
Mandous Cyclone: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಡಿ.13 ರವರೆಗೆ ಮಳೆ
ಬೆಂಗಳೂರು ಡಿಸೆಂಬರ್ 9: ಮಾಂಡೌಸ್ ಚಂಡಮಾರುತದಿಂದಾಗಿ ಅಧಿಕ ಮಳೆಯಾಗುವ ಮುನ್ಸೂಚನೆ ಇದ್ದು ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಹಾಸನ, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಹಲವೆಡೆ ಡಿಸೆಂಬರ್ 13ರವರೆಗೆ ಹಳದಿ ಎಚ್ಚರಿಕೆ ನೀಡಲಾಗಿದೆ.
ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಮಾಂಡೌಸ್ ಚಂಡಮಾರುತದ ಪ್ರಭಾವದಿಂದಾಗಿ ಶುಕ್ರವಾರದಿಂದ (ಡಿಸೆಂಬರ್ 9) ಡಿಸೆಂಬರ್ 13 ರವರೆಗೆ ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಹೀಗಾಗಿ ಡಿಸೆಂಬರ್ 13 ರವರೆಗೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹಳದಿ ಎಚ್ಚರಿಕೆ (ಪ್ರತ್ಯೇಕವಾಗಿ ಭಾರೀ ಮಳೆ) ನೀಡಲಾಗಿದೆ.
ಮಾಂಡೌಸ್ ಚಂಡಮಾರುತ: ತಮಿಳುನಾಡು, ಆಂಧ್ರ, ಪುದುಚೇರಿಗೆ IMD ಮಳೆ, ಗಾಳಿ ಎಚ್ಚರಿಕೆ
ಜೊತೆಗೆ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಡಿಸೆಂಬರ್ 9 ರ ಮಧ್ಯರಾತ್ರಿ ಪುದುಚೇರಿ ಮತ್ತು ಶ್ರೀಹರಿಕೋಟಾ ನಡುವೆ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ ಎಂದು IMD ಗುರುವಾರ (ಡಿಸೆಂಬರ್ 8) ತಿಳಿಸಿದೆ. ವಾಯುವ್ಯ ದಿಕ್ಕಿನಲ್ಲಿ ಚಲಿಸಲಿರುವ ಮಾಂಡೌಸ್ ವೇಗವಾದ ಗಾಳಿಯೊಂದಿಗೆ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಡಿಸೆಂಬರ್ 9 ರ ಮಧ್ಯರಾತ್ರಿಯ ಸುಮಾರಿಗೆ ಗಂಟೆಗೆ 67-75 ಕಿಮೀ ವೇಗದಲ್ಲಿ ಗಾಳಿಯೊಂದಿಗೆ ಮಳೆ ಬೀಳಲಿದೆ. ಹೀಗಾಗಿ ಇಂದು ತಮಿಳುನಾಡಿನ ಮೂರು ಜಿಲ್ಲೆಗಳಾದ ಚೆಂಗಲ್‌ಪೆಟ್ಟು, ಕಾಂಚೀಪುರಂ ಮತ್ತು ವಿಲ್ಲುಪುರಂಗೆ ಹಾಗೂ ಪುದುಚೇರಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿರುವ ಕಾರಣ, ಎರಡೂ ರಾಜ್ಯಗಳಲ್ಲಿ ವಿಪತ್ತು ಸ್ಪಂದನಾ ತಂಡಗಳನ್ನು ನಿಯೋಜಿಸಲಾಗಿದೆ. ತಮಿಳುನಾಡಿನಲ್ಲಿ, ಆರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ಚೆನ್ನೈ, ಕಡಲೂರು, ನಾಗಪಟ್ಟಿಣಂ, ತಂಜಾವೂರು, ತಿರುವರೂರ್ ಮತ್ತು ಮೈಲಾಡುತುರೈಗೆ ನಿಯೋಜಿಸಲಾಗಿದೆ. ಇನ್ನೂ ಚೆನ್ನೈ, ಕಡಲೂರು, ನಾಗಪಟ್ಟಣ, ಎನ್ನೂರ್, ಕಟ್ಟುಪಲ್ಲಿ, ಟುಟಿಕೋರಿನ್, ಪುದುಚೇರಿ ಮತ್ತು ಕಾರೈಕ್ಕಲ್ ಒಂಬತ್ತು ಬಂದರುಗಳಿಗೆ ಚಂಡಮಾರುತದ ಎಚ್ಚರಿಕೆ ಸಂಕೇತ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಆಂಧ್ರಪ್ರದೇಶದಲ್ಲಿ ಮುಖ್ಯ ಕಾರ್ಯದರ್ಶಿ ಕೆ.ಎಸ್.ಜವಾಹರ ರೆಡ್ಡಿ ಮಾತನಾಡಿ, ದುರ್ಬಲ ಅಣೆಕಟ್ಟುಗಳು ಮತ್ತು ಜಲಾಶಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಇದಕ್ಕಾಗಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಇದುವರೆಗೆ 11 ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಮತ್ತು 10 ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದ್ದು, ಹೋದವರು ಕೂಡ ಕೂಡಲೇ ದಡಕ್ಕೆ ಮರಳುವಂತೆ ಸೂಚಿಸಲಾಗಿದೆ. ರೈತರು ಕೂಡ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.