ಕೈದಿಗಳಿಗೆ ರಾಜಾತಿಥ್ಯ; ಪೊಲೀಸ್ ಇಲಾಖೆ ಹಲ್ಲು ಕಿತ್ತ ಹಾವಿನಂತಾಗಿದೆ: ಸಿ.ಟಿ.ರವಿ
ಜೈಲಿನಲ್ಲಿರುವ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದ ಜೈಲಿನಲ್ಲಿ ಬಂಧಿತನಾಗಿರುವ ಐಸಿಸ್ ಉಗ್ರನ ಬಳಿ ಸ್ಮಾರ್ಟ್ ಫೋನ್ ಇರುವುದು ಪತ್ತೆಯಾಗಿದೆ. ಇದು ಕೇವಲ ಜೈಲಿನ ನಿಯಮದ ಉಲ್ಲಂಘನೆ ಮಾತ್ರವಲ್ಲ, ಬದಲಿಗೆ ರಾಷ್ಟ್ರೀಯ ಭದ್ರತೆಗೂ ಭಾರಿ ಧಕ್ಕೆಯಾಗಿದೆ. ಈಗಾಗಲೇ ವಿಧ್ವಂಸಕ ಕೃತ್ಯ ನಡೆಸಿ, ಜೈಲು ಪಾಲಾಗಿರುವ ಉಗ್ರರ ಕೈಗೆ ಫೋನ್ ಲಭಿಸಿದರೆ ಮುಂದಾಗುವ ಅನಾಹುತ ಎಂತದ್ದು? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಏನು ಕೇಳಿದರೂ ನನಗೆ ಈ ಕುರಿತು ಮಾಹಿತಿ ಇಲ್ಲ ಎನ್ನುವ ಗೃಹ ಸಚಿವರಾದ ಜಿ.ಪರಮೇಶ್ವರ್ ಅವರಿಗೆ ಈ ಗಂಭೀರ ಲೋಪದ ಕುರಿತಾದರೂ ಮಾಹಿತಿ ಇದೆಯೇ? ಜೈಲು ಇರುವುದು ಅಪರಾಧಿಗಳಿಗೆ ಶಿಕ್ಷೆ ನೀಡಲು, ಅವರಲ್ಲಿ ಪರಿವರ್ತನೆ ತರಲೇ ಹೊರತು ರೆಸಾರ್ಟ್ ಮಾದರಿಯ ವಾಸ್ತವ್ಯ ನೀಡಲಲ್ಲ. ಪರಮೇಶ್ವರ್ ಅವರು ಈಗಾಗಲೇ ತಾನು ರಾಜ್ಯ ಕಂಡ ಅತ್ಯಂತ ದುರ್ಬಲ ಗೃಹ ಸಚಿವ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸ್ ಇಲಾಖೆ ಹಲ್ಲು ಕಿತ್ತ ಹಾವಿನಂತಾಗಿದೆ. ಗಲಭೆಕೋರರಿಗೆ, ದುಷ್ಕರ್ಮಿಗಳಿಗೆ, ಉಗ್ರಗಾಮಿಗಳಿಗೆ ರಕ್ಷಣೆ, ನೆರವು ನೀಡುವ ಇಂತಹ ಭ್ರಷ್ಟ ಸರ್ಕಾರದ ಅವಧಿಯಲ್ಲಿ ರಾಜ್ಯ ಸುರಕ್ಷಿತವಾಗಿರಲು ಸಾಧ್ಯವೇ? ಜೈಲಿನಲ್ಲಿರುವ ಅಪರಾಧಿಗಳು ಮತ್ತು ಭಯೋತ್ಪಾದಕರಿಗೆ ಇಲಾಖೆಯ ಒಳಗಿನವರ ಕೃಪಾಕಟಾಕ್ಷವಿಲ್ಲದೆ ಇಂತಹ ಸವಲತ್ತುಗಳು ಲಭಿಸಲು ಸಾಧ್ಯವೇ ಇಲ್ಲ. ಗೃಹ ಸಚಿವರು ರಾಜ್ಯದ ಸುರಕ್ಷತೆ ತನ್ನ ಜವಾಬ್ದಾರಿ ಎಂದು ಅರಿತುಕೊಳ್ಳದಿದ್ದರೆ ರಾಜ್ಯವನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ. ಕರ್ನಾಟಕದ ಜನತೆಗೆ ಉತ್ತಮ ಆಡಳಿತ ಬೇಕೇ ಹೊರತು ಇಂತಹ ಅಸಮರ್ಥ, ದುರ್ಬಲ ಸರ್ಕಾರ ಖಂಡಿತ ಅಲ್ಲ ಎಂದಿದ್ದಾರೆ.
ಇದೇ ಕಾರಣಕ್ಕೆ ಇವಿಎಂಗೆ ವಿರೋಧ
ಬಿಹಾರ ಚುನಾವಣೆಯಲ್ಲಿ ತಾನು ಸೋಲುವುದು ಕಾಂಗ್ರೆಸ್ ಪಕ್ಷಕ್ಕೆ ಖಾತ್ರಿಯಾಗಿದೆ. ದೇಶದ ಎಲ್ಲೆಲ್ಲೂ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭಯದಿಂದ ನರಳುತ್ತಿರುವ ಕಾಂಗ್ರೆಸ್‌ಗೆ ಈಗ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವೃಥಾ ಆರೋಪ ಹೊರಿಸುವುದು ಮಾತ್ರವೇ ಉಳಿದ ಏಕೈಕ ಮಾರ್ಗ. ನರೇಂದ್ರ ಮೋದಿಯವರ ಜನಪ್ರಿಯತೆ, ಅಭಿವೃದ್ಧಿ ಗಮನಿಸಿದ ಜನರು ಪ್ರೀತಿಯಿಂದ ಆಶೀರ್ವದಿಸುತ್ತಿದ್ದಾರೆ. ಮತಗಳ್ಳತನ ನಡೆಸುವ ಅನಿವಾರ್ಯತೆ ಏನಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಅದನ್ನು ಕಾಂಗ್ರೆಸ್ ಮತಪತ್ರಗಳಿದ್ದ ಕಾಲದಲ್ಲಿ ನಡೆಸಿದ್ದು, ಅದಕ್ಕಾಗಿಯೇ ಇವಿಎಂ ಹಿಂಪಡೆಯಲು ಆಗ್ರಹಿಸುತ್ತಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಜನರ ವಿಶ್ವಾಸವನ್ನು ಕಳೆದುಕೊಂಡು, ಈಗ ಜನಮತ ಗೆಲ್ಲುವ ನಂಬಿಕೆಯನ್ನೂ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷ ಈಗ "ಮತಗಳ್ಳತನ" ಎಂಬ ಸುಳ್ಳಿನ ಆಧಾರದ ಮೇಲೆ ತನ್ನ ಭವಿಷ್ಯ ಹುಡುಕುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಮತ್ತು ಅವರ ಬೆನ್ನಿಗಿರುವ ಜನಮತವನ್ನು ಎದುರಿಸಲು ಸಾಧ್ಯವಾಗದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಈಗ ಕಣ್ಣಾಮುಚ್ಚಾಲೆ ರಾಜಕಾರಣಕ್ಕೆ ಇಳಿದಿವೆ ಎಂದು ಆರೋಪಿಸಿದ್ದಾರೆ.












Click it and Unblock the Notifications