ಕಾಪಾಡಿ.. ಕಾಪಾಡಿ.. ಕಾಫಿನಾಡನ್ನು ಕೊರೊನಾ ಸೋಂಕಿನಿಂದ ಕಾಪಾಡಿ!
ಪ್ರವಾಸಿ ನಾಡು ಎಂದೇ ಕರೆಸಿಕೊಳ್ಳುವ ಕಾಫಿನಾಡು ಚಿಕ್ಕಮಗಳೂರು, ಕೊರೊನಾ ಆಘಾತ ಎದುರಿಸುವಂತಾಗಿದೆ. ಅದರಲ್ಲೂ ಕ್ರೂರಿ ಕೊರೊನಾ ಅಟ್ಟಹಾಸ ಮತ್ತೆ ಜೋರಾಗುತ್ತಿರುವ ಕಾರಣಕ್ಕೆ ಜನ ಹೆದರುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಹೀಗಿದ್ದಾಗ ಪ್ರವಾಸಿಗರ ಪಡೆ ಕೂಡ ಸ್ಥಳೀಯ ನಿವಾಸಿಗಳಿಗೆ ಭಯ ಹುಟ್ಟಿಸುತ್ತಿದೆ. ಯಾಕೆ ಗೊತ್ತಾ? ಮುಂದೆ ಓದಿ.
ದೇಶದಲ್ಲಿ ದಿಢೀರ್ ಕೊರೊನಾ ಆರ್ಭಟ ಹೆಚ್ಚಾಗಿದೆ. ಇನ್ನೇನು ಚಳಿಗಾಲ ನಿಧಾನ ಅಪ್ಪಳಿಸಿದ ಸಮಯದಲ್ಲೇ ಕೊರೊನಾ ಅಬ್ಬರವೂ ಬಲು ಜೋರಾಗುತ್ತಿದೆ. ಈ ಬಾರಿ ದಕ್ಷಿಣ ಭಾರತಕ್ಕೆ ದೊಡ್ಡ ಕಂಟಕ ಎದುರಾಗಿರುವ ಸೂಚನೆ ಸಿಗುತ್ತಿದೆ. ಅದರಲ್ಲೂ ಕೇರಳದಲ್ಲಿ, ಕೊರೊನಾ ಕೇಸ್ ಹೆಚ್ಚಾಗುತ್ತಿರುವ ವೇಗ ಗಮನಿಸಿದ್ರೆ ಕರ್ನಾಟಕಕ್ಕೂ ಸಮಸ್ಯೆ ಗ್ಯಾರಂಟಿ ಎನ್ನುವ ಮಾತು ಕೇಳಿಬರುತ್ತಿವೆ. ಹೀಗಿದ್ದಾಗಲೇ ಪ್ರವಾಸಿಗರ ಸ್ವರ್ಗ ಎನಿಸಿಕೊಳ್ಳುವ ಕಾಫಿನಾಡಿಗೂ ಕಂಟಕ ಎದುರಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

ಕೇರಳದಿಂದ ಬರ್ತಿದೆ ಕೊರೊನಾ!
ಕಾಫಿನಾಡು ಚಿಕ್ಕಮಗಳೂರಿಗೆ ನಿತ್ಯ ಸಾವಿರಾರು ಕೇರಳ ರಾಜ್ಯದ ಜನರು ಬರುತ್ತಿರುವ ಕಾರಣ ಕಾಫಿನಾಡಿನ ಜನ ಆತಂಕದಲ್ಲೇ ಬದುಕುವಂತಾಗಿದೆ. ಪ್ರವಾಸಿಗರು ಹೋಟೆಲ್, ಲಾಡ್ಜ್ ಸೇರಿ ರೆಸಾರ್ಟ್‍ಗಳಲ್ಲಿ ತಂಗುತ್ತಿದ್ದು ಹಲವು ದಿನಗಳ ಕಾಲ ಇಲ್ಲೇ ಇರ್ತಾರೆ. ಹೀಗಿದ್ದಾಗ ಕೊರೊನಾ ಹಬ್ಬುವ ಭೀತಿ ಎದುರಾಗುತ್ತಿದೆ. ಹೀಗಾಗಿ ಕೇರಳದಿಂದ ಬರುವವರಿಗೆ ಕಠಿಣ ನಿಯಮಗಳನ್ನು ಹೇರಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಇಲ್ಲವಾದರೆ ಬೇರೆಯವರಿಗೂ ಸಮಸ್ಯೆ ಪಕ್ಕಾ ಅನ್ನೋದು ಸ್ಥಳೀಯರ ಆಗ್ರಹ.
ಏಜೆನ್ಸಿಗಳ ಮೂಲಕವೂ ಸಮಸ್ಯೆ?
ಈಗ ಸಾಲು ಸಾಲು ರಜೆ ಇದ್ದು, ಕಾಫಿನಾಡಿಗೆ ಭಾರಿ ಪ್ರಮಾಣದಲ್ಲಿ ಪ್ರವಾಸಿಗರು ಬಂದು ಹೋಗುವ ಸಾಧ್ಯತೆ ಇದೆ. ಹೀಗಾಗಿ ಈಗಲೇ ಟಫ್ ರೂಲ್ಸ್ ಅಗತ್ಯ ಅಂತಿದ್ದಾರೆ ಸ್ಥಳೀಯರು. ಅದರಲ್ಲೂ ಏಜೆನ್ಸಿಗಳ ಪ್ಯಾಕೇಜ್ ಮೂಲಕ ನಿತ್ಯ ಕಾಫಿನಾಡಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿರುವುದು ಜಿಲ್ಲೆ ಹಾಗೂ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಏಜೆನ್ಸಿ ಮೂಲಕ ಬರುವ ಕೇರಳ ಪ್ರವಾಸಿಗರು ವಾರಗಟ್ಟಲೆ ಜಿಲ್ಲೆಯಲ್ಲೇ ತಂಗುತ್ತಿದ್ದಾರೆ. ಹೀಗೆ ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣವು ಸೇರಿ ಶೃಂಗೇರಿ, ಹೊರನಾಡು & ಕಳಸ ಮತ್ತಿತರ ಭಾಗಕ್ಕೆ ಹೆಚ್ಚಾಗಿ ಬರ್ತಿದ್ದಾರಂತೆ.

ಇದು ಈಗಿನ ಕಥೆಯಾದರೆ ಮುಂದಿನ ಕೆಲವೇ ದಿನದಲ್ಲಿ ಸಾಲು ಸಾಲು ರಜೆಗಳು ಬರಲಿವೆ. ಹೀಗಾಗಿ ಕೇರಳ ಮೂಲದಿಂದ ಮತ್ತಷ್ಟು ಪ್ರವಾಸಿಗರು ಬರುವ ನಿರೀಕ್ಷೆ ಇದೆ. ಹೀಗೆ ಭಾರಿ ಪ್ರಮಾಣದಲ್ಲಿ ಜನರು ಬಂದು ಹೋದರೆ, ಅದರಲ್ಲೂ ಕೊರೊನಾ ಸೋಂಕು ಹೆಚ್ಚಾಗ್ತಿರುವ ಕೇರಳದಿಂದ ಪ್ರವಾಸಿಗರು ಬಂದರೆ ಸಮಸ್ಯೆ ಕಟ್ಟಿಟ್ಟಬುತ್ತಿ. ಹೀಗಾಗಿ ಕೂಡಲೇ ಕ್ರಮಕ್ಕಾಗಿ ಚಿಕ್ಕಮಗಳೂರಿನ ಸ್ಥಳೀಯರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.












Click it and Unblock the Notifications