ಎಂಜಿನಿಯರಿಂಗ್‌ಗೆ ನೇರ ಪ್ರವೇಶ: ಇಂದು ವೃತ್ತಿಪರ ಡಿಪ್ಲೊಮಾ ಅಭ್ಯರ್ಥಿಗಳ DCET ಸೀಟು ಹಂಚಿಕೆ ಫಲಿತಾಂಶ ಪ್ರಕಟ

ಬೆಂಗಳೂರು: ಎಂಜಿನಿಯರಿಂಗ್ ಪದವಿ ಪಡೆಯುವ ಕನಸು ಕಾಣುತ್ತಿರುವ ಹಾಗೂ ವೃತ್ತಿಯಲ್ಲಿರುವ ಡಿಪ್ಲೊಮಾ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಮಾಹಿತಿಯೊಂದನ್ನ ನೀಡಿದೆ. 2026ನೇ ಸಾಲಿನ ಡಿಸಿಇಟಿ ಅಡಿಯಲ್ಲಿ ವೃತ್ತಿಪರ ಡಿಪ್ಲೊಮಾ ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶ ಕಲ್ಪಿಸುವ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನ ಪ್ರಾಧಿಕಾರವು ಇದೀಗ ಪ್ರಕಟಿಸಿದೆ.

ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳು ಹಾಗೂ ಅಭ್ಯರ್ಥಿಗಳ ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಈ ಸೀಟು ಹಂಚಿಕೆ ಪ್ರಕ್ರಿಯೆ ನಡೆದಿದೆ. ತಾತ್ಕಾಲಿಕ ಪಟ್ಟಿಯಲ್ಲಿ ಸೀಟು ಪಡೆದಿರುವ ಅಭ್ಯರ್ಥಿಗಳು ಮುಂದಿನ ಪ್ರವೇಶ ಪ್ರಕ್ರಿಯೆಗಳಿಗೆ ಸಜ್ಜಾಗಬೇಕಿದೆ.

DCET 2026

DCET 2026ರ ಅಂತಿಮ ಫಲಿತಾಂಶ ಇಂದು ಪ್ರಕಟ

ನಿನ್ನೆ ತಡರಾತ್ರಿ ತಾತ್ಕಾಲಿಕ ಫಲಿತಾಂಶವನ್ನ ಬಿಡುಗಡೆ ಮಾಡಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಇಂದು (ಆಗಸ್ಟ್ 22) ಬೆಳಿಗ್ಗೆ 11 ಗಂಟೆಗೆ ಅಂತಿಮ ಫಲಿತಾಂಶವನ್ನ ಪ್ರಕಟಿಸಲಿದೆ. ತಾತ್ಕಾಲಿಕ ಪಟ್ಟಿಯಲ್ಲಿ ಸೀಟು ಪಡೆದ ಅಭ್ಯರ್ಥಿಗಳು ತಮ್ಮ ಹಂಚಿಕೆಯಾಗಿರುವ ಕಾಲೇಜು ಮತ್ತು ಕೋರ್ಸ್ ಅನ್ನು ಖಚಿತಪಡಿಸಿಕೊಳ್ಳಲು ಅಂತಿಮ ಪಟ್ಟಿಯನ್ನ ಒಮ್ಮೆ ಪರಿಶೀಲಿಸುವುದು ಕಡ್ಡಾಯವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಐಎಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಪ್ರಕ್ರಿಯೆಗಳೇನು?

ಅಂತಿಮ ಫಲಿತಾಂಶ ಪ್ರಕಟವಾದ ನಂತರ, ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ತಮ್ಮ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ನಿಗದಿತ ಶುಲ್ಕವನ್ನ ಪಾವತಿಸಬೇಕಾಗುತ್ತದೆ. ಪ್ರಾಧಿಕಾರವು ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ 24 ರಿಂದ ಆಗಸ್ಟ್ 25ರವರೆಗೆ ಆನ್‌ಲೈನ್ ಮೂಲಕ ಅಥವಾ ಚಲನ್ ಡೌನ್‌ಲೋಡ್ ಮಾಡಿಕೊಂಡು ಬ್ಯಾಂಕ್ ಮೂಲಕ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಶುಲ್ಕ ಪಾವತಿ ಪ್ರಕ್ರಿಯೆಯ ನಂತರವಷ್ಟೇ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಿಂದ ತಮ್ಮ ಸೀಟು ಖಾತರಿ ಚೀಟಿ ಅಂದರೆ ಅಡ್ಮಿಷನ್‌ ಆರ್ಡರ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಶುಲ್ಕ ಪಾವತಿಸಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡ ಅಭ್ಯರ್ಥಿಗಳು, ಆಗಸ್ಟ್ 26ರೊಳಗೆ ತಮಗೆ ಹಂಚಿಕೆಯಾಗಿರುವ ಸಂಬಂಧಪಟ್ಟ ಎಂಜಿನಿಯರಿಂಗ್ ಕಾಲೇಜುಗಳಿಗೆ ಖುದ್ದಾಗಿ ಭೇಟಿ ನೀಡಿ ವರದಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಕಾಲೇಜಿಗೆ ವರದಿ ಮಾಡಿಕೊಳ್ಳುವಾಗ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ಶೈಕ್ಷಣಿಕ ದಾಖಲೆಗಳು, ವೃತ್ತಿಪರ ಪ್ರಮಾಣಪತ್ರಗಳು, ಶುಲ್ಕ ಪಾವತಿಸಿದ ರಸೀದಿ ಹಾಗೂ ಕೆಇಎ ಪ್ರವೇಶ ಪತ್ರವನ್ನ ತಗೆದುಕೊಂಡು ಹೋಗಲು ಮರೆಯಬಾರದು. ನಿಗದಿತ ದಿನಾಂಕದೊಳಗೆ ಕಾಲೇಜಿನಲ್ಲಿ ವರದಿ ಮಾಡಿಕೊಳ್ಳದಿದ್ದರೆ, ಹಂಚಿಕೆಯಾದ ಸೀಟು ರದ್ದಾಗುವ ಸಾಧ್ಯತೆ ಇರುತ್ತದೆ.

ಫಲಿತಾಂಶ ಚೆಕ್ ಮಾಡುವುದು ಹೇಗೆ?

ಅಭ್ಯರ್ಥಿಗಳು ತಮ್ಮ ಅಂತಿಮ ಫಲಿತಾಂಶವನ್ನು ವೀಕ್ಷಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಪ್ರಾಧಿಕಾರವು ಒದಗಿಸಿರುವ ಈ ಕೆಳಗಿನ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ, ತಮ್ಮ ಲಾಗಿನ್ ವಿವರಗಳನ್ನು ಹಾಕುವ ಮೂಲಕ ಫಲಿತಾಂಶವನ್ನ ಪರಿಶೀಲಿಸಬಹುದು:

https://keaonline.karnataka.gov.in/dcet_working_prof_opt_etry_2026_v1/main/checkresult.php

ಕೆಲಸ ಮಾಡುತ್ತಲೇ ಉನ್ನತ ವ್ಯಾಸಂಗ ಮಾಡಬೇಕು ಎಂಬ ಹಂಬಲವುಳ್ಳ ವೃತ್ತಿಪರರಿಗೆ ಈ ನೇರ ಪ್ರವೇಶವು ಒಂದು ಅತ್ಯುತ್ತಮ ಅವಕಾಶವಾಗಿದೆ. ನಿಗದಿತ ಸಮಯದೊಳಗೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮುಂದಿನ ವ್ಯಾಸಂಗಕ್ಕೆ ಅಣಿಯಾಗುವಂತೆ ಕೆಇಎ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+