ಈ ಕಾರಣಕ್ಕೆ ನಟ ದರ್ಶನ್‌ಗೆ ಸುಲಭವಾಗಿ ಜಾಮೀನು ಸಿಗುತ್ತೆ, ವಕೀಲರು ಹೇಳಿದ್ದೇನು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಯಾಗಿರುವ ನಟ ದರ್ಶನ್ಅವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ದರ್ಶನ್ ಪರ ವಕೀಲರು ಈಗಾಗಲೇ ಕೋರ್ಟ್ ಮುಂದೆ ಜಾಮೀನು ಅರ್ಜಿ ಸಲ್ಲಿಸಿದ್ದು, ದರ್ಶನ್ ಅವರಿಗೆ ಯಾವ ಕಾರಣಕ್ಕೆ ಜಾಮೀನು ನೀಡಬೇಕು ಎಂದು ಕಾರಣಗಳನ್ನೂ ನೀಡಿದ್ದಾರೆ. ಇನ್ನು ಕಾರಣಗಳಿಂದ ದರ್ಶನ್‌ಗೆ ಬೇಲ್ ಸಿಗುವುದು ಸುಲಭವಾಗಲಿದೆ ಎಂದು ಹೇಳಲಾಗುತ್ತಿದೆ.
ಅದರಂತೆ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ಈ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಜಾಮೀನು ಅರ್ಜಿಯಲ್ಲಿ ದರ್ಶನ್ ಪರ ವಕೀಲರ ವಾದ ಈ ರೀತಿ ಇದೆ.

ಈ ಕೇಸ್‌ನಲ್ಲಿ ನಟ ದರ್ಶನ್ ಅವರ ಹೇಳಿಕೆಗಳನ್ನು ಆಧರಿಸಿ ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ಅವುಗಳನ್ನು ನೋಡಿದರೆ ಆರೋಪಗಳೆಲ್ಲ ಸುಳ್ಳು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಇಲ್ಲಿ ಸಾಕ್ಷಿಗಳನ್ನು ಸೃಷ್ಟಿಸುವ ಕೆಲಸ ನಡೆದಂತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಕೇಸ್‌ನಲ್ಲಿರುವ ಇನ್ನಿತರ ಆರೋಪಿಗಳ ಜೊತೆ ದರ್ಶನ್ ಮಾತನಾಡಿರುವ ಫೋನ್ ಕರೆ ವಿವರ ಸಂಗ್ರಹಿಸಿದ್ದಾರೆ. ಈ ವೇಳೆ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ತಿಳಿದಿತ್ತು ಎಂದು ಬಿಂಬಿಸಲಾಗಿದೆ ಎಂದು ದೂರಿದ್ದಾರೆ.
ಆದರೆ ದರ್ಶನ್ ಅವರು ತನ್ನ ಫ್ರೆಂಡ್ಸ್ ಹಾಗೂ ಇನ್ನಿತರರಿಗೆ ಸಹಜವಾಗಿ ಎಂದಿನಂತೆಯೇ ಫೋನ್‌ನಲ್ಲಿ ಮಾತನಾಡಿದ್ದಾರೆ. ಅವರು ಕರೆ ಮಾಡಿರುವುದು ರೆಗ್ಯುಲರ್ ಸಂಪರ್ಕದಲ್ಲಿದ್ದವರಿಗೆ ಮಾತ್ರ ಎಂದು ವಕೀಲರು ವಾದ ಮುಂದಿಟ್ಟಿದ್ದಾರೆ. ಇನ್ನು ಕೊಲೆ ನಡೆದ ಹಲವು ದಿನಗಳ ನಂತರ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ನಾಲ್ಕು ದಿನಗಳ ಬಳಿಕ ಮೃತದೇಹದ ತಪಾಸಣೆ ನಡೆದಿದೆ. ಈ ನಿಧಾನ ಪ್ರಕ್ರಿಯೆ ಬಗ್ಗೆಯೂ ತನಿಖಾಧಿಕಾರಿಗಳೂ ಸಂಪೂರ್ಣ ವಿವರ ನೀಡಿಲ್ಲ ಎಂದಿದ್ದಾರೆ.

ಇನ್ನು ಮೃತ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಅಸ್ಪಷ್ಟವಾದ ವರದಿ ನೀಡಿದ್ದಾರೆ. ರೇಣುಕಾಸ್ವಾಮಿ ಸಾವಿಗೆ ನಿಖರವಾದ ಕಾರಣ ಹಾಗೂ ಸಾವಿನ ಅವಧಿ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ ಎಂದು ದರ್ಶನ್ ಪರ ವಕೀಲರು ವಾದ ಮುಂದಿಟ್ಟಿದ್ದಾರೆ.
ಉಳಿದ ಆರೋಪಿಗಳ ಮೊಬೈಲ್‌ನಲ್ಲಿರುವ ಮೆಸೇಜ್‌ಗಳಿಗೂ ನಟ ದರ್ಶನ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಈ ಕೃತ್ಯದಲ್ಲಿ ಮೆಸೇಜ್‌ಗಳನ್ನು ಪ್ರಧಾನವಾಗಿ ಪರಿಗಣಿಸಲಾಗಿದೆ. ಹಾಗಾಗಿ ಈ ಕೃತ್ಯಕ್ಕೂ ಮೆಸೇಜ್‌ಗಳಿಗೂ ಯಾವುದೇ ಲಿಂಕ್ ಇಲ್ಲ. ಸಿಸಿಟಿವಿ ಕ್ಯಾಮೆರಾಗಳ ಮಾಹಿತಿ ಸಿಕ್ಕಿದ್ದರೂ ಇದರಲ್ಲಿ ನಟ ದರ್ಶನ್ ಅವರ ಪಾತ್ರ ಏನು ಎಂಬುದೇ ಸ್ಪಷ್ಟವಾಗಿಲ್ಲ ಎಂದು ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ.
ಅಲ್ಲಿ ಸಿಕ್ಕಿರುವ ಸಿಸಿಟಿವಿ ಸಾಕ್ಷಿಗಳಲ್ಲಿ ನಟ ದರ್ಶನ್ ಅವರ ಇರುವಿಕೆ, ಕೊಲೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದಂತಹ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಲ್ಲಿ ನಡೆದಿದೆ ಎಂದಿರುವುದಕ್ಕೂ ವೈದ್ಯರು ನೀಡಿರುವ ವರದಿಗೂ ಅಜಗಜಾಂತರ ವ್ಯತ್ಯಾಸವಿದೆ. ತಾಂತ್ರಿಕ ಸಾಕ್ಷ್ಯಗಳು ಹಾಗು ದಾಖಲಾಗಿರುವ ಹೇಳಿಕೆಗಳಿಗೂ ಹೊಂದಾಣಿಕೆ ಇಲ್ಲ. ಇದನ್ನೆಲ್ಲ ಗಮನಿಸಿದರೆ ಈ ಕೃತ್ಯದಲ್ಲಿ ದರ್ಶನ್ ಅವರ ಪಾತ್ರವೇ ಇಲ್ಲ ಎಂಬುದು ಕಂಡುಬರುತ್ತಿದೆ. ಮುಗ್ಧನಾಗಿರುವ ನಟ ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಸುಮ್ಮನೆ ಎಳೆದು ತರಲಾಗಿದೆ ಎಂದು ವಕೀಲರು ವಾದಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ವಕೀಲರ ವಾದಕ್ಕೆ ಪುಷ್ಟಿ ನೀಡುವ ಅಂಶಗಳು ಸಿಕ್ಕಿದ್ದೇ ಆದರೆ, ಈ ಕೇಸ್ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ನೂರಾರು ದಿನಗಳನ್ನು ಜೈಲಿನಲ್ಲೇ ಕಳೆದಿರುವ ನಟ ದರ್ಶನ್ ತೂಗುದೀಪ ಅವರಿಗೆ ಈ ಕಾರಣಗಳಿಂದ ಜಾಮೀನು ಸಿಗುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ಹಾಗಾಗಿ ಇಂದು ಎಲ್ಲರ ಚಿತ್ತ ಕೋರ್ಟ್ ತೀರ್ಪಿನತ್ತ ಇದೆ.











Click it and Unblock the Notifications