ಆ ಭಯ ಇಡೀ ಕ್ಯಾಬಿನೆಟ್ ಅನ್ನು ಕಾಡುತ್ತಿದೆಯೇ? : ಸಿ ಟಿ ರವಿ ಹೇಳಿದ್ದೇನು?

ಬೆಂಗಳೂರು, ನವೆಂಬರ್‌ 25: ಸಿಬಿಐ ತನಿಖೆ ವಿಚಾರದಲ್ಲಿ ಡಿ ಕೆ ಶಿವಕುಮಾರ್‌ ಗೆ ಭಯ ಯಾಕೆ? ಸಿಬಿಐ ಸಾಕ್ಷ್ಯಾಧಾರ ಇಲ್ಲದ ವರದಿ ಕೊಟ್ಟರೆ ಅದು ನ್ಯಾಯಾಲಯದ ಎದುರು ಸಾಬೀತಾಗುತ್ತದೆಯೇ? ಆ ಭಯ ಇಡೀ ಕ್ಯಾಬಿನೆಟ್ ಅನ್ನು ಕಾಡುತ್ತಿದೆಯೇ? ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಬಡವರಿಗೊಂದು ನ್ಯಾಯ, ಬಲಾಢ್ಯರಿಗೊಂದು ನ್ಯಾಯವೇ? ಎಂದು ಪ್ರಶ್ನಿಸಿದರು. ಕಾಯಲು ನಿಮಗೇನು ಸಮಸ್ಯೆ ಎಂದರು. ಆ ಭಯ ಇಡೀ ಕ್ಯಾಬಿನೆಟ್ ಅನ್ನು ಕಾಡುತ್ತಿದೆಯೇ? ಎಂದರು.

CT Ravi Lashed Out At DK Shivakumar Regarding The CBI Case

ಡಿ.ಕೆ.ಶಿವಕುಮಾರ್ ಅವರ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸಚಿವಸಂಪುಟ ಹಿಂದಕ್ಕೆ ಪಡೆದಿದೆ. ಇದು ಸಂವಿಧಾನ ವಿರೋಧಿ ಕ್ರಮ. ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಇಲ್ಲಿ ಬ್ಲ್ಯಾಕ್‍ಮೇಲ್ ಪಾಲಿಟಿಕ್ಸ್ ನಡೆದಿದೆ. ಅದರ ಅಂಗವಾಗಿ ಇಡೀ ಸಂಪುಟ, ಜನ ಏನೆಂದುಕೊಳ್ಳುವರೋ ಎಂಬುದನ್ನು ಯೋಚಿಸದೆ ಕೆಟ್ಟ ಪರಂಪರೆಗೆ ನಾಂದಿ ಹಾಡಿದೆ ಎಂದು ಆರೋಪಿಸಿದರು.

ಇಲ್ಲಿ ಬಿಜೆಪಿ, ಕಾಂಗ್ರೆಸ್ ಪ್ರಶ್ನೆ ಬರುವುದಿಲ್ಲ. ತನಿಖೆ ರದ್ದು ಎಂದರೆ ನ್ಯಾಯಾಂಗ ವ್ಯವಸ್ಥೆ ತಿರಸ್ಕರಿಸಿದಂತೆ ಎಂದ ಅವರು, ಇದು ಆಲಿಬಾಬಾ ಔರ್ ಚಾಲೀಸ್ ಚೋರ್ ಎಂಬಂತಿದೆ. ಒಬ್ಬ ಭ್ರಷ್ಟ ಆರೋಪಿಯ ಸಮರ್ಥನೆಗೆ ಇಡೀ ಕ್ಯಾಬಿನೆಟ್ ನಿಂತದ್ದು ಕರ್ನಾಟಕದ ಘನತೆಗೆ ಕಪ್ಪು ಚುಕ್ಕಿ ಇಟ್ಟಂತೆ. ಇದು ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇಟ್ಟ ಜನರು ಮಾಡುವ ಕೆಲಸ ಅಲ್ಲ ಎಂದರು.

CT Ravi Lashed Out At DK Shivakumar Regarding The CBI Case

ಮುಖ್ಯಮಂತ್ರಿ, ಚೀಫ್ ಸೆಕ್ರೆಟರಿ ಯಾರ ಮನವಿ ಮೇರೆಗೆ ಈ ವಿಷಯ ಕೈಗೆತ್ತಿಕೊಂಡಿದ್ದಾರೆ? ಇಲ್ಲಿ ಸಂವಿಧಾನ ಇದೆ. ರಾಕ್ಷಸ ನ್ಯಾಯ ಇಲ್ಲ ಎಂದು ಮನವರಿಕೆ ಮಾಡಿಕೊಳ್ಳಬೇಕಿತ್ತು. ನಮ್ಮ ಮುಖಂಡರ ಮೇಲೆ ಆರೋಪ ಬಂದಾಗ ಅವರು ನ್ಯಾಯಾಲಯದ ಮೂಲಕ ನ್ಯಾಯ ಪಡೆದರು. ಕೇಸು ಹಿಂಪಡೆಯುವ ಭಂಡತನ ಮಾಡಿಲ್ಲ. ಇದು ಆರೋಪಗಳನ್ನು ಸಾಕ್ಷೀಕರಿಸಿದಂತೆ. ನ್ಯಾಯಾಲಯದ ಮೇಲೆ ವಿಶ್ವಾಸ ಇಲ್ಲ ಎಂದು ದೃಢಪಡಿಸಿದ್ದೀರಿ. ಸರಕಾರವು ಸಂಪುಟವನ್ನು ದುರುಪಯೋಗಪಡಿಸಿದೆ ಎಂದು ಟೀಕಿಸಿದರು.

ಇವತ್ತಿನ ಡಿಸಿಎಂ 2017ರಲ್ಲಿ ರಾಜ್ಯದಲ್ಲಿ ಸಚಿವರಾಗಿದ್ದರು. ಪ್ರಾಮಾಣಿಕರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಗುತ್ತದೆಯೇ? ಆದರೆ, ಅಕ್ರಮ ಸಂಪತ್ತು ಪತ್ತೆಯಾಯಿತು. 2019ರಲ್ಲಿ ಯಡಿಯೂರಪ್ಪ ಅವರು ಇದನ್ನು ಸಿಬಿಐ ತನಿಖೆಗೆ ವಹಿಸಿದ್ದರು. ಆದಾಯದ ಮೂಲ ಇಲ್ಲದೇ 200 ಕೋಟಿಗೂ ಹೆಚ್ಚು ಸಂಪತ್ತು ಪತ್ತೆಯಾಗಿದೆ ಎಂದು ಇಡಿ ತಿಳಿಸಿತ್ತು.

'ಆಲೂ ಡಾಲ್‍ನ, ದೂಸ್ರೆ ತರಫ್‍ಸೆ ಸೋನಾ..' ಎಂದು ರಾಹುಲ್ ಗಾಂಧಿ ಹೇಳಿದ್ದರು. ಆ ಮಾಹಿತಿಯನ್ನು ಸಿಬಿಐ ಕೇಳಿದರೆ ಹೇಳಬಹುದೆಂದು ಯೋಚಿಸಿ ಅದನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ಪ್ರಾಥಮಿಕ ವರದಿಯನ್ನೂ ಕೊಟ್ಟಿದೆ. ಪ್ರಕರಣ ರದ್ದು ಮಾಡುವ ಅವರ ಕೇಳಿಕೆಯನ್ನು ಹೈಕೋರ್ಟ್ ತಿರಸ್ಕರಿಸಿದೆ. 3 ತಿಂಗಳಲ್ಲಿ ಸಿಬಿಐ ಅಂತಿಮ ವರದಿ ಕೊಡಬೇಕಿತ್ತು. ಜನವರಿಯಲ್ಲಿ ಅಂತಿಮ ವರದಿ ನಿರೀಕ್ಷೆ ಇರುವಾಗ ಈ ಸಂವಿಧಾನ ವಿರೋಧಿ ನಿರ್ಧಾರ ಮಾಡಿರುವುದಾಗಿ ಆಕ್ಷೇಪಿಸಿದರು.

ಹಿಂದಿನ ಕಾಂಗ್ರೆಸ್ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಚುನಾವಣೆ ಅಕ್ರಮ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದಾಗ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಅಂಥ ಕೆಟ್ಟ ಪರಂಪರೆಗೆ ರಾಜ್ಯದ ಸಚಿವಸಂಪುಟ ಮುಂದಾಗಿದೆ. ಎಲ್ಲ ಭ್ರಷ್ಟರಿಗೂ ಮಾದರಿ ಆಗುವಂಥ ನಿರ್ಧಾರ ಇದು. ಲಲ್ಲೂ ಪ್ರಸಾದ್ ಮೀರಿಸಿದ ಕೆಲಸ ಇದೆಂದು ಟೀಕಿಸಿದರು.

ಇದು ತಪ್ಪು ನಿರ್ಧಾರ. ತಲೆತಗ್ಗಿಸುವ ನಿರ್ಣಯ. ಕಾನೂನು ಪದವೀಧರನಲ್ಲದ ನಾನು ಕೂಡ ಈ ಶಿಫಾರಸನ್ನು ಸಂಪುಟದಲ್ಲಿಡುತ್ತಿರಲಿಲ್ಲ. ನಿಮಗೆ ನಾಚಿಕೆ ಆಗುವುದಿಲ್ಲವೇ? ಇದು ಭಂಡತನದ ಪರಮಾವಧಿ. ಸಂವಿಧಾನಬಾಹಿರವಾಗಿ ನಡೆದಾಗ ರಾಜ್ಯಪಾಲರು ಮೂಕಪ್ರೇಕ್ಷಕರಾಗಿ ಕುಳಿತಿರಬಾರದು. ನಾವು ಯಾವ ಪದ್ಧತಿಯನ್ನು ರಾಜ್ಯದಲ್ಲಿ ಹುಟ್ಟು ಹಾಕುತ್ತಿದ್ದೇವೆ? ಸಮರ್ಥಿಸಲಾಗದ, ಉತ್ತರಿಸಲಾಗದ ಕ್ರಮ ಇದು ಎಂದು ತಿಳಿಸಿದರು. ಸಿಎಂ ವ್ಯಕ್ತಿತ್ವಕ್ಕೆ ಅಪಚಾರ ಮಾಡುವ ಕ್ರಮ ಇದು ಎಂದು ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+