
ಸಿದ್ದರಾಮಯ್ಯ ಮತ್ತು ಸುಳ್ಳು ಒಂದು ನಾಣ್ಯದ ಎರಡು ಮುಖಗಳು: ಸಿ.ಟಿ.ರವಿ
ಬೆಂಗಳೂರು,ಡಿಸೆಂಬರ್ 2: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಚುನಾವಣೆ ಗೆಲ್ಲಲಾಗದ ಅವರು ಈಗ ಇಡೀ ರಾಜ್ಯದಲ್ಲೇ ಒಂದು ಕ್ಷೇತ್ರಕ್ಕಾಗಿ ದುರ್ಬೀನು ಹಿಡಿದು ಹುಡುಕುವ ಸ್ಥಿತಿಗೆ ತಲುಪಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಈಗಾಗಲೇ ಸಿದ್ದರಾಮಯ್ಯನವರಿಗೆ ಮೂಗುದಾರ ಹಾಕಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದಾಗ ತುಳಿದ ಖರ್ಗೆಯವರೂ ಈಗ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯಗೆ ಕಾಲಿಟ್ಟಲ್ಲೆಲ್ಲಾ ಮುಳ್ಳೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಹಿಂದುತ್ವದ ವಿಚಾರದ ಬಗ್ಗೆ ಸದಾ ಭಯಪಡುವ ಸಿದ್ದರಾಮಯ್ಯನವರಿಗೆ ಈಗ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತಾ ಇದೆ ಎಂಬುದು ಗಮನಕ್ಕೆ ಬಂದಿದೆ. ಅತ್ತ ದರಿ, ಇತ್ತ ಪುಲಿ ಎಂದು ಇಬ್ಬರ ನಡುವೆ ಸಿಲುಕಿರುವ ಸಿದ್ದರಾಮಯ್ಯ ಈಗ ತಮ್ಮ ದಾರಿ ಸುಗಮ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ಈ ಮೊದಲೇ ಮತಾಂಧ ಟಿಪ್ಪು ಪ್ರೇಮಿಯಾದ ಸಿದ್ದರಾಮಯ್ಯ ಈಗ ಆರ್‌ಎಸ್‌ಎಸ್ಸನ್ನು ಬೈಯುವ ಮೂಲಕ ಹೈಕಮಾಂಡುಗಳಾದ ಅಮ್ಮ-ಮಗನ ಗಮನ ಸೆಳೆಯುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಏಕೆಂದರೆ ಸಿದ್ದರಾಮಯ್ಯನವರನ್ನು ಸೋಲಿಸಲು ಪ್ರಯತ್ನ ಪಡುವುದು ಆರ್‌ಎಸ್‌ಎಸ್ ಅಲ್ಲ, ಬದಲಾಗಿ ತಮ್ಮ ಪಕ್ಷದವರೇ ಎಂಬ ಸತ್ಯದ ಅರಿವು ಅವರಿಗಾಗಿದೆ.
ದೇಶ ಭಕ್ತರನ್ನು ಹುಟ್ಟುಹಾಕುತ್ತಿರುವ ಸಂಸ್ಥೆ ಆರ್‌ಎಸ್‌ಎಸ್ ಅಲ್ಲ ಎಂದು ಹೇಳುವ ಮೂಲಕ ಅವರು ತಮ್ಮ ಅಜ್ಞಾನವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದು ಮಾತ್ರ ಅಕ್ಷಮ್ಯ. ನಮ್ಮ ಸಾಂಸ್ಕೃತಿಕ ಹಿರಿಮೆ ಮತ್ತು ಭಾರತದ ಶ್ರೀಮಂತ ಪರಂಪರೆಯ ಬಗ್ಗೆ ಇವತ್ತು ದೇಶದ ಜನ ಅರಿತಿದ್ದಾರೆ ಎಂದರೆ ಅದಕ್ಕೆ ಆರ್‌ಎಸ್‌ಎಸ್ ಕಾರಣ. ಸಂಘ ಪರಿವಾರದವರು ಸದಾ ಸಮಾಜದ ಬಗ್ಗೆ ಚಿಂತಿಸುವವರೇ ವಿನಃ ತಾನೇ ಮುಂದಿನ ಮುಖ್ಯಮಂತ್ರಿ ಎಂದು ಕೇಕ್ ಮಾಡಿಸಿ ಬೆರಳು ಚೀಪುವವರಲ್ಲ. ಕಳೆದ ಬಾರಿ ಸಂಘ ಪರಿವಾರವರು ನಡೆಸುವ ಶಾಲೆಯ ಮಕ್ಕಳ ಅನ್ನ ಕಿತ್ತುಕೊಂಡ ಕಾರಣ ಅದರ ಫಲವನ್ನು ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಉಣ್ಣಬೇಕಾಯಿತು. ಈಗ ಒಂದು ಕಡೆ ಆರ್‌ಎಸ್‌ಎಸ್ ಬಗ್ಗೆ ಹೀಗಳೆಯುತ್ತಾ ಇನ್ನೊಂದು ಕಡೆ ಕತ್ತಿ ಹಿಡಿದು ದೌಲತ್ತು ಮೆರೆಯುತ್ತಿರುವ ಸಿದ್ದರಾಮಯ್ಯನವರ ಸಂಸ್ಕಾರ ಯಾವುದು ಎಂಬುದನ್ನು ಪ್ರಜ್ಞಾವಂತ ಜನತೆ ಸೂಕ್ಷ್ಮವಾಗಿ ಗಮನಿಸುತ್ತಾ ಇದ್ದಾರೆ.
ಭಾರತ ವಿಭಜನೆಯನ್ನು ಮಾಡುವಾಗ ಅದಕ್ಕೆ ಸಹಿ ಹಾಕಿದ್ದು ಅರ್ ಎಸ್ ಎಸ್ ಅಲ್ಲ ,ಕಾಂಗ್ರೆಸ್ ಮತ್ತು ಜಿನ್ನಾ ,ಇತಿಹಾಸ ಮರೆತುಬಿಟ್ಟಿರಾ ಸಿದ್ದರಾಮಯ್ಯನವರೇ ,ಆರ್ ಎಸ್ ಎಸ್ ಅನ್ನು ಬೆದುರುಗೊಂಬೆಯಾಗಿ ಮಾಡಿಕೊಂಡು ಮುಸಲ್ಮಾನರನ್ನು ಬೆದರಿಸಿ ಓಟು ಹಾಕಿಸಿಕೊಳ್ಳುತ್ತಿರುವುದು ನೀವೇ ತಾನೆ ? ದೇಶಭಕ್ತ ಮುಸಲ್ಮಾನರನ್ನ ಸದಾ ಕಾಲ ಗೌರವಿಸಿದೆ . ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ಯಾರ ? ದೇಶದ ಸಂಕಷ್ಟದ ಸಂದರ್ಭದಲ್ಲಿ ದೇಶಭಕ್ತಿಯನ್ನು ತೋರಿಸಿದ್ದು ಯಾರು ?ನಿಮ್ಮ ರೀತಿಯಲ್ಲಿ ವೋಟಿನ ಆಸೆಗೆ ಪಿ ಎಫ್ ಐ ಗುಂಡಾಗಳಿಗೆ ಬೆಂಬಲಿಸುವ ಕೆಲಸವನ್ನು ಯಾವತ್ತು ಮಾಡಿಲ್ಲ ಎಂದು ವಾಗ್ದಾಲಿ ನಡೆಸಿದರು.
ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಕುರ್ಚಿಗಾಗಿ ತಿಕ್ಕಾಟ ನಡೆಸುತ್ತಿರುವ ಪಕ್ಷದವರಿಗೆ ದೇಶ ಕಟ್ಟುವ ಇರಾದೆ ಬಿಡಿ, ದೇಶದ ಬಗ್ಗೆಯೇ ಸರಿಯಾದ ಜ್ಞಾನವಿಲ್ಲ. ಹಿಂದುಳಿದವರ ಹೆಸರು ಬಳಸಿ ಅಂದು ಕಾಂಗ್ರೆಸ್ ಪ್ರವೇಶಿಸಿದ್ದ ಸಿದ್ದರಾಮಯ್ಯ ನಂತರ ಅವರನ್ನು ತುಳಿದದ್ದೂ ಅಲ್ಲದೆ ಅವರು ಹಿಂದೂಗಳೇ ಅಲ್ಲ ಎಂದು ಭಾವಿಸಿರುವುದು ದುರಂತ. ಇಂಥ ಪರಿಸ್ಥಿತಿಯಲ್ಲಿ ತಮ್ಮ ಮತ್ತು ಡಿಕೆ ಶಿವಕುಮಾರ್ ನಡುವಿನ ಹಗ್ಗ ಜಗ್ಗಾಟದಲ್ಲಿ ಹೈಕಮಾಂಡ್ ಎದುರು ಬಲ ಪ್ರದರ್ಶನದ ಉತ್ಸಾದಲ್ಲಿರುವ ಸಿದ್ದರಾಮಯ್ಯ ಅದಕ್ಕಾಗಿ ಆರ್‌ಎಸ್‌ಎಸ್ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖೇದಕರ. ಅವರ ಮೂಲೋದ್ದೇಶದ ಅರಿವಿರದ ಕಾರಣ ಅಲ್ಲಿದ್ದ ಮಠಾಧಿಪತಿಗಳೂ ಈ ಬಗ್ಗೆ ತಕರಾರು ಎತ್ತದೆ ಬಿಟ್ಟಿದ್ದಾರೆ.
ಸಿದ್ದರಾಮಯ್ಯನವರು ಮತ್ತು ಸುಳ್ಳು ಒಂದು ನಾಣ್ಯದ ಎರಡು ಮುಖಗಳು ಎಂಬುದು ದೇಶಕ್ಕೆಲ್ಲ ಗೊತ್ತಿದೆ ಸುಳ್ಳು ನಮ್ಮಲ್ಲಿಲ್ಲವಯ್ಯ ಎಂದು ಹೇಳುತ್ತಲೇ ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿಕೊಂಡಿರುವವರು ನೀವೇ ಅಲ್ಲವೇ ಎಂದು ಪ್ರಶ್ನಿಸಿದರು.

ಸಂಘ ಜಾತಿ ಭೇದವನ್ನು ತೊಡೆದುಹಾಕಿ ರಾಷ್ಟ್ರಭಾವವನ್ನು ಬೆಳೆಸುವ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿದೆ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಲು ನೆರವಾಗಿದೆ .
ಅಲ್ಲಿರುವ ಯಾರು ಚುನಾವಣೆಗೆ ನಿಲ್ಲಬೇಕೆಂದು ಹಪಹಪಿಸುವವರಲ್ಲ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂದು ಅರ್ಪಿಸಿಕೊಂಡು ಕೆಲಸ ಮಾಡುತ್ತಿರುವವರು .
ಸಮಾಜವಾದದ ಹೆಸರಳಿಕೊಂಡು ಮಜಾವಾದಿಯಾಗಿ ಅಧಿಕಾರಕ್ಕಾಗಿ ಗಾಳಿ ಬಂದ ಕಡೆಗೆ ಛತ್ರಿ ಹಿಡಿಯುವ ನಿಮ್ಮಂತ ಜನರಿಗೆ ಆರ್ ಎಸ್ ಎಸ್ ಅರ್ಥವಾಗುವುದಾದರೂ ಹೇಗೆ ?
ಡ್ಯಾಶ್ ಡ್ಯಾಶ್ ದಾಸರಾಗಿರುವ ಸಕಲಕಲಾವಲ್ಲಬರಿಗೆ ಸಂಘದ ಧ್ಯೇಯನಿಷ್ಠೆ ದೇಶ ನಿಷ್ಠೆ ಈ ಜನ್ಮದಲ್ಲಿ ಅರ್ಥವಾಗುವುದಿಲ್ಲ ಎಂದು ಕಿಡಿಕಾರಿದರು.