Cauvery water: ಕರ್ನಾಟಕ ರೈತರಿಗೆ ಚಿಪ್ಪು, ತಮಿಳುನಾಡಿಗೆ ಅಮೃತ : ಸಿ.ಟಿ ರವಿ ಹೇಳಿದ್ದೇನು?
ಬೆಂಗಳೂರು,ಸೆಪ್ಟೆಂಬರ್ 14: ನಮ್ಮ ನೀರನ್ನ ತಮಿಳುನಾಡಿಗೆ ಬಿಟ್ಟು ನಮ್ಮ ರೈತರಿಗೆ ಚಿಪ್ಪು ಕೊಟ್ಟು ತಮಿಳುನಾಡಿಗೆ ಅಮೃತ ಉಣಿಸುತ್ತಿದ್ದಿರಾ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಾರ್ಟಿ 'ನಮ್ಮ ನೀರು ನಮ್ಮ ಹಕ್ಕು' ಎಂದು ಹೇಳಿ ಕಾವೇರಿ ಕಣಿವೆ ಉದ್ದಕ್ಕೂ ಜನರ ಕಿವಿಗೆ ಚೆಂಡುಹೂ ಮುಡಿಸಿದೆ. ಇದೀಗ ಸಂಕಷ್ಟ ಕಾಲದಲ್ಲಿ ಕಾವೇರಿ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ ಎಂದು ಹೇಳಿದರು.

ಕಾವೇರಿ ಕಣಿವೆಯ ರೈತರ ಗೋಳನ್ನು ಕೇಳುವವರೇ ಇಲ್ಲವಾಗಿದೆ. ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್ ಅವರು ಕಾವೇರಿ ಕಣಿವೆ ಭಾಗದಲ್ಲಿ ಜನರ ಬಳಿ ಭಾವನಾತ್ಮಕ ಕಾರ್ಡ್ ಬಳಸಿದ್ದರು. ಅಧಿಕಾರ ನನಗೆ ಕೊಡಿ. ನಾನೂ ಒಕ್ಕಲಿಗನಲ್ಲವೇ? ಕುಮಾರಸ್ವಾಮಿ, ದೇವೇಗೌಡರಿಗೆ ಅಧಿಕಾರ ಕೊಟ್ಟಂತೆ ಅಧಿಕಾರ ನೀಡಿದರೆ ನಾನು ನಿಮ್ಮ ಹಿತರಕ್ಷಣೆ ಮಾಡುವುದಾಗಿ ಹೇಳಿದ್ದರು. ನೀವು ಎಲ್ಲಿ, ಯಾರ ಹಿತರಕ್ಷಣೆ ಮಾಡುತ್ತಿದ್ದೀರಿ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಕಾವೇರಿ ಕಣಿವೆ ರೈತರ ಬಗ್ಗೆ ಕನಿಷ್ಠ ಕಾಳಜಿಯೂ ನೀವು ತೋರುತ್ತಿಲ್ಲ. ನಿಮ್ಮ ಸರಕಾರವು ನ್ಯಾಯಾಧಿಕರಣ ಮತ್ತು ನ್ಯಾಯಾಲಯದ ಮುಂದೆ ವಾಸ್ತವಿಕ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ. ಸಂಕಷ್ಟದ ವಿವರ ನೀಡಲು ವಿಫಲವಾದ ಕಾರಣ ಕಾವೇರಿ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ನಮ್ಮ ರೈತರಿಗೆ ಚಿಪ್ಪು ಕೊಟ್ಟು ತಮಿಳುನಾಡಿಗೆ ಅಮೃತ ಉಣಿಸುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.
ಇದೇ ಪರಿಸ್ಥಿತಿ ಆದರೆ ಬೆಂಗಳೂರು ನಗರಕ್ಕೆ ನೀರಿಲ್ಲದ ದುಸ್ಥಿತಿ ಬರಲಿದೆ. ನಿಮಗೆ ಬೆಂಗಳೂರಿನ ಆದಾಯದ ಬಗ್ಗೆ ಎಷ್ಟು ಆಸಕ್ತಿ ಇದೆಯೋ ಅಷ್ಟೇ ಆಸಕ್ತಿಯನ್ನು ಕಾವೇರಿ ಕಣಿವೆ ರೈತರ ಬಗ್ಗೆ ತೋರಿಸಿದ್ದರೆ ಈ ಸಂಕಷ್ಟ ಕಾಲದಲ್ಲಿ ನ್ಯಾಯಾಧಿಕರಣದ ಮುಂದೆ ವಿಫಲವಾಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳೇ ಇದರ ನೈತಿಕ ಹೊಣೆಯನ್ನು ಹೊರಬೇಕು ಎಂದು ಅವರು ತಿಳಿಸಿದ್ದಾರೆ.
ಕಾವೇರಿ ಕಣಿವೆಯ ರೈತರಿಗೆ ನ್ಯಾಯ ಕೊಡದೆ ಇರುವ, ಅವರ ಹಕ್ಕನ್ನು ರಕ್ಷಿಸದೆ ಇರುವ, ನಮ್ಮ ನೀರನ್ನು ನಮಗೆ ಉಣಿಸಲಾಗದ ದುಸ್ಥಿತಿಗೆ ನೈತಿಕ ಹೊಣೆಯನ್ನು ಸರಕಾರ ಹೊರಬೇಕು. ಆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ನೀವು ಚುನಾವಣೆಗೆ ಮುಂಚೆ 'ನಮ್ಮ ನೀರು ನಮ್ಮ ಹಕ್ಕು' ಎಂದಿದ್ದೀರಿ. ಇವತ್ತು ನಮ್ಮ ಹಕ್ಕೆಲ್ಲಿ ಉಳಿದಿದೆ? ನೀರು ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು. ಹಕ್ಕೂ ಇಲ್ಲ, ನೀರೂ ಇಲ್ಲ. ಐಎನ್‍ಡಿಐಎ ಒಕ್ಕೂಟವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ತಮಿಳುನಾಡಿಗೆ ನೀರು ಬಿಡುತ್ತಿದ್ದೀರಿ. ನಿಮಗೆ ಡಿಎಂಕೆ ಜೊತೆ ಸಖ್ಯವೇ ಮುಖ್ಯ. ಕರ್ನಾಟಕದ ರೈತರು ಸಂಕಷ್ಟಕ್ಕೆ ಒಳಗಾದರೂ ಪರವಾಗಿಲ್ಲ. ನಮ್ಮ ನೀರು ಹೋದರೂ ಪರವಾಗಿಲ್ಲ. ನಿಮಗೆ ಡಿಎಂಕೆ ಜೊತೆ ಸಂಬಂಧ ಗಟ್ಟಿಯಾಗಬೇಕು. ಅದಕ್ಕಾಗಿ ನೀರು ಕೊಡುವ ಕೆಲಸ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.
ಇವತ್ತು ನೀವು ಜನರ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದ್ದೀರಿ. ಜನರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದೀರಿ. ನಿಮಗೆ ಅಧಿಕಾರ ಇದ್ದರೂ ರಾಜ್ಯದ ಹಕ್ಕನ್ನು ಉಳಿಸುವಲ್ಲಿ ನೀವು ವಿಫಲವಾಗಿದ್ದೀರಲ್ಲವೇ ಎಂದು ಟೀಕಿಸಿದ್ದಾರೆ.












Click it and Unblock the Notifications