ರಾಮಮಂದಿರ ಉದ್ಘಾಟನೆ ಎಲೆಕ್ಷನ್ ಗಿಮಿಕ್: ಪುಲ್ವಾಮಾ ಸಾವಿನ ಬಗ್ಗೆ ಡಿ.ಸುಧಾಕರ್ ವಿವಾದಾತ್ಮಕ ಹೇಳಿಕೆ?: ಬಿಜೆಪಿ ಕಿಡಿ
ಬೆಂಗಳೂರು, ಡಿಸೆಂಬರ್ 31: ದಲಿತರನ್ನು ಚಪ್ಪಲಿಗಾಲಿನಲ್ಲಿ ಒದ್ದ ಕಾಂಗ್ರೆಸ್ ಸಚಿವರಾದ ಡಿ. ಸುಧಾಕರ್ ಅವರೇ, ಅಯೋಧ್ಯೆಯ ರಾಮ ಮಂದಿರ ವಿಕಸಿತ ಭಾರತದ ಅಭಿವೃದ್ಧಿ ಹಾಗೂ ಪರಂಪರೆಯ ಸಂಕೇತ. ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ ಕಾಂಗ್ರೆಸ್‌ಗೆ ಏಕೆ ರಾಮಮಂದಿರದ ಉಸಾಬರಿ ಎಂದು ಕರ್ನಾಟಕ ಬಿಜೆಪಿಯು ಖಾರವಾಗಿ ಪ್ರಶ್ನಿಸಿದೆ.
ಉತ್ತರ ಪ್ರದೇಶದ ಅಯೋಧ್ಯೆ ಶ್ರಿರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ಉದ್ಘಾಟಿಸಲಿರುವುದು, ರಾಮಮಂದಿರ ಕುರಿತು ಬಿಜೆಪಿ ನಾಯಕರು ಮಾತನಾಡುವುದು ಇಲ್ಲವೆ ಭಾರಿ ಚರ್ಚೆಯಾಗುತ್ತಿವೆ. ವಿಪಕ್ಷಗಳ ನಾಯಕರಿಗೆ ಮಂದಿರ ಲೋಕಾರ್ಪಣೆಗೆ ಆಹ್ವಾನಿಸಲಾಗಿದೆ. ಆದರೆ ಕಾಂಗ್ರೆಸ್ ಸೇರಿದಂತೆ ಕೆಲವು ವಿಪಕ್ಷ ನಾಯಕರು ಈ ವಿಚಾರವನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ವಿರೋಧಿಸುತ್ತಿದ್ದಾರೆ.

ಇದೀಗ ಕಾಂಗ್ರೆಸ್ ಸಚಿವ ಡಿ. ಸುಧಾಕರ್ ಅವರು ಸಹ ಶ್ರೀರಾಮಮಂದಿರದ ಕುರಿತು ಹಾಗೂ ಪುಲ್ವಾಮಾ ಯೋಧರ ಕುರಿತು ಮಾತನಾಡಿದ್ದಾರೆ. ಈ ಮೂಲಕ ಸಚಿವರು ದೇಶದ ಯೋಧರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಇದನ್ನು ಖಂಡಿಸಿ ಬಿಜೆಪಿ ಭಾನುವಾರ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
ಸಚಿವರನ್ನು ಕಾಂಗ್ರೆಸ್ ಛೂ ಬಿಟ್ಟಿದೆ: ಬಿಜೆಪಿ
ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ ಕಾಂಗ್ರೆಸ್‌ಗೆ ಈಗೇಕೆ ರಾಮಮಂದಿರದ ಉಸಾಬರಿ? ಈ ಅಯೋಧ್ಯೆಯ ರಾಮ ಮಂದಿರ ಕೋಟ್ಯಂತರ ಭಾರತೀಯರ ದಶಕಗಳ ಕನಸು. ಅದೀಗ ನನಸಾಗುತ್ತಿದೆ. ಅಖಂಡ ಹಿಂದೂಗಳನ್ನು ಕೆಣಕಲೆಂದೇ ಸಚಿವ ಡಿ. ಸುಧಾಕರ್ ಅಂತಹ ತಲೆ ಮಾಸಿದ ಸಚಿವರನ್ನು ಕಾಂಗ್ರೆಸ್ ಛೂ ಬಿಟ್ಟಿರುವುದಂತು ನೂರಕ್ಕೆ ನೂರು ಸತ್ಯ ಎಂದು ತಿಳಿಸಿದೆ.
ರಾಮಮಂದಿರ ಐಕ್ಯತೆಯ ಸಂಕೇತವಾದರೆ, ಕಾಂಗ್ರೆಸ್ ವಿಘಟನೆಯ ಸಂಕೇತ ಎಂಬುದು ಸುಧಾಕರ್ ಅವರ ಹೇಳಿಕೆಯಿಂದ ಸಾಬೀತಾಗುತ್ತಿದೆ ಎಂದು ಬಿಜೆಪಿ ಟಾಂಗ್ ನೀಡಿದೆ.

ಡಿ.ಸುಧಾಕರ್ ವಿವಾದಾತ್ಮಕ ಹೇಳಿಕೆ?
ಸದ್ಯ ರಾಮಮಂದಿರ ಉದ್ಘಾಟನೆ ಲೋಕಸಭಾ ಚುನಾವಣೆಯ ಗಿಮಿಕ್ ಎಂದು ಸಚಿವ ಡಿ. ಸುಧಾಕರ್ ಅವರು ಹೇಳಿದ್ದಾರೆ. ಈ ಹಿಂದಿನ ಬಾರಿ ಎಲ್ಲಿತ್ತು ರಾಮಮಂದಿರಾ? ಆಗ ಪುಲ್ವಾಮ ದಾಳಿ ತೋರಿಸಿದ್ದರು. ಅದ್ಯವಾವುದೋ ಸುಮ್ ಸುಮ್ಮನೇ ವಿಮಾನ ತೋರಿಸಿದ್ದರು. ಆಗಲೂ ಜನರು ಮರುಳರಾದರೂ. ಆಗ ದೇಶ ಕಾಪಾಡುವ ಜನರು ಪಾಪಾ ಎಷ್ಟು ಜನ ಯೋಧರ ಹತಾತ್ಮರಾದರೂ ಎಂದು ಅವರು ಹೇಳಿದ್ದಾರೆ.
ಹೀಗೆ ಹೇಳಿಕೆ ನೀಡುವ ಮೂಲಕ ಸಚಿವ ಸುಧಾಕರ್ ಜನರ ಕೆಂಗಣ್ಣಿಗೆ ಗುರಿಯಾದರಾ ಎಂಬ ಅನುಮಾನ ಕಾಡುತ್ತಿದೆ. ಏಕೆಂದರೆ ಯೋಧರ ಸಾವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗಿದೆ. ಎಷ್ಟು ಜನ ಯೋಧರು ಹುತಾತ್ಮರಾದರೂ ಎಂದು ಅವರು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇದೀಗ ಹೆಚ್ಚು ಚರ್ಚೆ ಆಗುತ್ತಿದ್ದು, ಈ ಬಗ್ಗೆ ಕರ್ನಾಟಕ ಬಿಜೆಪಿ ಸಚಿವರನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.












Click it and Unblock the Notifications