Cyclone Mocha: ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 14ರವರೆಗೂ ಭಾರಿ ಮಳೆ ಮುನ್ಸೂಚನೆ
ಬೆಂಗಳೂರು, ಮೇ, 07: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬಿಸಿಯ ನಡುವೆಯೇ ಮಳೆರಾಯನು ಕೂಡ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾರೆ. ಅದರಲ್ಲೂ ಇದೀಗ ಬಂಗಾಳಕೊಲ್ಲಿಯಲ್ಲಿ ಮೋಚಾ ಚಂಡಮಾರುತದ ಅಲೆ ಎದ್ದಿದ್ದು, ಪರಿಣಾಮ ರಾಜ್ಯದ ಹಲವೆಡೆ ಸೈಕ್ಲೋನ್ ಭೀತಿಯೂ ಕೂಡ ಕಾಡುತ್ತಿದೆ. ಅಲ್ಲದೆ ಮುಂದಿನ ಮೇ 14ರವರೆಗೂ ಭಾರಿ ಮಳೆ ಆಗುವ ಸಾಧ್ಯೆತೆಯಿದೆ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನೂ ನೀಡಿದೆ. ಹಾಗಾದರೆ ಯಾವ ಭಾಗಗಳಲ್ಲಿ ಹೆಚ್ಚಾಗಿ ಮಳೆಯಾಗಲಿಗೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಈಗಾಗಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಬೆಳಗ್ಗೆಯಿಂದಲೂ ರಾತ್ರಿವರೆಗೂ ಧಾರಕಾರವಾಗಿ ಮಳೆ ಸುರಿದಿದ್ದು, ನಗರದಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ ಇದೆ. ಆದ್ದರಿಂದ ಇಂದು ಮತ್ತೆ ಮಳೆರಾಯ ಅಬ್ಬರಿಸುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ. ಇನ್ನು ದಕ್ಷಿಣ ಒಳನಾಡು, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಮೇ 7ರಂದು ರಾಯಚೂರು ಜಿಲ್ಲೆ, ಕೊಡಗು ಹಾಗೂ ಹಾಸನದ ದಕ್ಷಿಣ ಭಾಗಗಳಲ್ಲಿ ಮಳೆರಾಯ ಅಬ್ಬರಿಸಲಿದ್ದಾನೆ.

ಮೇ 8ರಿಂದ 9ರವರೆಗೆ ಮಳೆ ಪಡೆಯುವ ಜಿಲ್ಲೆಗಳು
ಇನ್ನು ಮೇ 8 ಹಾಗೂ 9ರಂದು ಮಂಡ್ಯ, ದೊಡ್ಡಬಳ್ಳಾಪುರ, ಮೈಸೂರು, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಬಾಗಲಕೋಟೆ, ಹಾವೇರಿ, ಉಡುಪಿ, ಬೆಂಗಳೂರು ನಗರ, ಕಲಬುರಗಿ, ರಾಯಚೂರು, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ವಿಜಯನಗರ, ಬಳ್ಳಾರಿ, ಉತ್ತರ ಕನ್ನಡ, ರಾಯಚೂರು, ಚಿತ್ರದುರ್ಗ, ಕೊಪ್ಪಳ, ಗದಗ, ಚಿತ್ರದುರ್ಗ, ತುಮಕೂರು, ಕೋಲಾರದಲ್ಲಿ ಅತೀ ಹೆಚ್ಚು ಮಳೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೇ 10ರಿಂದ 13ರವರೆಗೆ ಮಳೆ ಪಡೆಯುವ ಜಿಲ್ಲೆಗಳು
ಮೇ 10ರಂದು ಬೆಣ್ಣೆನಗರಿ ದಾವಣಗೆರೆ, ಮಂಜಿನ ನಗರಿ ಕೊಡಗು ಜಿಲ್ಲೆಗಳಲ್ಲಿ ಮಾತ್ರ ಭಾರಿ ಮಳೆ ಆಗಲಿದ್ದು, ಮೇ 12, 13ರಂದು ಹಾಸನ, ಬಾಗಲಕೋಟೆ ದಕ್ಷಿಣ, ಮಂಡ್ಯ ದಕ್ಷಿಣ, ತುಮಕೂರು ದಕ್ಷಿಣ, ಮಂಡ್ಯ, ಚಾಮರಾಜನಗರದ ದಕ್ಷಿಣ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಕೊಡಗು, ಮೈಸೂರು ಪಶ್ಚಿಮ ಭಾಗ ಹಾಗೂ ಬೆಳಗಾವಿ ದಕ್ಷಿಣ, ಹಾವೇರಿಯಲ್ಲಿ ಮಳೆರಾಯ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೇ 14ರಂದು ಮಳೆ ಪಡೆಯುವ ಜಿಲ್ಲೆಗಳು
ಹಾಗೆಯೆ ಮೇ 14ರಂದು ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿಯ ದಕ್ಷಿಣ, ಕೊಡಗು, ಹಾವೇರಿ, ತುಮಕೂರು, ಚಿತ್ರದುರ್ಗ, ಮೈಸೂರು, ಮಂಡ್ಯ, ಹಾಸನ, ಸೇರಿದಂತೆ ಹಲವೆಡೆ ಧಾರಕಾರ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.












Click it and Unblock the Notifications