ರಾಜ್ಯದಲ್ಲಿ ಪತ್ತೆಯಾಗುತ್ತಿದೆ ಕೋಟಿ ಕೋಟಿ ಹಣ: ಅಭ್ಯರ್ಥಿಗಳ ಚುನಾವಣಾ ಖರ್ಚು ವೆಚ್ಚಗಳ ಮೇಲೆ ತೀವ್ರ ನಿಗಾ
ಬೆಂಗಳೂರು, ಏಪ್ರಿಲ್. 16: ರಾಜ್ಯದಲ್ಲಿ ಪ್ರತಿದಿನ ಕೋಟ್ಯಾಂತರ ರೂಪಾಯಿ ಚುನಾವಣಾ ಕರ್ತವ್ಯದಲ್ಲಿರುವ ಪೊಲೀಸರ ವಶವಾಗುತ್ತಿದೆ. ದಾಖಲೆ ಇಲ್ಲದ ಕಂತೆ ಕಂತೆ ನೋಟುಗಳನ್ನು ಕಂಡು ಜನ ಕೂಡ ದಂಗಾಗಿದ್ದಾಎ. ಇದೇ ವೇಳೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಚುನಾವಣಾ ಅಭ್ಯರ್ಥಿಗಳ ಖರ್ಚುವೆಚ್ಚದ ಮೇಲೆ ಪ್ರತಿ ದಿನವೂ ತೀವ್ರ ನಿಗಾವಹಿಸುವಂತೆ ಚುನಾವಣಾ ವೆಚ್ಚ ವೀಕ್ಷಕರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಪ್ರತಿದಿನವು ವರದಿ ಸಲ್ಲಿಸುವಂತೆ ತಿಳಿಸಲಾಗಿದೆ. ಚುನಾವಣಾ ಅಭ್ಯರ್ಥಿಗಳ ಪ್ರತಿದಿನದ ವಿವಿಧ ಕಾರ್ಯಕ್ರಮಗಳ, ಸಮಾರಂಭಗಳ ಚಟುವಟಿಕೆಗಳನ್ನು ಸರಿಯಾಗಿ ದಾಖಲಿಸಿಕೊಳ್ಳುವಂತೆ ಹಾಗೂ ವಿಡಿಯೋ ರೆಕಾರ್ಡಿಂಗ್ ಸಹ ಮಾಡುವಂತೆ ವಿಎಸ್‍ಟಿ, ಎಸ್‍ಎಸ್ಟಿ, ವಿವಿಟಿ ತಂಡಗಳಿಗೆ ಹಾಗೂ ಸಹಾಯಕ ವೆಚ್ಚ ಅಧಿಕಾರಿಗಳಿಗೆ ತಿಳಿಸಿದರು.

ಖರ್ಚು ವೆಚ್ಚ ನಿಗಾ ತಂಡವು ಶಾಡೋ ರಿಜಿಸ್ಟರ್ ನಲ್ಲಿ ಎಲ್ಲ ಖರ್ಚು ವೆಚ್ಚವನ್ನು ದಾಖಲಿಸುವಂತೆ ಸೂಚಿಸಲಾಗಿದೆ. ಕಾನೂನು ಬಾಹಿರ ಖರ್ಚಿನ ಮೇಲೆ ತೀವ್ರ ನಿಗಾ ವಹಿಸಬೇಕು. ಚುನಾವಣೆಯನ್ನು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ಜರುಗಿಸುವ ಹಿನ್ನೆಲೆಯಲ್ಲಿ ಅಭ್ಯರ್ಥಿಯ ಪ್ರತಿ ದಿನ ನಿತ್ಯದ ಖರ್ಚು ವೆಚ್ಚಗಳನ್ನು ಜಿಲ್ಲಾ ವೆಚ್ಚ ಸಮಿತಿಯು ನಿಗಾ ವಹಿಸಬೇಕು.
ಪ್ರಜಾಪ್ರಾತಿನಿದ್ಯ ಕಾಯ್ದೆ ಪ್ರಕಾರ ಸೆಕ್ಷನ್ 77 ಹಾಗೂ ಸೆಕ್ಷನ್ 10ಎ ಪ್ರಕಾರ ಅಭ್ಯರ್ಥಿಗೆ ನಿಗದಿಪಡಿಸಿದ 95 ಲಕ್ಷ ರೂ ಮೀರಿದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ. ಮಾದರಿ ನೀತಿ ಸಂಹಿತೆ ಕಂಡು ಬಂದಲ್ಲಿ ತಕ್ಷಣವೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಎಲ್ಲಾ ದಾಖಲೆಗಳನ್ನು ಹಾಗೂ ಸಾಕ್ಷಗಳನ್ನು ಸರಿಯಾಗಿ ದಾಖಲಿಸಬೇಕು.
ಖರ್ಚು ವೆಚ್ಚಗಳ ಬಗ್ಗೆ ದೂರುಗಳು ಬಂದಾಗ ವೆಚ್ಚ ವಿಕ್ಷಕ ತಂಡವು ತಕ್ಷಣವೇ ಕ್ರಮ ಕೈಗೊಳ್ಳತಕ್ಕದ್ದು. ಚುನಾವಣಾ ಅಭ್ಯರ್ಥಿಯ ಖರ್ಚು ವೆಚ್ಚಗಳನ್ನು ಮೂರು ಹಂತಗಳಲ್ಲಿ ಪರಿಶೀಲಿಸತಕ್ಕದ್ದು ಎಂದು ಚುನಾವಣಾ ವೆಚ್ಚ ವೀಕ್ಷಕರು ಎಲ್ಲಾ ಅಧಿಕಾರಿಗಳಿಗೆ ತಿಳಿಸಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹಿರಾತುಗಳ ಖರ್ಚುವೆಚ್ಚಗಳನ್ನು ಎಮ್‍ಸಿಎಮ್‍ಸಿ ತಂಡವು ಪ್ರತಿದಿನ ವೆಚ್ಚ ನಿಗಾ ನೋಡಲ್ ಅಧಿಕಾರಿಗಳಿಗೆ ವರದಿ ಒಪ್ಪಿಸಬೇಕು ಎಂದು ಸೂಚಿಸಲಾಗಿದೆ.

ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ಹಾಗೂ ಬ್ಯಾಂಕ್‍ಗಳ ಪ್ರತಿನಿತ್ಯ ಹಣದ ವ್ಯವಹಾರಗಳ ಮೇಲೆ ನಿಗಾ ವಹಿಸಲಾಗುತ್ತಿದೆ. 10 ಲಕ್ಷ ಮೇಲ್ಪಟ್ಟ ವ್ಯವಹಾರಗಳನ್ನು ಆದಾಯ ತೆರಿಗೆ ಇಲಾಖೆ ನಿಗಾ ವಹಿಸುತ್ತಿದೆ. ಚುನಾವಣಾ ಅವಧಿಯಲ್ಲಿ ಎಲ್ಲ ಬ್ಯಾಂಕಗಳ ಮೂಲಕ ನಡೆಯಬಹುದಾದ ಅನುಮಾನ್ಸಾಪದ ವ್ಯವಹಾರಗಳು, ಹಣ ಪಡೆಯುವವರ ಹಾಗೂ ಠೇವಣಿ ಇಡುವವರ ಬಗ್ಗೆ ಬ್ಯಾಂಕುಗಳು ಪ್ರತಿ ನಿತ್ಯ ಮಾಹಿತಿ ಒದಗಿಸುತ್ತಿವೆ. ಒಂದು ಲಕ್ಷ ಮೇಲ್ಪಟ್ಟ ಖಾತೆ ವ್ಯವಹಾರಗಳ ಮೇಲೂ ಸಹ ಕಣ್ಣು ಇಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚುನಾವಣಾ ತರಬೇತಿಗೆ ಚಕ್ಕರ್, ಅನುಚಿತ ವರ್ತನೆಗೆ ಶಿಕ್ಷಕ ಅಮಾನತು
ಇತ್ತ, ದಾವಣಗೆರೆಯಲ್ಲಿ ಚುನಾವಣಾ ಮತಗಟ್ಟೆ ಮಟ್ಟದ ಅಧಿಕಾರಿ, ಸಿಬ್ಬಂದಿಗೆ ಏಪ್ರಿಲ್ 8 ರಂದು ಚನ್ನಗಿರಿಯಲ್ಲಿ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಆದರೆ, ಬೆಳಗ್ಗೆ ಕಾರ್ಯಗಾರಕ್ಕೆ ಹಾಜರಾಗಿ ಮಧ್ಯಾಹ್ನ ತರಬೇತಿಗೆ ಹಾಜರಾಗದೆ ಅನ್ಯ ಮಹಿಳಾ ಸಿಬ್ಬಂದಿಯೊಂದಿಗೆ ಇಕ್ಷರೊಬ್ಬರು ಹೊರ ಹೋಗಿದ್ದಾರೆ. ಇದನ್ನು ಪ್ರಶ್ನಿಸಿದ ತಹಶೀಲ್ದಾರ್ ಅವರೊಂದಿಗೆ ಅನುಚಿತ ವರ್ತನೆ ತೋರಿಸಿದ್ದಾರೆ. ಹೀಗಾಗಿ ಚನ್ನಗಿರಿ ಎಸ್.ಕೆ.ಎಂ.ಎಸ್ ಮಿಲ್ಲತ್ ಪ್ರೌಢಶಾಲೆ ಸಹ ಶಿಕ್ಷಕರಾದ ಸೈಯದ್ ಸುಲ್ತಾನ್ ಅಹಮದ್ ಇವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಆದೇಶಿಸಿದ್ದಾರೆ.












Click it and Unblock the Notifications