ಮತ್ತೆ ಕೊರೊನಾ, ಡೆಲ್ಟಾ, ಲಾಕ್ಡೌನ್ ಗುಮ್ಮ: ಡಾ.ಸುಧಾಕರ್ ಮಹತ್ವದ ಹೇಳಿಕೆ
ಎರಡು ಅಸೆಂಬ್ಲಿ ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರ ಮುಗಿದ ನಂತರ ಕೊರೊನಾ ಮೂರನೇ ಅಲೆಯ ವಿಚಾರ ಮತ್ತೆ ಮುನ್ನಲೆಗೆ ಬರಬಹುದು ಎನ್ನುವ ಸಾರ್ವಜನಿಕರ ವಲಯದಲ್ಲಿ ಇದ್ದಂತಹ ಅನುಮಾನ ನಿಜವಾಗುತ್ತಾ ಸಾಗುತ್ತಿದೆಯೇ?
ಡೆಲ್ಟಾ ಪ್ರಬೇಧದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವಂತಹ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಸಾರ್ವಜನಿಕರು ಸರಕಾರದ ಜೊತೆಗೆ ಸಹಕಾರ ನೀಡಬೇಕು, ಯಾವುದೇ ಸುಳ್ಳುಸುದ್ದಿಯನ್ನು ನಂಬಬಾರದು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಡೆಲ್ಟಾ AY 4.2 ರೂಪಾಂತರಿಯಿಂದ ಭಾರತಕ್ಕೆ ಆತಂಕವಿಲ್ಲ
ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸುತ್ತಿರುವುದರಿಂದ ಹೊಸ ಕೇಸುಗಳ ಸಂಖ್ಯೆಯೂ ನಿಧಾನವಾಗಿ ಏರುತ್ತಾ ಬರುತ್ತಿದೆ. ಮುಂಬರುವ ಸಾಲುಸಾಲು ರಜೆ, ಹಬ್ಬದ ಸಂದರ್ಭದಲ್ಲಿ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.
ಚೀನಾ, ರಷ್ಯಾ, ಬೆಲ್ಜಿಯಂ, ಶ್ರೀಲಂಕಾ, ನ್ಯೂಜಿಲ್ಯಾಂಡ್ ಸೇರಿದಂತೆ ಐರೋಪ್ಯ ರಾಷ್ಟಗಳಲ್ಲಿ ಈ ಮಾರಕ ವ್ಯಾಧಿಯು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶ್ವದ ಹಲವು ರಾಷ್ಟ್ರಗಳು ಲಾಕ್ಡೌನ್ ಮೊರೆ ಹೋಗಿವೆ. ಹಾವೇರಿಯಲ್ಲಿ ಡಾ.ಸುಧಾಕರ್ ಹೇಳಿದ್ದೇನು?
ರಾಜ್ಯದಲ್ಲಿ AY 4.2 ಪ್ರಕರಣ: ಮಾರ್ಗಸೂಚಿಗಳ ಕುರಿತು ಚರ್ಚೆ

ವೈರಸ್ ವೇಗವಾಗಿ ಹರಡಲಿದೆ ಎನ್ನುವ ಕೇಂದ್ರ ಆರೋಗ್ಯ ಇಲಾಖೆಯ ಎಚ್ಚರಿಕೆ
ಆಂಧ್ರಪ್ರದೇಶದಲ್ಲಿ 7, ಕೇರಳದಲ್ಲಿ 4, ಕರ್ನಾಟಕದಲ್ಲಿ 2, ತೆಲಂಗಾಣದಲ್ಲಿ 2, ಜಮ್ಮು- ಕಾಶ್ಮೀರ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ಡೆಲ್ಟಾ ರೂಪಾಂತರಿಯ ಉಪ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ. AY 4.2 ರೂಪಾಂತರಿಯಿಂದ ಭಾರತಕ್ಕೆ ಆತಂಕವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು ಕೂಡಾ, ಈ ವೈರಸ್ ವೇಗವಾಗಿ ಹರಡಲಿದೆ ಎನ್ನುವ ಎಚ್ಚರಿಕೆಯನ್ನೂ ಕೇಂದ್ರ ಆರೋಗ್ಯ ಇಲಾಖೆ ನೀಡಿದೆ. ಜೊತೆಗೆ, ಕೊರೊನಾ ಮಾರ್ಗಸೂಚಿಯನ್ನು ನವೆಂಬರ್ ಮೂವತ್ತರವರೆಗೆ ಕೇಂದ್ರ ವಿಸ್ತರಿಸಿದೆ.

ಎರಡೂ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳಲು ಮರೆಯಬಾರದು
ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದಿಷ್ಟು, "ಸಾರ್ವಜನಿಕರು ಸರಕಾರಕ್ಕೆ ಸಹಕಾರವನ್ನು ನೀಡಬೇಕು, ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕು. ಅನಗತ್ಯವಾಗಿ ಯಾರೂ ಆತಂಕಕ್ಕೆ ಒಳಗಾಗಬೇಡಿ. ತಪ್ಪು ಸುದ್ದಿಗಳನ್ನು ಹರಡಿಸುವುದು ನಮ್ಮ ಗಮನಕ್ಕೆ ಬಂದಿದೆ. ಲಾಕ್ಡೌನ್ ಮುಂತಾದ ಯಾವ ಪ್ರಸ್ತಾವನೆಯೂ ಸರಕಾರದ ಮುಂದಿಲ್ಲ. ಆದರೆ, ಎಲ್ಲರೂ ಎರಡೂ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳಲು ಮರೆಯಬಾರದು"ಎಂದು ಸುಧಾಕರ್ ಹೇಳಿದ್ದಾರೆ.

ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ್ ಮಹತ್ವದ ಹೇಳಿಕೆ
"ಜನರು ಲಸಿಕೆ ಹಾಕಿಕೊಂಡು ನೆಮ್ಮದಿಯಿಂದ ಇದ್ದರೆ, ಸರಕಾರಕ್ಕೆ ಕೂಡಾ ಇದರಿಂದ ತೃಪ್ತಿಯಿರುತ್ತದೆ. ಮೊದಲನೇ ಅಲೆಯಿಂದ ಭಯ ಹುಟ್ಟಿಸುವುದನ್ನೇ ಕೆಲವರು ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೀಗಾಗುತ್ತಿರುವುದು ದುರಾದೃಷ್ಟಕರ, ಇಂತಹ ಸಮಯದಲ್ಲಿ ಜನರಿಗೆ ವಿಶ್ವಾಸವನ್ನು ಮೂಡಿಸಬೇಕು. ಯಾರೂ ಅನಾವಶ್ಯಕವಾಗಿ ಸುಳ್ಳುಸುದ್ದಿಯನ್ನು ಹರಡಿಸಿ ಸಮಾಜದ ನೆಮ್ಮದಿಯನ್ನು ಹಾಳು ಮಾಡಬಾರದು ಎಂದು ಮನವಿ ಮಾಡುತ್ತೇನೆ"ಎಂದು ಡಾ.ಸುಧಾಕರ್ ಹೇಳಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್)
ಬೆಂಗಳೂರು ನಗರದಲ್ಲಿ ಕಳೆದ ಎರಡು ದಿನಗಳಿಂದ ಕೊರೊನಾ ಕೇಸುಗಳು ಸ್ವಲ್ಪ ಏರಿಕೆಯನ್ನು ಕಂಡಿದೆ. ಗುರುವಾರ ಒಂದು ದಿನ 1.13ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು, ನಿನ್ನೆ (ಅ 28) 478 ಹೊಸ ಕೇಸುಗಳು ವರದಿಯಾಗಿದೆ. ಡೆಲ್ಟಾ ವೈರಸ್ ಅತ್ಯಂತ ವೇಗವಾಗಿ ಹರಡುವ ಕ್ಷಮತೆ ಇದ್ದರೂ, ಹೆಚ್ಚು ಮಾರಣಾಂತಿಕವಾದಂತೆ ಕಾಣುತ್ತಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಹೇಳಿರುವುದು ನೆಮ್ಮದಿ ತರುವಂತಹ ವಿಚಾರ.