ಕರ್ನಾಟಕದಲ್ಲಿ ಶೇ.60% ಗಡಿ ದಾಟಿದ ಭ್ರಷ್ಟಾಚಾರ: ಉಪ ಲೋಕಾಯುಕ್ತರ ಸ್ಫೋಟಕ ಹೇಳಿಕೆ!
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿಚಾರ ಅತೀ ಹೆಚ್ಚು ಚರ್ಚೆ ಆಗಿದೆ. 10 /15 ಪರ್ಸೆಂಟ್‌ನಿಂದ 40% ವರೆಗೆ ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ವಿಚಾರವು ಭಾರೀ ಚರ್ಚೆ ಆಗಿದೆ. ಆದರೆ ಇದು ಕೇವಲ ಆರೋಪ ಮಾತ್ರವಲ್ಲ ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಲೋಕಾಯುಕ್ತ ಹೇಳಿದೆ. ಅಲ್ಲದೇ ಕರ್ನಾಟಕಕ್ಕೆ ಹೋಲಿಕೆ ಮಾಡಿದರೆ ಕೇರಳದಲ್ಲಿ ಭ್ರಷ್ಟಾಚಾರ ಏನೇನು ಅಲ್ಲ ಅಂತಲೂ ಹೇಳಲಾಗಿದೆ. ಇಷ್ಟಕ್ಕೂ ಕರ್ನಾಟಕದಲ್ಲಿ ಈಗ ಭ್ರಷ್ಟಾಚಾರ ಪ್ರಮಾಣ ಎಷ್ಟಿದೆ, ಯಾಕೆ ಈ ಚರ್ಚೆ ಎನ್ನುವ ವಿವರ ನೋಡೋಣ.
ಕರ್ನಾಟಕದಲ್ಲಿ ಶೇ. 50% ಕ್ಕಿಂತ ಹೆಚ್ಚು ಭ್ರಷ್ಟಾಚಾರ ಇದೆ. ಆದರೆ ನೆರೆಯ ರಾಜ್ಯಗಳಲ್ಲಿ ಭ್ರಷ್ಟಾಚಾರ ತೀರ ಕಡಿಮೆ ಇದೆ ಎಂದು ಲೋಕಾಯುಕ್ತ ಹೇಳಿದೆ. ಇದನ್ನೇ ಇದೀಗ ವಿರೋಧ ಪಕ್ಷಗಳು ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಮುಖ್ಯ ಕಾರಣಗಳಲ್ಲಿ ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿಯು ಶೇ 40% ಭ್ರಷ್ಟಾಚಾರ / ಕಮಿಷನ್ ತೆಗೆದುಕೊಳ್ಳುತ್ತಿತ್ತು ಎನ್ನುವ ಗಂಭೀರ ಆರೋಪವೂ ಒಂದಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರವೇ ಮಿತಿ ಮೀರಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎನ್ನುವ ಗಂಭೀರವಾದ ಆರೋಪ ಇದೀಗ ಕೇಳಿ ಬಂದಿದೆ.

ಕರ್ನಾಟಕದಲ್ಲಿ ಶೇ 63ರಷ್ಟು ಭ್ರಷ್ಟಾಚಾರ ಇದೆ. ಆದರೆ ಕೇರಳದಲ್ಲಿ ಶೇ 10ರಷ್ಟು ಮಾತ್ರವೇ ಭ್ರಷ್ಟಾಚಾರ ಇದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಹೇಳಿದ್ದಾರೆ. ನಾನು ಉಪ ಲೋಕಾಯುಕ್ತ ಆದ ಮೇಲೆ ಇದನ್ನೆಲ್ಲಾ ಕಣ್ಣಾರೆ ನೋಡುವ ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. ಕರ್ನಾಟಕ ಭ್ರಷ್ಟಾಚಾರದ ಅಗ್ರಪಟ್ಟಿಯಲ್ಲಿ ಐದನೆಯ ಸ್ಥಾನದಲ್ಲಿದೆ ಈ ಪಿಡುಗನ್ನು ಈಗಲೇ ತಡೆಯದಿದ್ದರೆ ಭವಿಷ್ಯದಲ್ಲಿ ಭೀಕರ ಅಪಾಯ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಿರೋಧ ಪಕ್ಷಗಳ ಟೀಕೆ
ಇನ್ನು ವಿರೋಧ ಪಕ್ಷಗಳು ಉಪ ಲೋಕಾಯುಕ್ತ ಅವರ ಹೇಳಿಕೆಯನ್ನು ಉಲ್ಲೇಖಿಸಿ ತೀವ್ರ ತರಾಟೆಗೆ ತೆಗೆದುಕೊಂಡಿವೆ. ಕನ್ನಡಿಗರು ಕಷ್ಟಪಟ್ಟು ಕಟ್ಟಿದ ತೆರಿಗೆ ಹಣ ರಾಜ್ಯದ ಅಭಿವೃದ್ಧಿಗೆ ಬಳಕೆಯಾಗುವ ಬದಲು, ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನ ಐಷಾರಾಮಿ ಜೀವನಕ್ಕೆ ಬಳಕೆಯಾಗುತ್ತಿದೆ. ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ಕರ್ನಾಟಕ ಕಾಂಗ್ರೆಸ್ ಟೋಪಿ ಹಾಕಿ, 63% ಭ್ರಷ್ಟಾಚಾರದ ಮೂಲಕ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಸಲ್ಲಿಸುವುದೇ ಈ ಸರ್ಕಾರದ ಏಕೈಕ ಅಜೆಂಡಾ! ಇದು ಕರ್ನಾಟಕವೋ ಅಥವಾ ಕಾಂಗ್ರೆಸ್‌ನ ಎಟಿಎಂ ಮಷೀನೋ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಲೂಟಿ ಸೆಂಟರ್ ಮಾಡಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ 63 ಪರ್ಸೆಂಟ್ ಭ್ರಷ್ಟಾಚಾರ ನಡೆಸುತ್ತಿದೆ. ವಚನ ಭ್ರಷ್ಟ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ಕಾರಣದಿಂದ ಪ್ರತಿಯೊಂದು ಇಲಾಖೆಯಲ್ಲೂ 63% ಕಮಿಷನ್ ಪಡೆಯಲಾಗುತ್ತಿದೆ.
ಉಪ ಲೋಕಾಯುಕ್ತ ನ್ಯಾ.ವೀರಪ್ಪ ಅವರೇ, ಕರ್ನಾಟಕದಲ್ಲಿ 63% ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಈ ಕೂಡಲೇ ಸಿದ್ದರಾಮಯ್ಯನವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕಿದೆ ಎಂದು ಬಿಜೆಪಿ ಆಗ್ರಹಿಸಿದೆ.












Click it and Unblock the Notifications