕೆ ಶಿವಕುಮಾರ್ ಅವರು ಅನಿವಾರ್ಯವಾಗಿ ಡಿಸಿಎಂ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಕರ್ನಾಟಕದ ಚುನಾವಣೆ ಫಲಿತಾಂಶ ಬಂದ ನಂತರ ದೆಹಲಿಯಲ್ಲಿ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪೈಪೋಟಿ ನಡೆಸಿದ್ದರು.
ಅಂತಿಮವಾಗಿ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹಾಗೂ ಡಿಕೆ ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಘೋಷಿಸಿತು. ಇಬ್ಬರೂ ನಾಯಕರ ನಡುವೆ ಎಲ್ಲವೂ ಸರಿಯಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದರೂ, ಡಿಕೆಶಿ ಅವರು ತಮ್ಮದೇ ಆದ ವರ್ಚಸ್ಸನ್ನು ಬಳಸುವಲ್ಲಿ ನಿರತರಾಗಿದ್ದಾರೆ ಎಂಬುದು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿರುವ ಮಾತು.

ಕರ್ನಾಟಕ ಸರ್ಕಾರದಲ್ಲಿ ಸಿಎಂರಷ್ಟೇ ನಾನು ಪವರ್‌ಫುಲ್ ಎಂಬುದನ್ನು ತೋರಿಸಿಕೊಳ್ಳುವುದು ಹಾಗೂ ಸಮರ್ಥಿಸಿಕೊಳ್ಳುವುದು ಡಿಕೆಶಿ ಅವರ ನಡೆಯಲ್ಲಿ ಕಂಡುಬರುತ್ತಿದೆ. ಈ ಕಾರಣಕ್ಕಾಗಿಯೇ ಅವರು ಕೆಲವು ಬೇಡಿಕೆಗಳನ್ನು ಇಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.
ಇಂದಿನ ವರದಿಗಳ ಪ್ರಕಾರ, ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ಕಚೇರಿ ಇದೆ. ಅದರ ಪಕ್ಕದಲ್ಲೇ ತಮಗೂ ಕಚೇರಿಯನ್ನು ಕೊಡುವಂತೆ ಡಿಸಿಎಂ ಸಿಬ್ಬಂದಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಕಚೇರಿಗಳು ವಿಧಾನಸಭೆ ಕಲಾಪ ನಡೆಯುವ ಪ್ರಾಂಗಣದ ಪಕ್ಕದಲ್ಲೇ ಇವೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸೌಧದ ಪಶ್ಚಿಮ ದ್ವಾರದಿಂದ ಪ್ರವೇಶಿಸಿದರೆ ಬಲಭಾಗದಲ್ಲಿಯೇ ಕೊಠಡಿ ಇದೆ. ಅಧಿವೇಶನ ನಡೆಯುತ್ತಿರುವಾಗ ಈ ಕೊಠಡಿಯನ್ನು ಸಿಎಂ ಬಳಸುತ್ತಾರೆ.

ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಧಾನಸೌಧದ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಸಿಎಂ ಕಚೇರಿ ಪಕ್ಕದಲ್ಲೇ ತಮಗೊಂದು ಕೊಠಡಿ ಮಂಜೂರು ಮಾಡುವಂತೆ ಶಿವಕುಮಾರ್ ಕೇಳಿಕೊಂಡಿದ್ದಾರೆ.
ಮುಖ್ಯಮಂತ್ರಿಯವರ ಕೊಠಡಿಯು ಪ್ರಸ್ತುತ ಮೊದಲ ಮಹಡಿಯಲ್ಲಿ ಪಶ್ಚಿಮ ಪ್ರವೇಶದ ಬಲಭಾಗದಲ್ಲಿದೆ. ಈಗ ಉಪ ಮುಖ್ಯಮಂತ್ರಿ ಎಡಭಾಗದಲ್ಲಿ ಕೊಠಡಿ ಹುಡುಕುತ್ತಿದ್ದಾರೆ.
ಹಿಂದಿನ ಯಾವ ಉಪಮುಖ್ಯಮಂತ್ರಿಗಳಿಗೂ ಮೊದಲ ಮಹಡಿಯಲ್ಲಿ ಪ್ರತ್ಯೇಕ ಕೊಠಡಿ ಇರಲಿಲ್ಲ ಎಂಬುದು ಗಮನಿಸಬೇಕಿದೆ.

ವರದಿಗಳ ಪ್ರಕಾರ, ಮುಖ್ಯಮಂತ್ರಿಗಳ ಕಚೇರಿ ಪಕ್ಕ ಒಂದು ಕೊಠಡಿ ಖಾಲಿ ಇದೆ. ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ಅದನ್ನು ಉಪ ಮುಖ್ಯಮಂತ್ರಿಗೆ ಹಂಚಬಹುದು ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ 14 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ನೀಡಲಾಗಿದ್ದ ಐದು ಗ್ಯಾರಂಟಿಗಳಿಗೆ ಸುಮಾರು 52 ಸಾವಿರ ಕೋಟಿ ಹಣವನ್ನು ಘೋಷಿಸಿದ್ದಾರೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಶಕ್ತಿ ಯೋಜನೆಗಳಿಗೆ ಮುಖ್ಯಮಂತ್ರಿ ಹೆಚ್ಚು ಒತ್ತು ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಜಲಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಇಲಾಖೆಗಳನ್ನು ವಹಿಸಿಕೊಂಡಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಕನಸನ್ನು ನನಸಾಗಿಸಲು ಕೆಲಸ ಮಾಡುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿಗೆ ಸಿಂಹಪಾಲು ಅನುಧಾನವನ್ನು ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.












Click it and Unblock the Notifications