ಚುನಾವಣಾ ಆಯೋಗದಿಂದ ಡಿ.ಕೆ. ಶಿವಕುಮಾರ್‌ಗೆ ನೋಟಿಸ್; ಸಾಕ್ಷ್ಯ ಒದಗಿಸಲು ಸೂಚನೆ
ಬೆಂಗಳೂರು, ಮೇ 6: ಬಿಜೆಪಿ ಸರ್ಕಾರ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಪತ್ರಿಕೆಗಳಲ್ಲಿ ಜಾಹೀರಾತು ಹಾಕಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಚುನಾವಣಾ ಆಯೋಗವು ನೋಟಿಸ್ ಜಾರಿ ಮಾಡಿದೆ.
ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ನೈಜ ಸಾಕ್ಷ್ಯಗಳನ್ನು ಮೇ 7ರ ಸಂಜೆ 7 ಗಂಟೆಯೊಳಗೆ ಒದಗಿಸುವಂತೆ ಡಿ.ಕೆ. ಶಿವಕುಮಾರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ.

ಯಾವುದೇ ಸರ್ಕಾರದ ನೀತಿಯ ಬಗ್ಗೆ ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಪತ್ರಿಕಾ ಜಾಹೀರಾತಿನಲ್ಲಿರುವುದು ಸಾಧಾರಣ ಆರೋಪಗಳಲ್ಲ. ಸರ್ಕಾರದ ಆಡಳಿತ ಯಂತ್ರದ ಮೇಲೆ ನಿರ್ದಿಷ್ಟವಾಗಿ ಆರೋಪಿಸಲಾಗಿದೆ. ಇದು ಚುನಾವಣೆ ಮೇಲೂ ಪರಿಣಾಮ ಬೀರುವಂತಹದ್ದಾಗಿದೆ.
ಜಾಹೀರಾತು ಗಮನಿಸಿದರೆ ಕಾಂಗ್ರೆಸ್ ಪಕ್ಷದ ಬಳಿ ಅಗತ್ಯ ಪುರಾವೆಗಳಿರಬೇಕು. ಹೀಗಾಗಿ ಭಾನುವಾರ ಸಂಜೆ 7 ಗಂಟೆಯೊಳಗೆ ಸೂಕ್ತ ಸಾಕ್ಷ್ಯ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಚುನಾವಣಾ ಆಯೋಗವು ಸೂಚನೆ ನೀಡಿದೆ.
ಡಿಕೆ ಶಿವಕುಮಾರ್, ಸಿದ್ದರಾಮಯ್ಯಗೆ ಬಿಜೆಪಿಯಿಂದ ಲೀಗಲ್ ನೋಟಿಸ್
ಕಾಂಗ್ರೆಸ್ ಪಕ್ಷದ ವತಿಯಿಂದದ ಬಿಜೆಪಿ ಸರ್ಕಾರದ ಕುರಿತು ಅವಹೇಳನಕಾರಿ ಜಾಹೀರಾತು ನೀಡಿದ್ದ ಆರೋಪ ಹಿನ್ನೆಲೆ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ಕ್ರಿಮಿನಲ್ ಮಾನಹಾನಿ ಲೀಗಲ್ ನೋಟೀಸ್ ಜಾರಿ ಮಾಡಿದೆ.

ಸೋಮವಾರದೊಳಗೆ ತಮ್ಮ ಜಾಹೀರಾತನ್ನು ಹಿಂಪಡೆದು ಕ್ಷಮೆ ಕೋರಬೇಕು, ಇಲ್ಲವಾದರೆ ಮಾನಹಾನಿ ಪ್ರಕರಣ ಹೂಡುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರ ವಿರುದ್ಧ ಜಾಹೀರಾತಿನಲ್ಲಿ ಮಾಡಿದ ಆರೋಪಗಳು ಆಧಾರ ರಹಿತವಾದದ್ದು. ಹೀಗಾಗಿ ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿ ದೂರು ನೀಡಿತ್ತು.
ಪತ್ರಿಕಾ ಜಾಹೀರಾತಿನಲ್ಲಿ ಬಿಜೆಪಿ ಸರ್ಕಾರವನ್ನು ಟ್ರಬಲ್ ಎಂಜಿನ್ ಸರ್ಕಾರ, 40 ಪರ್ಸೆಂಟ್ ಸರ್ಕಾರ ಎಂದೆಲ್ಲಾ ಉಲ್ಲೇಖಿಸಿದ್ದು, ನೇಮಕಾತಿ, ವರ್ಗಾವಣೆ, ಹುದ್ದೆಗಳಿಗೆ ಒಂದೊಂದು ದರ ಫಿಕ್ಸ್ ಮಾಡಿ ಕಾಂಗ್ರೆಸ್ ಪಕ್ಷದ ವತಿಯಿಂದ ರೇಟ್ ಕಾರ್ಡ್ ಜಾಹೀರಾತು ಪ್ರಕಟಿಸಿತ್ತು. ಇದರ ವಿರುದ್ಧ ಸೂಕ್ತ ಕ್ರಮಕ್ಕೆ ದೂರಿನಲ್ಲಿ ಬಿಜೆಪಿ ಒತ್ತಾಯಿಸಿದೆ.












Click it and Unblock the Notifications