ಸಂಗೀತ ನಿರ್ದೇಶಕ ಹಂಸಲೇಖ ಅವರಿಂದ ಈ ಬಾರೀ ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ
ಮೈಸೂರು, ಆಗಸ್ಟ್ 29: ಖ್ಯಾತ ಸಂಗೀತ ನಿರ್ದೇಶಕ, ನಾದ ಬ್ರಹ್ಮ ಹಂಸಲೇಖರಿಂದ ಈ ಬಾರಿಯ ದಸರ ಉದ್ಘಾಟನೆಯನ್ನ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದರು.

ಈ ಕುರಿತು ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಬರಲಿದ್ದಾರೆ. ಅಲ್ಲದೇ ನಾಳೆ ಗೃಹ ಲಕ್ಷ್ಮೀ ಯೋಜನೆ ಜಾರಿಯಾಗಲಿದೆ, ಎಐಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿಯವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬರುತ್ತಿದ್ದಾರೆ.
ಸರ್ಕಾರ 100 ದಿನ ಪೂರೈಸಿದೆ. ನಮಗೆ ಇದೇನು ಸವಾಲು ಎನ್ನಿಸಲಿಲ್ಲ, ಗ್ಯಾರೆಂಟಿ ವಿಚಾರದಲ್ಲಿ ನಮಗೆ ಬದ್ಧತೆ ಇತ್ತು. ಹೀಗಾಗಿ ಅವುಗಳ ಜಾರಿ ಕಠಿಣ ಅನಿಸಲಿಲ್ಲ. ಮಾತು ಕೊಟ್ಟಂತೆ ಗ್ಯಾರೆಂಟಿಗಳ ಜಾರಿ ಮಾಡುತ್ತಿದ್ದೇವೆ. ಖುದ್ದು ಪಿಎಂ ಕೂಡ ಗ್ಯಾರೆಂಟಿಗಳ ಬಗ್ಗೆ ಆರೋಪ ಮಾಡುತ್ತಿದ್ದರು. ಆದರೆ, ಸರ್ಕಾರ ರಾಜ್ಯ ಯಾವ ದಿವಾಳಿಯೂ ಆಗಿಲ್ಲ. ಎಲ್ಲವನ್ನೂ ವ್ಯವಸ್ಥಿತವಾಗಿ ಜಾರಿ ಮಾಡುತ್ತಿದ್ದೇವೆ. ಗೃಹ ಲಕ್ಷ್ಮಿಗೆ ವಾರ್ಷಿಕ 32 ಸಾವಿರ ಕೋಟಿ ಖರ್ಚಾಗುತ್ತದೆ. ದೇಶದ ಇತಿಹಾಸದಲ್ಲೇ ಒಂದು ಯೋಜನೆ ಇಷ್ಟು ದೊಡ್ಡ ಪ್ರಮಾಣದ ಹಣ ಖರ್ಚು ಮಾಡುತ್ತಿರುವುದು ಇದೇ ಮೊದಲು ಎಂದು ಹೇಳಿದರು.
ಬಿಜೆಪಿ ಸರ್ಕಾರದ ಹಗರಣ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ಸರ್ಕಾರದ ಎಲ್ಲಾ ಹಗರಣಗಳ ಬಗ್ಗೆಯೂ ತನಿಖೆ ಮಾಡುತ್ತೇವೆ. ಇದರಲ್ಲಿ ಟಾರ್ಗೆಟ್ ಎಂಬ ಪ್ರಶ್ನೆಯೇ ಇಲ್ಲ. ಪಿಎಸ್ಐ ಹಗರಣ, 40% ಹಗರಣ, ಕೋವಿಡ್ ಹಗರಣ ಎಲ್ಲದನ್ನೂ ತನಿಖೆಗೆ ಒಳಪಡಿಸಿದ್ದೇವೆ. ಹಗರಣದ ಬಗ್ಗೆ ತನಿಖೆ ಮಾಡಿಸಿದೆ ಇವರು ತಿಂದುಕೊಂಡು ಹಾಗೇ ಹೋಗಲಿ ಎಂದು ಬಿಡಬೇಕಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅವರ ಕಾಲದಲ್ಲೇ ಹಗರಣ ತನಿಖೆಗೆ ಆಗ್ರಹಿಸಿದ್ದೇವೆ. ಅವರು ತನಿಖೆ ಮಾಡಿಸಲಿಲ್ಲ, ತನಿಖೆ ಮಾಡಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications